ಮಂಗಳೂರು: ಚೀನದಿಂದ ಲೆಬನಾನ್‌ಗೆ 8 ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ವೇಳೆ ಉಳ್ಳಾಲದ ಬಟ್ಟಪಾಡಿ ಬಳಿ ಮುಳುಗಿ ಮಾಲಿನ್ಯದ ಭಯ ಮೂಡಿಸಿದ್ದ ಪ್ರಿನ್ಸೆಸ್ ಮಿರಾಲ್ ಹಡಗಿನಿಂದ ತೈಲ ಹೊರತೆಗೆಯುವ ಕಾರ್ಯ ಕೊನೆಗೂ ಸೋಮವಾರ ಆರಂಭಗೊಂಡಿದೆ.
ಗುಜರಾತ್ ಮೂಲದ ಬನ್ಸಲ್ ಎಂಡೆವರ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಹಲವು ದಿನಗಳಿಂದ ಸಿದ್ಧತೆ ನಡೆಯುತ್ತಿತ್ತು. ಸೋಮವಾರ ಸಂಜೆ ವೇಳೆಗೆ ಸುಮಾರು 30 ಟನ್ ಡೀಸೆಲ್ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.
2021ರ ಜೂನ್ 21ರಂದು ಈ ಹಗಡು ಅಪಾಯಕ್ಕೆ ಸಿಲುಕಿತ್ತು. ರಂಧ್ರ ಕಾಣಿಸಿಕೊಂಡು ನೀರು ಒಳಸೇರಲಾರಂಭಿಸಿದಾಗ ಅದರಲ್ಲಿದ್ದ 15 ಸಿರಿಯನ್ ನಾವಿಕರನ್ನು ಕೋಸ್ಟ್‌ಗಾರ್ಡ್ ರಕ್ಷಿಸಿತ್ತು. ಬಳಿಕ ಹಡಗಿನ ತಳವು ನೆಲಕ್ಕೆ ತಾಗಿ ಚಲಿಸುವ ಯಾವುದೇ ಸಾಧ್ಯತೆ ಇಲ್ಲದೆ ಮುಕ್ಕಾಲು ಭಾಗ ಮುಳುಗಿದ ಸ್ಥಿತಿಯಲ್ಲಿ ನಿಂತಿದೆ. 160 ಟನ್ ಫರ್ನೆಸ್ ಆಯಿಲ್, 60 ಟನ್ ಡೀಸೆಲ್ ಸೇರಿದಂತೆ 220 ಟನ್ ತೈಲ ಇದರಲ್ಲಿದೆ.
ಬಾರ್ಜ್ ಆಗಮನ
ತಜ್ಞರ ತಂಡ ಮಂಗಳೂರಿಗೆ ಆಗಮಿಸಿ ಕಳೆದ ಒಂದು ವಾರಗಳಿಂದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೋಸ್‌ಪೈಪ್ ಅಳವಡಿಸಿ ವ್ಯಾಕ್ಯೂಂ ಪಂಪ್ ಮೂಲಕ ತೈಲವನ್ನು ಹೊರಕ್ಕೆಳೆಯುವುದು ಸದ್ಯದ ಮಾರ್ಗ. ಅದಕ್ಕಾಗಿ 320 ಟನ್ ಸಾಮರ್ಥ್ಯದ ಬಂಕರ್ ಬಾರ್ಜ್ ಕೂಡ ಸಿದ್ಧವಾಗಿದ್ದು, ತೈಲವನ್ನು ಅದಕ್ಕೆ ಪೂರ್ಣ ವರ್ಗಾಯಿಸಿ ಹಳೆಬಂದರಿಗೆ ತರಲಾಗುವುದು. ಅಲ್ಲಿಂದ ಅದನ್ನು ಪುನರ್ಬಳಕೆ ಉದ್ದೇಶಗಳಿಗಾಗಿ ಸೂಕ್ತ ಕಡೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರ ಅನುಮತಿ ಇರುವ ವಾಹನದಲ್ಲಿ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
Related Articles
ತೈಲ ತೆರವು ಮಾತ್ರ
ಮುಳುಗಿದ ಹಡಗಿನ ತೆರವಿಗೆ ಬೇರೆ ಬೇರೆ ಪ್ರಕ್ರಿಯೆಗಳು ನಡೆಯುತ್ತಿದ್ದವು. ಆ ನಡುವೆ ಅಕ್ಟೋಬರ್‌ನಲ್ಲಿ ಯುಎಇಗೆ ಸೇರಿದ ಮೊಂಜಾಸಾ ಡಿಎಂಸಿಸಿ ಎಂಬ ಕಂಪೆನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತನಗೆ ಶಿಪ್ ಬಂಕರಿಂಗ್ (ತೈಲ ಪೂರೈಕೆ) ಕಾರ್ಯಕ್ಕಾಗಿ ಬರಬೇಕಾದ 1,71,301 ಅಮೆರಿಕನ್ ಡಾಲರ್ (ಸುಮಾರು 1.39 ಕೋಟಿ ರೂ.) ಮೊತ್ತ ಬಂದಿಲ್ಲ, ಅದು ಬರುವ ವರೆಗೆ ಈಹಡಗನ್ನು ತಡೆಹಿಡಿಯುವಂತೆ ಕೋರಿತ್ತು. ಅದನ್ನು ಹೈಕೋರ್ಟ್ ಮಾನ್ಯ ಮಾಡಿತ್ತು. ಬಳಿಕ ಜಿಲ್ಲಾಡಳಿತವು ಹೈಕೋರ್ಟ್‌ಗೆ ಪರಿಸರಮಾಲಿನ್ಯ ಭೀತಿ ಇರುವುದರಿಂದ ತೈಲ ತೆರವಿಗೆ ಅರ್ಜಿ ಸಲ್ಲಿಸಿದ್ದು, ಅನುಮತಿ ಸಿಕ್ಕಿದೆ. ತೈಲ ತೆರವಿನ ಬಳಿಕ ಅದರಲ್ಲಿರುವ ಸ್ಟೀಲ್ ಕಾಯಿಲ್, ಕೊನೆಯಲ್ಲಿ ಹಡಗನ್ನೂ ತೆರವು ಮಾಡುವುದು ಜಿಲ್ಲಾಡಳಿತದ ಉದ್ದೇಶ.
ಐದು ಬಾರಿ ಸಭೆ ನಡೆಸಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತೈಲ ತೆರವಿನ ಪ್ರಕ್ರಿಯೆ ಆರಂಭಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ಮತ್ತು ಕೋಸ್ಟ್‌ಗಾರ್ಡ್‌ನಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಎಲ್ಲವನ್ನೂ ಪಡೆದುಕೊಳ್ಳಲಾಗಿದೆ. ಇನ್ನೂ ಸುಮಾರು 15 ದಿನ ಇದಕ್ಕೆ ತಗಲಬಹುದು.
– ರವಿಕುಮಾರ್ ಎಂ.ಆರ್.,
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ