Advertisement

ಐಸಿಸ್‌ ಸಂಪರ್ಕ: ಮೂವರ ಬಂಧನ ಪ್ರಕರಣ…ಕಾರು, ಹೊಟೇಲ್‌ ಮೇಲೂ ಬಾಂಬ್‌ ಎಸೆದಿದ್ದರು!

11:38 PM Feb 07, 2023 | Team Udayavani |

ಮಂಗಳೂರು: ಕುಕ್ಕರ್‌ ಬಾಂಬ್‌ ಪ್ರಕರಣದಲ್ಲಿ ಬಂಧಿತರಾದ ಶಾರಿಕ್‌ ಹಾಗೂ ರಿಷಾನ್‌ ಈ ಪ್ರಕರಣಕ್ಕಿಂತ ಮೊದಲು ಕಾರು, ಹೊಟೇಲ್‌ ಮೇಲೂ ತಾವು ಸಿದ್ಧಪಡಿಸಿದ ಬಾಂಬ್‌ ಎಸೆದು ತಮ್ಮ ಸಾಮರ್ಥ್ಯವನ್ನು ಪರಿಶೀಲಿಸಿದ್ದರು!

Advertisement

ಇಂಥ ಆಘಾತಕಾರಿ ಮಾಹಿತಿ ತನಿಖೆ ಸಂದರ್ಭ ಬಯಲಾಗಿದೆ.

ಐಸಿಸ್‌ ಜತೆ ಸಂಪರ್ಕದ ಶಂಕೆಯಲ್ಲಿ ರಾಷ್ಟ್ರೀಯ ತನಿಖಾ ದಳದವರು ಶಾರಿಕ್‌, ರಿಷಾನ್‌ ಹಾಗೂ ಮಾಝ್ ಮುನೀರ್‌ ಅವರನ್ನು ನಾಲ್ಕು ತಿಂಗಳ ಹಿಂದೆ ಬಂಧಿಸಿದ್ದಾರೆ. ಇವರೆಲ್ಲರೂ ಮಂಗಳೂರಿನಲ್ಲಿ ಕಲಿಯುತ್ತಿದ್ದು, ಆ ಸಂದರ್ಭದಲ್ಲೇ ಯಾರ ಗಮನಕ್ಕೂ ಬಾರದಂತೆ ತಮ್ಮ ಕುಕೃತ್ಯ ದಲ್ಲಿ ತೊಡಗಿದ್ದರು.

ಕಳೆದ ನವೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ಬಂಧಿತನಾದ ಮಾಝ್ ಮುನೀರ್‌, ಆತನೊಂದಿಗೆ ನೇರವಾಗಿ ಸಂಪರ್ಕದಲ್ಲಿದ್ದು ಮೂಲಭೂತವಾದಿಯಾಗಿದ್ದ ಉಡುಪಿಯ ರಿಷಾನ್‌ ತಾಜುದ್ದೀನ್‌ ಶೇಖ್‌ ಹಾಗೂ ಬೆಂಗಳೂರಿನಲ್ಲಿ ಬಂಧಿತನಾದ ತೊಕ್ಕೊಟ್ಟು ಬಬ್ಬುಕಟ್ಟೆಯ ಮಾಝಿನ್‌ ಅಬ್ದುಲ್‌ ರಹಮಾನ್‌ ಮೂವರೂ ವಿದ್ಯಾರ್ಥಿಯಾಗಿದ್ದಾಗಲೇ ಕೆಲವು ಮೂಲಭೂತವಾದಿಗಳ ಸಂಪರ್ಕಕ್ಕೊಳಪಟ್ಟಿದ್ದರು.

ಕಾರು, ಹೊಟೇಲ್‌ಗೆ ಬಾಂಬ್‌ !
ವಿಚಾರಣೆ ವೇಳೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಶಾರಿಕ್‌ ಹಾಗೂ ರಿಷಾನ್‌ ಇಬ್ಬರೂ ಮಂಗಳೂರು, ಉಡುಪಿಯ ವಿವಿಧೆಡೆ ಕಾರು, ಹೊಟೇಲ್‌, ಟ್ರಾನ್ಸ್‌ ಫಾರ್ಮರ್‌ ಮುಂತಾದೆಡೆ ಪೆಟ್ರೋಲ್‌ ಬಾಂಬ್‌ ಎಸೆದಿದ್ದರು. ತಮ್ಮ ಕ್ಷಮತೆ ಹಾಗೂ ಸಾಮರ್ಥ್ಯವನ್ನು ತಮ್ಮ ಹ್ಯಾಂಡ್ಲರ್‌ಗಳಿಗೆ ರುಜುವಾತು ಪಡಿಸಲು ಇದು ಮಾಡಿದ್ದಾಗಿತ್ತು. ಆ ಬಳಿಕ ಅದರ ವೀಡಿಯೋವನ್ನೂ ಕಳುಹಿಸಿರುವುದು ಗೊತ್ತಾಗಿದೆ.

Advertisement

ಆರು ತಿಂಗಳ ಹಿಂದೆ ಈ ಕೃತ್ಯ ನಡೆಸಿರುವ ಸಾಧ್ಯತೆಯಿದ್ದು, ಯಾರೂ ಇಲ್ಲದ ವೇಳೆಯಲ್ಲಿ ಪ್ರಯೋಗ ನಡೆಸಿದ್ದರಿಂದ ಯಾರಲ್ಲೂ ಅನುಮಾನ ಹುಟ್ಟಿಸಿರಲಿಲ್ಲ. ವಿಮೆ ಪರಿಹಾರ ಪಡೆಯಲು ಸಮಸ್ಯೆಯಾದೀತೆಂದು ಕಾರಿನ ಮಾಲಕರೂ ಪೊಲೀಸರಿಗೆ ದೂರು ನೀಡಿರಲಿಲ್ಲ ಎನ್ನಲಾಗಿದೆ.

ಆನ್‌ಲೈನ್‌ ಖರೀದಿ
ಇವರೆಲ್ಲರೂ ಕಾಲೇಜೂ ಸೇರಿದಂತೆ ಎಲ್ಲೂ ಸಹ ಯಾರಿಗೂ ಅನುಮಾನ ಬಾರದಂತೆ ಕುಕೃತ್ಯದಲ್ಲಿ ತೊಡಗಿದ್ದರು. ಇದಕ್ಕೆ ಪೂರಕ ವೆಂಬಂತೆ ಎನ್‌ಐಎ ಅಧಿಕಾರಿಗಳು ನೇರವಾಗಿ ಕಾಲೇಜಿಗೆ ದಾಳಿ ನಡೆಸಿ ರಿಷಾನ್‌ ಅನ್ನು ಬಂಧಿಸಿದಾಗಲೇ ಆತ ಉಗ್ರರ ಜತೆ ಸಂಪರ್ಕದಲ್ಲಿದ್ದಾನೆ ಎಂಬುದು ತಿಳಿದಿತ್ತು. ಆತ ತಂಗಿದ್ದ ಹಾಸ್ಟೆಲ್‌ ಮತ್ತಿತರ ಕಡೆಯಿಂದಲೂ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿತ್ತು. ಲಭ್ಯ ಮಾಹಿತಿ ಪ್ರಕಾರ ರಿಷಾನ್‌ ಆನ್‌ಲೈನ್‌ ಮೂಲಕ ಸ್ಫೋಟಕ ತಯಾರಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ತರಿಸಿ ತಂಡದ ಇತರರಿಗೆ ಪೂರೈಸುತ್ತಿದ್ದ. ರಿಷಾನ್‌ಶೇಖ್‌ಗೆ ಕ್ರಿಪ್ಟೊ ವ್ಯಾಲೆಟ್‌ ಮೂಲಕ ಅವರ ಐಸಿಸ್‌ ಹ್ಯಾಂಡ್ಲರ್‌ಗಳು ಅಪಾರ ಪ್ರಮಾಣದ ಹಣವನ್ನು ಪಾವತಿಸುತ್ತಿದ್ದರು ಎನ್ನಲಾಗಿದೆ.

ಪಾಕಿಸ್ಥಾನಕ್ಕೆ ಕರೆಗಳು
ಶಾರಿಕ್‌ ಹಾಗೂ ಮಾಝ್ ಮುನೀರ್‌ ಇಬ್ಬರ ಫೋನ್‌ನಿಂದಲೂ ಪಾಕಿಸ್ಥಾನಕ್ಕೆ (ಕಂಟ್ರಿ ಕೋಡ್‌ 92) ಕರೆಗಳು ಹೋಗಿ ರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಗುಪ್ತಚರ ಮೂಲಗಳ ಪ್ರಕಾರ ಮಾಝ್ ಕಟ್ಟಾ ಮೂಲಭೂತವಾದಿಯಾಗಿದ್ದು, ಬಂಧಿತನಾದ ಬಳಿಕ ತನಿಖೆ ವೇಳೆ ಸರಿ ಯಾಗಿ ಸ್ಪಂದಿಸುತ್ತಿರಲಿಲ್ಲ. ಆತನಿಂದ 30 ಟಿಬಿಯಷ್ಟು ಭಾರೀ ಪ್ರಮಾಣದ ಐಸಿಸ್‌ ವೀಡಿಯೋ, ಫೋಟೋ ಮತ್ತಿತರ ಸಾಮಗ್ರಿಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಮಾಝ್ ಮುನೀರ್‌, ಶಾರಿಕ್‌ ಮತ್ತಿತರು ಮಧ್ಯಪ್ರಾಚ್ಯದಲ್ಲಿರುವ ತಮ್ಮ ಹ್ಯಾಂಡ್ಲರ್‌, ಮೂಲತಃ ತೀರ್ಥಹಳ್ಳಿಯವನೇ ಆಗಿರುವ ಅರಾಫತ್‌ ಜತೆ ಸಿಗ್ನಲ್‌ ಆ್ಯಪ್‌ ಬಳಸಿ ಸಂಪರ್ಕ ಸಾಧಿಸುತ್ತಿದ್ದರು. ತಮ್ಮೆಲ್ಲಾ ಬ್ರೌಸಿಂಗ್‌ಗೆ ಟೋರ್‌ ಬ್ರೌಸರ್‌ ಬಳಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

– ವೇಣುವಿನೋದ್‌ ಕೆ.ಎಸ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next