Advertisement

Mangaluru; ವಸತಿ ನಿಲಯಗಳಲ್ಲಿ ನಿಯಮ ಪಾಲನೆ ಕಡ್ಡಾಯ: ಡಿಎಚ್‌ಒ

01:27 AM Feb 13, 2024 | Team Udayavani |

ಮಂಗಳೂರು: ವಸತಿನಿಲಯಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಸಮಸ್ಯೆ ನಿರಂತರ ಕಾಣಿಸಿಕೊಳ್ಳುತ್ತಿದ್ದು ಇವುಗಳನ್ನು ತಡೆಗಟ್ಟಲು ಎಲ್ಲ ವಸತಿ ನಿಲಯದವರು ಹಾಗೂ ಬಿಸಿಯೂಟ ನೀಡುವ ಶಾಲೆಗಳು ಸುರಕ್ಷಾ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ಅವುಗಳ ಕ್ರಮಗಳನ್ನು ವಸತಿ ಮುಖ್ಯಸ್ಥರು ವಸತಿನಿಲಯಗಳಲ್ಲಿ ಕಡ್ಡಾಯವಾಗಿ ಅಳವಡಿಸಿ ಅನುಷ್ಠಾನ ಮಾಡಬೇಕು. 2 ದಿನಗಳಲ್ಲಿ ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್‌.ಆರ್‌. ತಿಮ್ಮಯ್ಯ ಹೇಳಿದರು.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವಳಚ್ಚಿಲ್‌ನ ಖಾಸಗಿ ಕಾಲೇಜಿನ 45 ವಿದ್ಯಾರ್ಥಿಗಳಿಗೆ ಆಹಾರ ಸೇವಿಸಿದ ಅನಂತರ ಅನಾರೋಗ್ಯ ಕಂಡುಬಂದಿತ್ತು. ತಕ್ಷಣವೇ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿ ನೀರು, ಆಹಾರ ಪದಾರ್ಥಗಳನ್ನು ಪರೀಕ್ಷೆ ನಡೆಸಿದೆ. ಅಲ್ಲಿನ ಕಿಚನ್‌ ಬಂದ್‌ ಮಾಡಲಾಗಿದೆ. ಆಹಾರದ ಪರೀಕ್ಷೆಗಾಗಿ ಮೈಸೂರಿಗೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹಲವು ಬಾರಿ ಎಚ್ಚರಿಕೆ ನೀಡಿದರೂ ಇಂತಹ ಘಟನೆಗಳು ಮರುಕಳಿಸುತ್ತಿವೆ. ಅನೇಕರು ನಿಯಮ ಉಲ್ಲಂಘಿಸುತ್ತಿರುವುದು ಹಾಗೂ ಸುರಕ್ಷಾ ಕ್ರಮ ವಹಿಸದೇ ಇರುವುದು ಗೊತ್ತಾಗುತ್ತಿದೆ. ವಿದ್ಯಾರ್ಥಿನಿಲಯಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ನಿಗಾವಣೆಗೆ ಒಪ್ಪಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ನಿಯಮ ಬಾಹಿರವಾಗಿ ನಡೆಸಲಾಗುತ್ತಿರುವ ವಸತಿ ನಿಲಯಗಳು, ಆಹಾರ ತಯಾರಿಕಾ ಕೇಂದ್ರಗಳ ವಿರುದ್ಧ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಡಿಯಲ್ಲಿ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯಿದೆ 1997 ಪರಿಷ್ಕೃತ ನಿಯಮ 2020ರ ಅಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ನೀರಿನ ಟ್ಯಾಂಕ್‌ಗಳನ್ನು ಮೂರು ತಿಂಗಳಿಗೊಮ್ಮೆ ಸ್ವತ್ಛ ಮಾಡಬೇಕು. ನೀರಿನ ಶುದ್ಧೀಕರಣ ಯಂತ್ರಗಳನ್ನು ಅಳವಡಿಕೆ ಮಾಡಿ ಕಾಲಕ್ಕೆ ಸರಿಯಾಗಿ ಸರ್ವಿಸ್‌ ಮಾಡಬೇಕು. 6 ತಿಂಗಳಿಗೊಮ್ಮೆ ನೀರಿನ ಪರೀಕ್ಷೆ ನಡೆಸಬೇಕು. ಆಡುಗೆಗೆ ಹಾಗೂ ಕುಡಿಯಲು ಬಳಸುವ ನೀರು ಶುದ್ಧವಾಗಿರಬೇಕು. ಕುದಿಸಿ ಆರಿಸಿದ ನೀರನ್ನೇ ನಿಲಯಗಳಲ್ಲಿ ಕುಡಿಯಲು ಪೂರೈಸಬೇಕು. ಸದ್ಯ ಬಿಸಿಲು ಹೆಚ್ಚಿರುವುದ್ದರಿಂದ ಎಲ್ಲರೂ ಕುದಿಸಿದ ನೀರು, ಮಜ್ಜಿಗೆ ಹಾಗೂ ದ್ರವ ರೂಪದ ಆಹಾರವನ್ನು ಹೆಚ್ಚಾಗಿ ಸ್ವೀಕರಿಸಬೇಕು. ಸುರಕ್ಷತೆ ದೃಷ್ಟಿಯಿಂದ ಮಂಗಳವಾರ ಎಲ್ಲಾ ನಿಲಯಪಾಲಕರ ಸಭೆ ಕರೆದಿದ್ದೇವೆ ಎಂದರು.

ಅನುಮತಿ ಕಡ್ಡಾಯ!
ಎಲ್ಲ ವಸತಿ ನಿಲಯಗಳು, ಪೆಯಿಂಗ್‌ ಗೆಸ್ಟ್‌ ಗಳಲ್ಲಿ ಅಥವಾ ವಸತಿ ನಿಲಯ ಶಾಲೆಗಳಿಗೆ ಆಹಾರ ಪೂರೈಸುವ ಸಂಸ್ಥೆಗಳು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಪರವಾನಿಗೆ ಪಡೆಯಬೇಕು. ಬಿಸಿಯೂಟ ತಯಾರಿಸುವ ಪ್ರತೀ ಅಂಗನವಾಡಿ ಕೇಂದ್ರಗಳು, ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ| ಪ್ರವೀಣ್‌ ಕುಮಾರ್‌ ಹೇಳಿದರು.

Advertisement

ಕಳೆದವಾರ ವಸತಿನಿಲಯಗಳಲ್ಲಿ ಆದ ಪ್ರಕರಣಗಳು ಮಾರಣಾಂತಿಕ ಸಮಸ್ಯೆಯಾಗದ ಹಿನ್ನೆಲೆ ದೂರು ದಾಖಲಿಸದೆ ನೊಟೀಸ್‌ ನೀಡಿದ್ದೇವೆ. ಕಳೆದ ವರ್ಷ ಮಂಗಳೂರಿನ ಖಾಸಗಿ ಸಂಸ್ಥೆಯ ಹಾಸ್ಟೆಲ್‌ನಲ್ಲಿ ನಡೆದ ಪ್ರಕರಣ ಸ್ವಲ್ಪ ಗಂಭೀರ ಸ್ವರೂಪದ್ದಾಗಿತ್ತು. ಆ ಸಂದರ್ಭದಲ್ಲಿ ಕೇಸ್‌ ದಾಖಲಾಗಿದ್ದು ಪ್ರಕರಣ
ಕೋರ್ಟ್‌ನಲ್ಲಿ ತನಿಖಾ ಹಂತದಲ್ಲಿದೆ ಎಂದು ಅವರು ತಿಳಿಸಿದರು.

ಅಡುಗೆ ಕೋಣೆ ಶುಚಿಯಾಗಿಡಿ,
ಇಲಿ ಹೆಗ್ಗಣಗಳನ್ನು ದೂರವಿಡಿ!
ಹಾಸ್ಟೆಲ್‌ಗ‌ಳ ಅಡುಗೆ ಕೋಣೆಗೆ ಅಪರಿಚಿತ ವ್ಯಕ್ತಿಗಳು ಪ್ರವೇಶಿಸದಂತೆ ಮುಂಜಾಗ್ರತೆ ವಹಿಸಬೇಕು. ಸರಿಯಾದ ಬೆಳಕು ಮತ್ತು ಗಾಳಿಯ ವ್ಯವಸ್ಥೆ ಮಾಡಬೇಕು. ದಾಸ್ತಾನು ಕೊಠಡಿಯಲ್ಲಿ ಸ್ವಚ್ಚತೆ ಕಾಪಾಡಬೇಕು. ಆಹಾರ ಪದಾರ್ಥಗಳನ್ನು ಶಿಸ್ತುಬದ್ಧವಾಗಿ ಜೋಡಿಸಬೇಕು. ಇಲಿ, ಹೆಗ್ಗಣ, ಹಲ್ಲಿ, ಬೆಕ್ಕು, ಇರುವೆ, ಹಾವು, ನಾಯಿ, ಕ್ರಿಮಿಕೀಟ ನುಸುಳದಂತೆ ನೋಡಿಕೊಳ್ಳಬೇಕು. ಸ್ಟೀಲ್‌, ಕಲಾಯಿ ಮಾಡಿದ ತಾಮ್ರ, ಕಂಚಿನ ಪಾತ್ರೆಗಳನ್ನೇ ಅಡುಗೆಗೆ ಬಳಸಬೇಕು. ಜತೆಗೆ ಬಿಸಿ ನೀರಿನಲ್ಲಿ ಪಾತ್ರೆಗಳನ್ನು ಸ್ವಚ್ಚಗೊಳಿಸಬೇಕು. ಆಯೋಡಿನ್‌ಯುಕ್ತ ಉಪ್ಪನ್ನೇ ಬಳಸಬೇಕು. ಮುದ್ರಿತ ಕಾಗದಗಳಲ್ಲಿ ಆಹಾರ ವಿತರಿಸಬಾರದು ಎಂದು ತಿಳಿಸಿದ್ದಾರೆ.

ಅಡುಗೆ ತಯಾರಕರು, ಸಹಾಯಕರನ್ನು ಪ್ರತೀ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕು. ಜತೆ ಅವರು ಕೈಗವಚ, ತಲೆಟೋಪಿ ಬಳಸಬೇಕು. ಮಧ್ಯಪಾನ, ಧೂಮಪಾನ, ತಂಬಾಕು ಬಳಕೆ ಮಾಡಬಾರದು ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next