Advertisement
ಆರ್ಥಿಕವಾಗಿ ಹಿಂದುಳಿದ ಕುಟುಂ ಬದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಆದಾದ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಅರ್ಹ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದರು. ಆದರೆ ಈ ಬಾರಿ ಆರ್‌ಟಿಇ ಸೀಟುಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಮಾತ್ರ ಆರ್‌ಟಿಇ ಸೀಟುಗಳನ್ನು ಮೀಸಲಿಡಲಾಯಿತು. ಇದರ ಪರಿಣಾಮ ಆರ್ ಟಿಇ ಸೀಟು ಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಕಡಿಮೆಯಾಗಿದೆ.
ಈ ಬಾರಿ ಮೊದಲಿಗೆ ಮಂಗಳೂರು ಉತ್ತರ ವಲಯದಲ್ಲಿ 102, ಮಂಗಳೂರು ದಕ್ಷಿಣದಲ್ಲಿ 138, ಮೂಡುಬಿದಿರೆಯಲ್ಲಿ 16, ಬಂಟ್ವಾಳದಲ್ಲಿ 77, ಬೆಳ್ತಂಗಡಿಯಲ್ಲಿ 24, ಪುತ್ತೂರಿನಲ್ಲಿ 41, ಸುಳ್ಯ ವಲಯದಲ್ಲಿ 26 ಸೀಟುಗಳನ್ನು ಮೀಸಲಿಡಲಾಗಿತ್ತು. ಆರ್‌ಟಿಇ ಪರಿಷ್ಕೃತ ನಿಯಮಾವಳಿ ಪ್ರಕಾರ ದ.ಕ. ಜಿಲ್ಲೆಯ ಅನುದಾನಿತ 86 ಮತ್ತು ಅನುದಾನ ರಹಿತ 10 ಸಹಿತ 96 ಶಾಲೆಗಳಲ್ಲಿ ಕೇವಲ 424 ಸೀಟುಗಳನ್ನು ಮಾತ್ರ ಮೀಸಲಿಡಲಾಗಿದೆ. ಮಂಗಳೂರು ಉತ್ತರದ 3 ಮತ್ತು ದಕ್ಷಿಣದ 7 ಖಾಸಗಿ ಶಾಲೆಗಳನ್ನು ಹೊರತುಪಡಿಸಿದರೆ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ಶೈಕ್ಷಣಿಕ ವಲಯಗಳ ಖಾಸಗಿ ಶಾಲೆಗಳಲ್ಲಿ ಈ ಬಾರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವೇ ನೀಡಿಲ್ಲ. 2018-19ನೇ ಸಾಲಿನಲ್ಲಿ ಅನುದಾನಿತ ಮತ್ತು ಖಾಸಗಿಯನ್ನೊಳಗೊಂಡು 2,727 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಅವಕಾಶ ಒದಗಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನ (2019-20)ಮಿತಿಯನ್ನು 424ಕ್ಕೆ ಸೀಮಿತಗೊಳಿಸಲಾಗಿದೆ.
Related Articles
ಪ್ರಸಕ್ತ ಸಾಲಿನಲ್ಲಿ ದ.ಕ. ಜಿಲ್ಲೆಯ 7 ಶಿಕ್ಷಣ ವಲಯಗಳ ಪೈಕಿ ಸುಳ್ಯದಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ ಎಂಬುದು ಗಮನಾರ್ಹ. ಉಳಿದಂತೆ ಬಂಟ್ವಾಳ ವಲಯದಲ್ಲಿ 20, ಬೆಳ್ತಂಗಡಿಯಲ್ಲಿ 2, ಮಂಗಳೂರು ಉತ್ತರದಲ್ಲಿ 62, ಮಂಗಳೂರು ದಕ್ಷಿಣದಲ್ಲಿ 28, ಮೂಡುಬಿದಿರೆಯಲ್ಲಿ 3, ಪುತ್ತೂರು ವಲಯದಲ್ಲಿ 3 ಅರ್ಜಿಗಳು ಸಲ್ಲಿಕೆಯಾಗಿವೆ. ಆ ಮೂಲಕ ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಅತಿ ಹೆಚ್ಚು ಆರ್‌ಟಿಇ ಅರ್ಜಿಗಳು ಸಲ್ಲಿಕೆಯಾಗಿವೆ.
ಅರ್ಜಿ ಸಂಖ್ಯೆ ಕುಸಿತ
ಆರ್‌ಟಿಇ ಕಾಯ್ದೆಯಲ್ಲಿ ತಿದ್ದುಪಡಿಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಅರ್ಜಿ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಆರ್‌ಟಿಇ ಅರ್ಜಿ ಸಲ್ಲಿಕೆಗೆ ಎಪ್ರಿಲ್ 20 ಕೊನೆಯ ದಿನವಾಗಿತ್ತು. ನಿರೀಕ್ಷಿತ ಅರ್ಜಿಗಳು ಬಾರದ ಕಾರಣ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿತ್ತು. ಅದರಂತೆ ಎಪ್ರಿಲ್ 25ರವರೆಗೆ 118 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆೆ.
– ವಿಶ್ವನಾಥ್,
ನೋಡಲ್ ಅಧಿಕಾರಿ, ಆರ್‌ಟಿಇ ಕಾಯ್ದೆ-ದ.ಕ.ಜಿಲ್ಲೆ
ಪ್ರಜ್ಞಾ ಶೆಟ್ಟಿ
Advertisement