Advertisement

Mangaluru ಕೋಳಿ ಮಾಂಸದ ದರ ಏರಿಕೆ; ಮೊಟ್ಟೆಯ ದರ ಇಳಿಕೆ !

12:42 AM Apr 01, 2024 | Team Udayavani |

ಮಂಗಳೂರು: ಬರ, ಬಿಸಿಲ ಝಳ ಮೊದಲಾದ ಕಾರಣಗಳಿಂದಾಗಿ ತರಕಾರಿ ದರದಲ್ಲಿ ಏರಿಕೆಯಾಗುತ್ತಿದ್ದಂತೆ ಕೋಳಿಮಾಂಸ, ಮೀನಿನ ದರವೂ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ.

Advertisement

ಕರಾವಳಿಯಲ್ಲಿ ಪ್ರಸ್ತುತ ಕೋಲ, ನೇಮ, ಅಗೇಲು-ತಂಬಿಲಗಳು ಪ್ರತೀ ನಿತ್ಯ ಎಂಬಂತೆ ನಡೆಯುತ್ತಿವೆ. ಜತೆಗೆ ಮದುವೆ, ಔತಣ ಕೂಟಗಳು, ಸೀಮಂತ, ಮೆಹಂದಿ ಹೀಗೆ ವಿವಿಧ ಕಾರ್ಯಕ್ರಮಗಳೂ ನಡೆಯುತ್ತಿದ್ದು, ಕೋಳಿಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಬೇಡಿಕೆಗೆ ತಕ್ಕಂತೆ ಪೂರೈಕೆ ಇದ್ದರೂ ಸಾಕಣೆ ಮತ್ತು ಇತರ ವೆಚ್ಚಗಳ ಏರಿಕೆಯಿಂದಾಗಿ ಕೋಳಿಮಾಂಸದ ದರ ಏರುತ್ತಲೇ ಇದೆ.

ದರ ಹೇಗಿದೆ?
ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ. ಇದೆ. ವಿದೌಟ್‌ ಸ್ಕಿನ್‌ ಮಾಂಸಕ್ಕೆ 265-270 ರೂ. ಇದೆ. ಸಜೀವ ಕೋಳಿ ಬ್ರಾಯ್ಲರ್‌ಗೆ ಕೆ.ಜಿ.ಗೆ 165-170 ರೂ. ಇದ್ದರೆ, ಟೈಸನ್‌ ಕೋಳಿ ಕೆ.ಜಿ.ಗೆ 185-190 ರೂ. ಇದೆ. ಒಂದು ವಾರದಿಂದ ಕೋಳಿ ಮಾಂಸದ ದರದಲ್ಲಿ ಏರಿಕೆಯಾಗುತ್ತಿದ್ದು, ಪ್ರತೀದಿನ ಅಥವಾ 2-3 ದಿನಗಳಿಗೆ 5-6 ರೂ. ವರೆಗೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬೆಲೆ ಏರಿಕೆಗೆ ಕಾರಣವೇನು?
ಈ ಬಾರಿ ಬರದಿಂದಾಗಿ ಕೋಳಿಗಳ ಆಹಾರದಲ್ಲಿ ಬಳಕೆಯಾಗುವ ಸೋಯಾ, ಜೋಳ ಫಸಲು ಕಡಿಮೆಯಾಗಿದೆ. ಪ್ರತೀ ಕೆ.ಜಿ. ಕೋಳಿ ಉತ್ಪಾದನೆಗೆ ತಗುಲುವ ವೆಚ್ಚವೂ 60-70 ರೂ.ಗಳಿಂದ 100 ರೂ. ವರೆಗೆ ಹೆಚ್ಚಳವಾಗಿದೆ. ನೀರಿನ ಕೊರತೆ ಹಾಗೂ ಬಿಸಿಲಿನ ಝಳಕ್ಕೆ ಶೇ. 20-25ರಷ್ಟು ಕೋಳಿ ಸಾಕಣೆ ಕೇಂದ್ರಗಳು ಮುಚ್ಚಿವೆ. ಸಾಗಾಟ ವೆಚ್ಚವೂ ಹೆಚ್ಚಾಗಿದೆ. ಬಿಸಿಲು ಕೂಡ ಹೆಚ್ಚಾಗುತ್ತಿರುವುದರಿಂದ ಕೋಳಿಗಳ ಬೆಳವಣಿಗೆಯ ಮೇಲೂ ಪರಿಣಾಮ ಉಂಟಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಮರಿಗಳು ಸಾವನ್ನಪ್ಪುತ್ತಿವೆ. ಇವೆಲ್ಲ ಕಾರಣದಿಂದ ಕೋಳಿ ಮಾಂಸದ ದರದಲ್ಲಿ ಏರಿಕೆಯಾಗುತ್ತಿದೆ ಎನ್ನುತ್ತಾರೆ ಸಾಕಣೆದಾರರು.

ಮೀನಿನ ದರವೂ ಏರಿಕೆ
ಕಡಲಿನಲ್ಲಿ ಮತ್ಸéಕ್ಷಾಮ ಉಂಟಾಗಿರು ವುದರಿಂದ ಬಹುತೇಕ ಬೋಟುಗಳು ಸಮುದ್ರಕ್ಕೆ ತೆರಳದೆ ಬಂದರಿನಲ್ಲೇ ಉಳಿದಿವೆ. ಬೇಡಿಕೆಗೆ ತಕ್ಕಂತೆ ಮೀನು ದೊರೆಯದ ಪರಿಣಾಮ ಮೀನಿನ ದರದಲ್ಲಿಯೂ ಏರಿಕೆಯಾಗಿದೆ. ಬಹುತೇಕ ಎಲ್ಲ ಮೀನುಗಳ ದರ ಕೆ.ಜಿ.ಗೆ 200 ರೂ. ದಾಟಿದೆ. ಗೋವಾ, ಗುಜರಾತ್‌ ಸಹಿತ ಹೊರ ರಾಜ್ಯಗಳಿಂದ ಮೀನು ಬರುತ್ತಿದ್ದರೂ ಬೆಲೆ ಇಳಿಕೆಯಾಗಿಲ್ಲ.

Advertisement

ಕುರಿ, ಆಡು ಮಾಂಸ ದರದಲ್ಲಿ ಬದಲಾವಣೆ ಆಗಿಲ್ಲ
ಕುರಿ-ಆಡು ಮಾಂಸದ ದರ 2023ರ ಜನವರಿಯಿಂದ ಯಥಾಸ್ಥಿತಿಯಲ್ಲೇ ಇದೆ. ಏರಿಕೆಯಾಲೀ ಇಳಿಕೆಯಾಗಲೀ ಆಗಿಲ್ಲ. ಕುರಿ-ಆಡು ಮಾಂಸ 650 ರೂ. ಮತ್ತು 850 ರೂ.ಗಳಲ್ಲಿ ಮಾರಾಟವಾಗುತ್ತಿದೆ. ಒಂದು ಬಾರಿ ಏರಿದರೆ ಮತ್ತೆ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ಮಂಗಳೂರಿನ ವೆಲೆನ್ಸಿಯಾದ ಮಾಂಸದ ಅಂಗಡಿ ಮಾಲಕರು.

ಹೊಟೇಲ್‌ಗ‌ಳಲ್ಲಿ ಖಾದ್ಯ ದರ ಏರಿಕೆ
ಮಾರುಕಟ್ಟೆಯಲ್ಲಿ ಮೀನು, ಕೋಳಿ ದರ ಏರಿಕೆಯ ಪರಿಣಾಮವಾಗಿ ಹೊಟೇಲ್‌ಗ‌ಳಲ್ಲಿ ಮಾಂಸಾಹಾರದ ದರವೂ ಏರಿಕೆಯಾಗಿದೆ. ಅತೀ ಹೆಚ್ಚು ಬೇಡಿಕೆಯಲ್ಲಿರುವ ಚಿಕನ್‌ ಸುಕ್ಕಾ, ಚಿಲ್ಲಿ, ಕಬಾಬ್‌ ಮೊದಲಾದವುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಮೀನುಗಳಲ್ಲಿ ಗಾತ್ರಕ್ಕೆ ಅನುಗುಣವಾಗಿ ದರ ಹೆಚ್ಚು ಕಡಿಮೆ ಮಾಡುವುದೂ ಕಂಡುಬಂದಿದೆ. ತರಕಾರಿ ದರದಲ್ಲಿ ಏರಿಕೆಯಾಗಿದ್ದರೂ ಸಸ್ಯಾಹಾರಿ ಹೊಟೇಲ್‌ಗ‌ಳಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.

ಶುಂಠಿ, ಕೊತ್ತಂಬರಿ ಸೊಪ್ಪು ದರ ಏರಿಕೆ
ಖಾದ್ಯಗಳ ರುಚಿ ಹೆಚ್ಚಿಸುವ ಶುಂಠಿ ದರವೂ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದು, ಕೆ.ಜಿ.ಗೆ 160-200 ರೂ. ವರೆಗೆ ಏರಿಕೆದೆ. ಈ ಮೊದಲು ಕೆ.ಜಿ. 120 ರೂ. ಇತ್ತು. ಬೇಡಿಕೆ ಹೆಚ್ಚಿರುವುದರಿಂದ ದರವೂ ಹೆಚ್ಚಾಗಿದೆ ಎನ್ನುತ್ತಾರೆ ವರ್ತಕರು. ಮಂಗಳೂರು ಮಾರುಕಟ್ಟೆ ಯಲ್ಲಿ ಕೊತ್ತಂಬರಿ ಸೊಪ್ಪು ಅಭಾವವುಂಟಾಗಿದ್ದು, ಬೇಡಿಕೆಗೆ ತಕ್ಕಂತೆ
ದೊರೆಯುತ್ತಿಲ್ಲ. 10 ರೂ.ಗೆ 100 ಗ್ರಾಂ. ದೊರೆಯುತ್ತಿದ್ದ ಕೊತ್ತಂಬರಿ ಸೊಪ್ಪಿನ ದರ ಪ್ರಸ್ತುತ 15 ರೂ.ಗೆ ಏರಿದೆ.

ಕೋಳಿ ಮಾಂಸಕ್ಕೆ ಬೆಲೆ ಹೆಚ್ಚಳವಾಗಿ ದ್ದರೂ ಮೊಟ್ಟೆ ದರದಲ್ಲಿ ಇಳಿಕೆಯಾಗಿದೆ. ಅಂಗಡಿಗಳಲ್ಲಿ 6.50 ರೂ. ಇದ್ದ ದರ ಪ್ರಸ್ತುತ 5.50-6 ರೂ.ಗೆ ಇಳಿಕೆಯಾಗಿದೆ. ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ 4.80-5 ರೂ. ವರೆಗೆ ಇದೆ.
ಮೊಟ್ಟೆ ಉಷ್ಣಕಾರಕ ಎನ್ನುವ ಭಾವನೆಇದೆ. ಪ್ರಸ್ತುತ ಸೆಕೆಯೂ ಹೆಚ್ಚಿರುವುದರಿಂದ ಕೆಲವರು ಮೊಟ್ಟೆ ತಿನ್ನುವುದರಿಂದ ವಿಮುಖರಾಗಿದ್ದಾರೆ. ರಮ್ಜಾನ್‌ ಉಪವಾಸ ಸಂದರ್ಭವೂ ಕೆಲವರು ಮೊಟ್ಟೆ ತಿನ್ನುವುದಿಲ್ಲ. ಬಿಸಿಲಿನ ಹಿನ್ನೆಲೆಯಲ್ಲಿ ಮೊಟ್ಟೆ ದಾಸ್ತಾನು ಮಾಡುವುದೂ ಕಷ್ಟವಾಗಿರು ವುದರಿಂದ ದರದಲ್ಲಿ ಇಳಿಕೆಯಾಗಿದೆ ಎನ್ನುತ್ತಾರೆ ವರ್ತಕರು.

- ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next