ಮಂಗಳೂರು: ಘಾನಾದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಇದರಿಂದಾಗಿ ಒಮಿಕ್ರಾನ್ ಕರಾವಳಿ ಕರ್ನಾಟಕಕ್ಕೆ ತಲುಪಿರುವ ಆತಂಕ ಎದುರಾಗಿದೆ.
ಘಾನಾವನ್ನು ಒಮಿಕ್ರಾನ್ ನ “ಹೈ ರಿಸ್ಕ್” ದೇಶವೆಂದು ಘೋಷಿಸಲಾಗಿದೆ. ಆಗಮನದ ನಂತರ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾದ ಕ್ಷಿಪ್ರ RTPCR ಮಾದರಿಯಲ್ಲಿ ಪಾಸಿಟಿವ್ ಎಂದು ಕಂಡುಬಂದಿದೆ.
ಪರೀಕ್ಷೆಯ ನಂತರ ನಂತರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ, ಜಿಲ್ಲಾ ಕಣ್ಗಾವಲು ಅಧಿಕಾರಿ (ಡಿಎಸ್ಒ), ಕೋವಿಡ್ ನೋಡಲ್ ಅಧಿಕಾರಿ ಮತ್ತು ಇತರ ಉಸ್ತುವಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ನಿಯಂತ್ರಣ ಕ್ರಮಗಳ ಕುರಿತು ಚರ್ಚಿಸಿದರು.
ವ್ಯಕ್ತಿಯನ್ನು ನಿನ್ನೆ ರಾತ್ರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಕ್ಷಣರಹಿತರಾಗಿದ್ದಾರೆ ಎಂದು ಡಿಸಿ ಶುಕ್ರವಾರ ಪರಿಶೀಲನಾ ಸಭೆಯ ನಂತರ ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರಲ್ಲಿ ಇಲ್ಲಿಯವರೆಗೆ ಯಾವುದೇ ರೋಗಲಕ್ಷಣಗಳು ಕಂಡು ಬಂದಿಲ್ಲ. ವಿಮಾನದಲ್ಲಿದ್ದ ಒಟ್ಟು 27 ಪ್ರಯಾಣಿಕರನ್ನು ಪ್ರಾಥಮಿಕ ಸಂಪರ್ಕಗಳೆಂದು ಪರಿಗಣಿಸಲಾಗಿದೆ ಮತ್ತು ಆರೋಗ್ಯ ಇಲಾಖೆಯಿಂದ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರೂಪಾಂತರದ ವೈರಸ್ ಪರೀಕ್ಷೆಗಾಗಿ ಘಾನಾದಿಂದ ಬಂಡ ಪ್ರಯಾಣಿಕರ ಮಾದರಿಯನ್ನು ಜೆನೊಮಿಕ್ ಸೀಕ್ವೆನ್ಸಿಂಗ್ ಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.