Advertisement
ಬಜಪೆಯ ಕೇಕ್ ಶಾಪ್‌ವೊಂದರ ಮಾಲಕರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ಹಿಂದಿಯಲ್ಲಿ ಮಾತನಾಡಿ ಆತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆ ನೋಡಿಕೊಳ್ಳುತ್ತಿರುವ ಸಿಐಎಸ್‌ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬಂದಿ ಎಂದು ಪರಿಚಯಿಸಿಕೊಂಡು ‘ಕೂಡಲೇ ವಿಮಾನ ನಿಲ್ದಾಣಕ್ಕೆ 4 ಕೆಜಿ ಕೇಕ್ ತುರ್ತಾಗಿ ಬೇಕಾಗಿದೆ. ಎಷ್ಟು ಬಿಲ್ ಆಗುತ್ತದೆ ಎಂದು ಪ್ರಶ್ನಿಸಿದ್ದಾನೆ. ಮಾಲಕರು ‘2,800 ರೂ. ಆಗುತ್ತದೆ’ ಎಂದು ತಿಳಿಸಿದ್ದಾರೆ. ಕರೆ ಮಾಡಿದವನು ‘ನೀವು ಲೈನ್‌ನಲ್ಲಿಯೇ ಇರಿ. ಆ ಹಣವನ್ನು ನಿಮಗೆ ಗೂಗಲ್ ಪೇ ಮಾಡುತ್ತೇನೆ. ನಿಮ್ಮ ಗೂಗಲ್ ಪೇ ನಂಬರ್ ಕಳುಹಿಸಿ. ನಾನು ಕೇಕ್ ತೆಗೆದುಕೊಂಡು ಬರಲು ಓರ್ವ ಹುಡುಗನನ್ನು ಕಳುಹಿಸುತ್ತೇನೆ’ ಎಂದ. ಮಾಲಕರು ಲೈನ್‌ನಲ್ಲಿ ಇದ್ದುದರಿಂದ ತನ್ನ ಪತ್ನಿಯ ಗೂಗಲ್ ಪೇ ಸಂಖ್ಯೆ ನೀಡಿದ್ದರು. ಬಳಿಕ ಕರೆ ಕಡಿತವಾಯಿತು. ಸ್ವಲ್ಪ ಹೊತ್ತಿನಲ್ಲಿ ಮಾಲಕರ ಪತ್ನಿ ಕರೆ ಮಾಡಿ ‘ಯಾರೋ 28,000 ರೂ. ಕಳುಹಿಸಿರುವ ಮೆಸೇಜ್ ಬಂದಿದೆ’ ಎಂದು ತಿಳಿಸಿದರು.
ಮಾಲಕರಿಗೆ ಅವರ ಪತ್ನಿ ಕರೆ ಮಾಡಿದ ಅನಂತರ ಮತ್ತೆ ಮಾಲಕರಿಗೆ ಕರೆ ಮಾಡಿದ ಆ ಅಪರಿಚಿತ ವ್ಯಕ್ತಿ ‘ಕ್ಷಮಿಸಿ… ನಾನು ನಿಮಗೆ 2,800 ರೂ. ಹಾಕುವ ಬದಲು 28,000 ರೂ. ಹಾಕಿದ್ದೇನೆ. ಅದು ನಾನು ಔಷಧಕ್ಕಾಗಿ ತೆಗೆದಿಟ್ಟ ಹಣ. ನಿಮಗೆ ಕೊಡಬೇಕಾದ 2,800 ಇಟ್ಟುಕೊಂಡು ಉಳಿದ ಮೊತ್ತ ವಾಪಸ್ ನೀಡಿ ಎಂದ. ಮಾಲಕರು ಅದಕ್ಕೆ ಒಪ್ಪಿದರು. ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಆಕೆ ‘ಮೆಸೇಜ್ ಬಂದಿದೆ. ಆದರೆ ಖಾತೆಗೆ ಹಣ ಜಮೆ ಆಗಿಲ್ಲ’ ಎಂದು ತಿಳಿಸಿದ್ದಾರೆ. ಇದನ್ನು ಮಾಲಕರು ಕರೆ ಮಾಡಿದ ವ್ಯಕ್ತಿಗೆ ತಿಳಿಸಿದಾಗ ಆತ ‘ಮೆಸೇಜ್ ಬಂದಿರುವಾಗ ಹಣ ಕೂಡ ಜಮೆಯಾಗಿರುತ್ತದೆ’ ಎಂದ. ಯಾವುದಕ್ಕೂ ನೋಡುವ ಎಂದು ಮಾಲಕರು ಪತ್ನಿ ಮತ್ತು ಆ ಅಪರಿಚಿತ ವ್ಯಕ್ತಿಯೊಂದಿಗೆ ಕಾನ್ಫರೆನ್ಸ್ ಕರೆ ಮಾಡಿ ಮಾತನಾಡಿದರು. ಆಗ ಕೂಡ ಅಪರಿಚಿತ ವ್ಯಕ್ತಿ 28,000 ರೂ. ಜಮೆ ಮಾಡಿರುವುದಾಗಿ ತಿಳಿಸಿದ. ಅಳುತ್ತಲೇ ‘ಮೇಡಂ, ಅದು ನನ್ನ ಮೆಡಿಸಿನ್ ಹಣ… ದಯವಿಟ್ಟು ವಾಪಸ್ ಮಾಡಿ’ ಎಂದು ಕೇಳಿಕೊಂಡ. ಬಳಿಕ ಪತ್ನಿ ಕಾನ್ಫರೆನ್ಸ್ ಕರೆ ಕಡಿತ ಮಾಡಿ ಪತಿಗೆ ನೇರವಾಗಿ ಕರೆ ಮಾಡಿ ಮೆಸೇಜ್ ಅನ್ನು ಇನ್ನೊಮ್ಮೆ ಪರಿಶೀಲಿಸುವುದಾಗಿ ತಿಳಿಸಿದರು. ಮೆಸೇಜ್ ಬಂದಿದ್ದು ಬ್ಯಾಂಕಿನಿಂದ ಅಲ್ಲ !
ಮಾಲಕರ ಪತ್ನಿ ಮೆಸೇಜ್ ಪರಿಶೀಲಿಸುವಾಗ ಮೊದಲು ಆಕೆಯ ಖಾತೆಗೆ 1 ರೂ. ಜಮೆಯಾಗಿರುವ ಮೆಸೇಜ್ ಬಂದಿತ್ತು. ಅನಂತರ 28,000 ರೂ. ಬಂದಿರುವುದಾಗಿ ಮೆಸೇಜ್ ಬಂದಿತ್ತು. ಆದರೆ ಆ ಮೆಸೇಜ್ ಕರೆ ಮಾಡಿದ ವ್ಯಕ್ತಿಯಿಂದಲೇ ಬಂದಿತ್ತೇ ಹೊರತು ಬ್ಯಾಂಕ್‌ನಿಂದ ಬಂದಿರಲಿಲ್ಲ. ಇದನ್ನು ಆಕೆ ಪತಿಗೆ ತಿಳಿಸಿದರು. ಈ ವಿಷಯವನ್ನು ಮಾಲಕರು ಕರೆ ಮಾಡಿದ ವ್ಯಕ್ತಿಗೆ ತಿಳಿಸಿದರು. ಆಗ ಆತ ಕರೆ ಕಟ್ ಮಾಡಿದ್ದಾನೆ. ಇಲ್ಲಿ ಮಹಿಳೆಯ ಸಮಯಪ್ರಜ್ಞೆಯಿಂದ ವಂಚನೆಗೊಳಗಾಗುವುದು ತಪ್ಪಿದಂತಾಗಿದೆ.
Related Articles
ಈ ರೀತಿಯಾಗಿ ವ್ಯಾಪಾರಸ್ಥರನ್ನು ಗುರಿಯಾಗಿಸಿ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸರಿಯಾಗಿ ಪರಿಶೀಲಿಸದೆ ಯುಪಿಐ ಮೂಲಕ ಹಣ ವರ್ಗಾವಣೆಗೆ ಮುಂದಾಗಬಾರದು ಎಂದು ಬೇಕರಿಯ ಮಾಲಕರು ಮನವಿ ಮಾಡಿದ್ದಾರೆ. ಇಂತಹದ್ದೇ ಪ್ರಕರಣ ಜಿಲ್ಲೆಯ ಹಲವೆಡೆಗಳಲ್ಲಿ ನಡೆಯುತ್ತಲೇ ಇದೆ. ಯಾರೂ ದೂರು ಕೊಡಲು ಮುಂದೆ ಬರದ ಕಾರಣ ಇಂತಹ ಘಟನೆಗಳು ಬೆಳಕಿಗೆ ಬರುತ್ತಿಲ್ಲ.
Advertisement