ಮಂಗಳೂರು: ಅಡಿಕೆ ಕ್ಯಾನ್ಸರ್‌ಕಾರಕವೆಂದು ವರ್ಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾದವನ್ನು ಪುರಾವೆ ಸಮೇತ ಸಂಸದರಿಗೆ ಮನವರಿಕೆ ಮಾಡಿಸಿದ ಕ್ಯಾಂಪ್ಕೊದ ಪ್ರಯತ್ನಕ್ಕೆ ಯಶಸ್ಸು ಲಭಿಸಿದೆ.
ಸಂಸತ್ ಅಧಿವೇಶನದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಪ್ರಯತ್ನದಿಂದಾಗಿ “ಅಡಿಕೆ ಮತ್ತು ಮಾನವರ ಆರೋಗ್ಯದ ಕುರಿತು ಪುರಾವೆ ಆಧಾರಿತ ಸಂಶೋಧನೆ’ ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಕ್ಯಾಂಪ್ಕೊ ಶ್ಲಾಘಿಸಿದೆ.
ಇದಕ್ಕೆ ಶ್ರಮಿಸಿದ ಅಡಿಕೆ ಬೆಳೆಯುವ ಪ್ರದೇಶದ ಎಲ್ಲ ಸಂಸದರು ಹಾಗೂ ಭಾರತೀಯ ಜೀವನ ಕ್ರಮದಲ್ಲಿ ಅಡಿಕೆಯ ಪಾತ್ರವನ್ನು ಗುರುತಿಸಿರುವ ಕೇಂದ್ರ ಕೃಷಿ ಸಚಿವರಿಗೆ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅವರು ಅಡಿಕೆ ಬೆಳೆಗಾರರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ತಪ್ಪು ಗ್ರಹಿಕೆಯಿಂದ ಅಡಿಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗಿàಕರಿಸಿರುವ ಕ್ರಮದ ವಿರುದ್ಧ ಕ್ಯಾಂಪ್ಕೊ, ಮಾಧ್ಯಮಗಳು ಮತ್ತು ಜನಪ್ರತಿನಿಧಿಗಳ ಮೂಲಕ ನಿರಂತರ ಅಭಿಯಾನವನ್ನು ಮಾಡುತ್ತಲೇ ಬಂದಿದ್ದು, ಕೊನೆಗೂ ಸರಕಾರಕ್ಕೆ ಮನವರಿಕೆ ಮಾಡುವಲ್ಲಿ ಸಫಲವಾಗಿದೆ.
ಎಐಐಎಂಎಸ್, ಸಿಎಸ್‌ಐಆರ್-ಸಿಸಿಎಂಬಿ, ಐಐಎಸ್‌ಸಿ ಮುಂತಾದ ದೇಶದ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳ ಸಹಕಾರದ ಮೂಲಕ “ಅಡಿಕೆ ಮತ್ತು ಮಾನವನ ಆರೋಗ್ಯ ಬಗ್ಗೆ ಪುರಾವೆ ಆಧಾರಿತ ಸಂಶೋಧನೆ’ ನಡೆಸಲು ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ. ಇದರಿಂದ ಅಡಿಕೆಯ ಕುರಿತು ಇರುವ ತಪ್ಪು ಗ್ರಹಿಕೆ ಹೋಗಲಾಡಿಸಿ, ಅದರ ಆರೋಗ್ಯಕರ ಉಪಯೋಗಗಳ ವೈಜ್ಞಾನಿಕ ದಾಖಲೆ ಸಿಗಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.