Advertisement

ಪರಿಸರ ಇಲಾಖೆ ಸಮ್ಮತಿ ಸಿಕ್ಕೊಡನೆ ಶಿರಾಡಿ ಸುರಂಗ ಮಾರ್ಗ

01:08 AM Mar 01, 2022 | Team Udayavani |

ಮಂಗಳೂರು: ಕರಾವಳಿ ಭಾಗದ ಜೀವನಾಡಿ ಶಿರಾಡಿ ಘಾಟಿಯಲ್ಲಿ 14,000 ಕೋ.ರೂ. ವೆಚ್ಚದ ಸುರಂಗ ಮಾರ್ಗ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಸಿಕ್ಕ ಕೂಡಲೇ ಚಾಲನೆ ನೀಡಲಾಗು ವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ದಕ್ಷಿಣ ಕನ್ನಡ, ಉಡುಪಿ ಸಹಿತ ಏಳು ಜಿಲ್ಲೆಗಳಿಗೆ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿಗಳ ವಿವಿಧ ಕಾಮಗಾರಿಗಳಿಗೆ ಮಂಗಳೂರಿನಲ್ಲಿ ಸೋಮವಾರ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು. ಶಿರಾಡಿ ಘಾಟಿಯಲ್ಲಿ ಈಗಾ ಗಲೇ 26 ಕಿ.ಮೀ. ಚತುಷ್ಪಥ‌ ಯೋಜ ನೆಗೆ ಅನುಮೋದನೆ ನೀಡಲಾಗಿದೆ. ಜತೆಗೆ ಸುರಂಗ ಮಾರ್ಗ ಯೋಜನೆಯೂ ಇದ್ದು, ತಜ್ಞರು ಈಗಾಗಲೇ ಅಧ್ಯಯನ ನಡೆಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಯನ್ನು ಶೀಘ್ರ ದೊರಕಿಸಿ ಕೊಡಬೇಕು ಎಂದರು.

ಯಾವುದೇ ರಿಂಗ್‌ ರೋಡ್‌ ನಿರ್ಮಾಣ ಯೋಜನೆಗೆ ಈ ಹಿಂದೆ ಭೂಸ್ವಾಧೀನ ವೆಚ್ಚದ ಶೇ. 50ರಷ್ಟು ಭಾಗವನ್ನು ರಾಜ್ಯ ಸರಕಾರ ಭರಿಸಬೇಕಿತ್ತು. ಈಗ ವೆಚ್ಚದ ಶೇ. 25ರಷ್ಟು ಭಾಗವನ್ನು ರಾಜ್ಯ ಭರಿಸಿದರೆ ಸಾಕಾಗುತ್ತದೆ. ಅದೇ ರೀತಿ ರಾಯಲ್ಟಿ ಮತ್ತು ನಿರ್ಮಾಣ ಸಾಮಗ್ರಿಗಳ ಜಿಎಸ್‌ಟಿಯಲ್ಲೂ ರಿಯಾಯತಿ ನೀಡಲಾಗುವುದು ಎಂದರು.

ನಂತೂರು ಫ್ಲೈ ಓವರ್,
ಬೈಪಾಸ್‌ ರಸ್ತೆಗೆ ಅನುಮೋದನೆ
ನಂತೂರು ಫ್ಲೈಓವರ್‌, ಮೂಲ್ಕಿ- ಕಟೀಲು -ಬಿ.ಸಿ. ರೋಡ್‌-ತೊಕ್ಕೊಟ್ಟು ಬೈಪಾಸ್‌ ರಸ್ತೆ ಯೋಜನೆ ಶೀಘ್ರ ಪ್ರಾರಂಭ ಹಾಗೂ ಮಂಗಳೂರಿನಲ್ಲಿ 30 ಕಿ.ಮೀ. ಅಂತರದಲ್ಲಿ 3 ಟೋಲ್‌ಗೋಟ್‌ ಇರುವುದರಿಂದ ಜನರಿಗೆ ಹೊರೆಯಾಗಿದ್ದು, ಸುರತ್ಕಲ್‌ ಟೋಲ್‌ಗೇಟ್‌ ರದ್ದುಗೊಳಿಸಬೇಕು ಅಥವಾ ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸಬೇಕು ಎಂಬುದಾಗಿ ಸಂಸದ ನಳಿನ್‌ ಮಾಡಿಕೊಂಡ ಮನವಿಗೆ ಸ್ಪಂದಿಸಿದ ನಿತಿನ್‌ ಗಡ್ಕರಿ, ನಂತೂರಿನಲ್ಲಿ ರಾ.ಹೆ. 66ರ ನಂತೂರಿನಲ್ಲಿ ಫ್ಲೈ ಓವರ್ ನಿರ್ಮಾಣ ಹಾಗೂ ಮೂಲ್ಕಿ-ಕಟೀಲು- ಬಿ.ಸಿ. ರೋಡ್‌- ತೊಕ್ಕೊಟ್ಟು ರಿಂಗ್‌ರೋಡ್‌ಗೆ (ಮಂಗಳೂರು ಬೈಪಾಸ್‌ ರಸ್ತೆ)ಯೋಜನೆಗೆ ಸ್ಥಳದಲ್ಲೇ ಅನುಮೋದನೆ ನೀಡಿರುವುದಾಗಿ ಘೋಷಿಸಿದರು. ಸುರತ್ಕಲ್‌ ಟೋಲ್‌ಗೇಟ್‌ ವಿಚಾರದಲ್ಲಿ ಖಾಸಗಿ ಸಂಸ್ಥೆಗಳು ಹಾಗೂ ಕಾನೂನು ಸಮಸ್ಯೆಗಳು ಒಳಗೊಂಡಿರುವುದರಿಂದ ಹೊಸದಿಲ್ಲಿಯಲ್ಲಿ ಸಭೆ ನಡೆಸಲಾಗುವುದು ಎಂದವರು ತಿಳಿಸಿದರು.

ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ: ಮುಖ್ಯಮಂತ್ರಿ ಬೊಮ್ಮಾಯಿ
ರಾ. ಹೆದ್ದಾರಿಗಳ ಪಕ್ಕದಲ್ಲಿ ನೀರಿನ ಮೂಲಗಳನ್ನು ಸಂರಕ್ಷಿಸಿ ಇದರ ಲಾಭವನ್ನು ರೈತರಿಗೆ ದೊರಕಿಸಿಕೊಡುವ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಬಗ್ಗೆ ಸದ್ಯದಲ್ಲೇ ಸರಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ರಿಂಗ್‌ ರೋಡ್‌ಗಳಿಗೆ ಭೂಸ್ವಾಧೀನದ ಶೇ. 25ರಷ್ಟು ಮಾತ್ರ ನೀಡುವ ಹಾಗೂ ಜಿಎಸ್‌ಟಿ ಮತ್ತು ರಾಯಲ್ಟಿ ರಿಯಾಯತಿ ನೀಡುವ ಕೇಂದ್ರ ಸರಕಾರದ ಹೊಸ ನಿಯಮಗಳಂತೆ ಯೋಜನೆಗಳಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಇದರಲ್ಲಿ ಮಂಗಳೂರು ಬೈಪಾಸ್‌ ರಸ್ತೆ (ಮೂಲ್ಕಿ-ಕಟೀಲು-ತೊಕ್ಕೊಟ್ಟು ) ಯೋಜನೆ ಕೂಡ ಸೇರಿದೆ ಎಂದರು.

ರಾಜ್ಯ ಲೋಕೋಪಯೋಗಿ ಖಾತೆ ಸಚಿವ ಸಿ.ಸಿ. ಪಾಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ಸಚಿವರಾದ ಎಸ್‌. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಬಿ.ವೈ. ರಾಘವೇಂದ್ರ, ಮುನಿಸ್ವಾಮಿ, ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಲಾಲಾಜಿ ಮೆಂಡನ್‌, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾೖಕ್‌, ರೂಪಾಲಿ ಸಂತೋಷ್‌ ನಾಯ್ಕ, ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್‌, ಮಂಜುನಾಥ ಭಂಡಾರಿ, ಮೇಯರ್‌ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಸುಮಂಗಲ ರಾವ್‌, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಮೇಯರ್‌, ಕಾರ್ಪೊರೇಟರ್‌ ಭಾಸ್ಕರ್‌ ಕೆ., ಕಿಶೋರ್‌ ಕೊಟ್ಟಾರಿ, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ಹೆದ್ದಾರಿ ಹಾಗೂ ಲೋಕೋಪಯೋಗಿ ಅಧಿಕಾರಿಗಳು ಉಪಸ್ಥಿತರಿದ್ದರು.

ಆಮೆಗತಿಯಲ್ಲಿ ಸಾಗುತ್ತಿದ್ದ ರಾ. ಹೆದ್ದಾರಿ ಯೋಜನೆಗಳಿಗೆ ಸಚಿವ ನಿತಿನ್‌ ಗಡ್ಕರಿ ಯವರು ಅಶ್ವವೇಗವನ್ನು ನೀಡಿದ್ದಾರೆ. ದಕ್ಷಿಣ ಜಿಲ್ಲೆಗೆ ಕೇಂದ್ರ ಸರಕಾರ ಕಳೆದ 4 ವರ್ಷ ಗಳಲ್ಲಿ ವಿವಿಧ ಯೋಜನೆಗಳಲ್ಲಿ ಒಟ್ಟು 19,000 ಕೋ.ರೂ. ನೀಡಿದೆ.
-ನಳಿನ್‌ ಕುಮಾರ್‌ ಕಟೀಲು
ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ

ಪ್ರಧಾನಿ ಮೋದಿ ನೇತೃತ್ವದಲ್ಲಿ ನಿತಿನ್‌ ಗಡ್ಕರಿಯವರು ದೇಶದಲ್ಲಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ.
-ಪ್ರಹ್ಲಾದ ಜೋಷಿ
ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಕಲ್ಲಿದ್ದಲು ಹಾಗೂ ಗಣಿ ಖಾತೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next