Advertisement

ಮಂಗಳೂರು: ಸ್ಫೋಟ ಸ್ಥಳದಲ್ಲಿ ದೊರೆತ ಆಧಾರ್‌ ಕಾರ್ಡ್‌ ನಕಲಿ! ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆ

12:16 AM Nov 21, 2022 | Team Udayavani |

ಹುಬ್ಬಳ್ಳಿ : ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಸ್ಥಳದಲ್ಲಿ ದೊರೆತ ಆಧಾರ್‌ ಕಾರ್ಡ್‌ ವಿಳಾಸವು ನಕಲಿ ಎನ್ನುವುದು ಪತ್ತೆಯಾಗಿದ್ದು, ಅದು ಹುಬ್ಬಳ್ಳಿಯ ಪ್ರೇಮರಾಜ್‌ ಅವರಿಗೆ ಸೇರಿದ್ದಾಗಿದೆ. ಆಟೋರಿಕ್ಷಾದಲ್ಲಿ ಪತ್ತೆಯಾದ ಆಧಾರ ಕಾರ್ಡ್‌ ಹುಬ್ಬಳ್ಳಿಯ ಕೇಶ್ವಾಪುರ ಮಧುರಾ ಕಾಲೋನಿ ನಿವಾಸಿ ಪ್ರೇಮರಾಜ್‌ ಹೆಸರಿನಲ್ಲಿದ್ದು, ಇದು ಆರು ತಿಂಗಳ ಹಿಂದೆ ಕಳೆದು ಹೋಗಿತ್ತು. ಇವರದೇ ವಿಳಾಸವನ್ನು ಆಗಂತುಕರು ಬಳಕೆ ಮಾಡಿದ್ದಾರೆ. ಈ ಪ್ರಕರಣಕ್ಕೂ ಪ್ರೇಮ್‌ರಾಜ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಅವರ ಕುಟುಂಬದವರು ಹೇಳಿದ್ದಾರೆ.

Advertisement

ಸ್ಫೋಟ ನಡೆದ ಸ್ಥಳದಲ್ಲಿ ಪ್ರೇಮರಾಜ ಹುಟಗಿ ಹೆಸರು ಮತ್ತು ವಿಳಾಸವಿದ್ದ ಆಧಾರ್‌ ಕಾರ್ಡ್‌ ದೊರೆತಿತ್ತು. ಇದಕ್ಕೆ ಸಂಬಂಧಿಸಿ ಅವರ ಪೋಷಕರನ್ನು ಸ್ಥಳೀಯ ಪೊಲೀಸರು ವಿಚಾರಣೆ ಮಾಡಿದ್ದಾರೆ. ಪ್ರೇಮರಾಜ್‌ ರೈಲ್ವೇ ಇಲಾಖೆಯ ಡಿ ಗ್ರೂಪ್‌ ಉದ್ಯೋಗಿಯಾಗಿದ್ದು, ಕಳೆದ ಮೂರು ವರ್ಷದಿಂದ ತುಮಕೂರಿನಲ್ಲಿ ಟ್ರಾಕ್‌ ಮೆಂಟೇನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪೋಷಕರು ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿ ನಿವಾಸಿಯಾಗಿದ್ದಾರೆ. ಪ್ರೇಮರಾಜ ಅವರ ತಂದೆ ಮಾರುತಿ ಹುಟಗಿ, ತಾಯಿ ರೇಖಾ ಹಾಗೂ ಸಹೋದರ ನವರಾಜ ಅವರನ್ನು ಶನಿವಾರ ರಾತ್ರಿಯೇ ಪೊಲೀಸರು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಪ್ರೇಮರಾಜ ತಂದೆ ಮಾರುತಿ ಹುಟಗಿ, ಸ್ಫೋಟದ ಸ್ಥಳದಲ್ಲಿ ಸಿಕ್ಕಿದೆ ಎನ್ನಲಾದ ಆಧಾರ್‌ ಕಾರ್ಡ್‌ನಲ್ಲಿ ನಮ್ಮ ವಿಳಾಸವಿದೆ. ಆದರೆ ಅದರಲ್ಲಿರುವ ಭಾವಚಿತ್ರ ನನ್ನ ಮಗ ಪ್ರೇಮಾರಾಜನದ್ದಲ್ಲ. ಆರು ತಿಂಗಳ ಹಿಂದಷ್ಟೇ ಪರೀಕ್ಷೆ ಬರೆಯಲು ಹೋಗಿದ್ದಾಗ ಆಧಾರ್‌ ಕಾರ್ಡ್‌ ಕಳೆದುಕೊಂಡಿದ್ದ. ಆಗ ದೂರು ಕೊಡು ಎಂದು ಹೇಳಿದ್ದೆ. ನನ್ನ ಮಗ ಅಂಥಹವನಲ್ಲ. ಈ ಪ್ರಕರಣಕ್ಕೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಶನಿವಾರ ರಾತ್ರಿ 8.45ರ ವೇಳೆಗೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದ್ದೇವೆ. ನನ್ನ ಎದುರಿಗೆ ಮಗನ ಜತೆಯೂ ಮಾತನಾಡಿದ್ದಾರೆ. ಸ್ಫೋಟ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.

ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆ
ತುಮಕೂರು, ನ. 20: ಮಂಗಳೂರಿನಲ್ಲಿ ಆಟೋ ರಿಕ್ಷಾದೊಳಗೆ ಕುಕ್ಕರ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನ ಸ್ಥಳದಲ್ಲಿ ಸಿಕ್ಕಿರುವ ನಕಲಿ ಆಧಾರ್‌ ಕಾರ್ಡ್‌ನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆಯಾಗಿದ್ದಾರೆ.

ತುಮಕೂರಿನ ರೈಲ್ವೇ ಇಲಾಖೆಯಲ್ಲಿ ಟ್ರ್ಯಾಕ್‌ ಮ್ಯಾನ್‌ ಟ್ರೈನರ್‌ ಆಗಿ ಕೆಲಸ ಮಾಡುತ್ತಿದ್ದ ಪ್ರೇಮರಾಜ್‌ ಹುಟಗಿ ಅಸಲಿ ಆಧಾರ್‌ ಕಾರ್ಡ್‌ನ ವ್ಯಕ್ತಿ. ಮೂಲತಃ ಹುಬ್ಬಳಿಯ ಕೇಶವಾಪುರದ ಪ್ರೇಮರಾಜ್‌ ಹುಟಗಿ ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದ.

Advertisement

2 ಬಾರಿ ಆಧಾರ್‌ ಕಳೆದುಕೊಂಡಿದ್ದೆ
ತುಮಕೂರು ಸಮೀಪದ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪ್ರೇಮರಾಜ್‌ ಹುಟಗಿ, ಕಳೆದ ಎರಡು ವರ್ಷದಲ್ಲಿ 2 ಬಾರಿ ಆಧಾರ್‌ ಕಾರ್ಡ್‌ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಧಾರವಾಡದಿಂದ ಬೆಳಗಾವಿಗೆ ಬಸ್‌ನಲ್ಲಿ ಬರುವಾಗ ಕಳೆದುಕೊಂಡಿದ್ದ. ಬಳಿಕ ಮತ್ತೂಂದು ಆಧಾರ್‌ ಕಾರ್ಡ್‌ ಪಡೆದಿದ್ದ. ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಬರುವಾಗ ಮತ್ತೂಮ್ಮೆ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಶನಿವಾರ ರಾತ್ರಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌ ಕರೆ ಮಾಡಿ ಕೂಡಲೇ ತುಮಕೂರು ಎಸ್‌ಪಿ ಸಂಪರ್ಕಿಸುವಂತೆ ಸೂಚನೆ ನೀಡಿದ್ದರು. ಅದರಂತೆ ರವಿವಾರ ಎಸ್‌ಪಿ ರಾಹುಲ್‌ ಕುಮಾರ್‌ ಶಹಪುರ್‌ ವಾಡ್‌ ಅವರನ್ನು ಪ್ರೇಮರಾಜ್‌ ಹುಟಗಿ ಸಂಪರ್ಕಿಸಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next