Advertisement

ಬಾಂಬ್‌ ಸ್ಫೋಟದ ಬಳಿಕವೂ ಸಾರ್ವಜನಿಕ ಸುರಕ್ಷೆ ನಿರ್ಲಕ್ಷ್ಯ ! ನಗರದ ಪ್ರಮುಖ ಸ್ಥಳಗಳಲ್ಲೇ ಭದ್ರತಾ ಲೋಪ

09:24 AM Nov 30, 2022 | Team Udayavani |

ಮಂಗಳೂರು : ಉಗ್ರರ ಕೆಂಗಣ್ಣಿಗೆ ಗುರಿಯಾಗಿರುವ ಬಂದರು ನಗರಿ ಮಂಗಳೂರಿನಲ್ಲಿ ನಾಗರಿಕ ಸುರಕ್ಷೆಯ ಕ್ರಮಗಳು ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಕಂಕನಾಡಿ ಸಮೀಪದ ನಾಗುರಿಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿ 9 ದಿನಗಳಾಗಿದ್ದು ಈ ಸಂದರ್ಭ ನಗರದ ಪ್ರಮುಖ ಸ್ಥಳಗಳಲ್ಲಿ “ಉದಯವಾಣಿ’ ನಡೆಸಿದ ಪರಿಶೀಲನೆ ವೇಳೆ ಭದ್ರತ ವ್ಯವಸ್ಥೆಯಲ್ಲಿ ಗರಿಷ್ಠ ಲೋಪಗಳು ಕಂಡುಬಂದಿವೆ.

Advertisement

ಪೊಲೀಸ್‌ ನಿಗಾ, ಸಿಸಿ ಕೆಮರಾ ಕಣ್ಗಾವಲು, ಮೆಟಲ್‌ ಡಿಟೆಕ್ಟರ್‌, ಲಗೇಜ್‌ ಸ್ಕ್ರೀನಿಂಗ್‌ ಯಂತ್ರ ಮೊದಲಾದವುಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಅಪಾಯಕಾರಿ ವಸ್ತುಗಳನ್ನು ಪತ್ತೆ ಹಚ್ಚುವ ಮೆಟಲ್‌ ಡಿಟೆಕ್ಟರ್‌ (ಲೋಹ ಪರಿಶೋಧಕ) ಯಂತ್ರಗಳಿದ್ದರೂ ಆ ಯಂತ್ರಗಳ ದ್ವಾರದೊಳಗಿನಿಂದ ಹೋಗುವವರ ಸಂಖ್ಯೆ ಕಡಿಮೆ. 3 ಮೆಟಲ್‌ ಡಿಟೆಕ್ಟರ್‌ಗಳು ಬಳಕೆಯಾಗುತ್ತಿವೆ. ಇನ್ನುಳಿದ 3 ಬಳಕೆಯಾಗುತ್ತಿಲ್ಲ. ಇಲ್ಲಿರುವ ಲಗೇಜ್‌ ಸ್ಕ್ರೀನಿಂಗ್‌ ಯಂತ್ರಗಳನ್ನು ಟಾರ್ಪಾಲು ಮುಚ್ಚಿ ಬೆಚ್ಚಗಿಡಲಾಗಿದೆ!

ಮೂಲೆ ಸೇರಿದ ಲೋಹಶೋಧಕ
ಕೆಎಸಾರ್ಟಿಸಿ ಬಸ್‌ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿ ಮೊದಲಾದ ಪ್ರಮುಖ ಸ್ಥಳಗಳಲ್ಲಿ ಈ ಹಿಂದೆ ಅಳವಡಿಸಲಾಗಿದ್ದ ಮೆಟಲ್‌ ಡಿಟೆಕ್ಟರ್‌ (ಲೋಹಶೋಧಕ)ಗಳು ಈಗ ಮೂಲೆ ಸೇರಿವೆ. ಮಾಲ್‌ಗ‌ಳಲ್ಲಿ ಮೆಟಲ್‌ ಡಿಟೆಕ್ಟರ್‌ ಇದೆಯಾದರೂ ಅವುಗಳ ಮೂಲಕ ಹಾದು ಹೋಗುವವರ ಸಂಖ್ಯೆ ತೀರಾ ಕಡಿಮೆ.

ನಿರುಪಯುಕ್ತ ಸಿಸಿ ಕೆಮರಾಗಳು
ನಗರದೊಳಗೆ ಕುಕ್ಕರ್‌ ಬಾಂಬ್‌ ತಂದಿರುವುದು ಭದ್ರತಾ ವ್ಯವಸ್ಥೆಯ ಲೋಪವನ್ನು ಬೆಟ್ಟು ಮಾಡಿದೆ. ಉಗ್ರ ಶಾರೀಕ್‌ ಬಸ್‌ನಲ್ಲಿ ಬಂದು ಕೆಲವೆಡೆ ಸುತ್ತಾಡಿ ಆಟೋ ಹತ್ತಿದ್ದರೂ ಆತನ ಚಲನವಲನ ಸಿಸಿ ಕೆಮರಾಗಳಲ್ಲಿ ದಾಖಲಾಗಿಲ್ಲ. ಈ ಹಿಂದೆಯೂ ನಗರದಲ್ಲಿ ಕೆಲವು ಅಪರಾಧ ಪ್ರಕರಣಗಳು ನಡೆದಾಗ ಆರೋಪಿಗಳ ಪತ್ತೆಗೆ ಪೊಲೀಸರಿಗೆ ಸಿಸಿ ಕೆಮರಾಗಳಿಂದ ಹೆಚ್ಚಿನ ಪ್ರಯೋಜನವಾಗಿರಲಿಲ್ಲ. ಸಿಸಿ ಕೆಮರಾಗಳ ನಿರ್ವಹಣೆಗೆ ಗಮನವೇ ಕೊಡುತ್ತಿಲ್ಲ ಎನ್ನಲಾಗಿದೆ.

ಕನಿಷ್ಠ 30 ದಿನಗಳ ಸ್ಟೋರೇಜ್‌ ಕಡ್ಡಾಯ
“ಕರ್ನಾಟಕ ಸಾರ್ವಜನಿಕ ಸುರಕ್ಷೆಯ (ಕ್ರಮಗಳ) ಜಾರಿ ಅಧಿನಿಯಮ 2017′ ಪ್ರಕಾರ ದಿನಕ್ಕೆ ಸುಮಾರು 500ಕ್ಕಿಂತ ಹೆಚ್ಚು ಬಾರಿ ಜನರ ಓಡಾಟ ವಿರುವ ಅಥವಾ ಒಂದೇ ಬಾರಿಗೆ 100 ಮಂದಿಯ ಓಡಾಟವಿರುವ ಕಟ್ಟಡ/ಮಳಿಗೆಗಳಲ್ಲಿ ಸಿಸಿ ಕೆಮರಾ ಕಡ್ಡಾಯ. ಕೆಮರಾಗಳು ಹೈ ರೆಸೊಲ್ಯೂಷನ್‌, 30 ದಿನಗಳವರೆಗೆ ಮಾಹಿತಿ ಸಂಗ್ರಹ ಸಾಮರ್ಥ್ಯ ಹೊಂದಿರುವುದು ಕಡ್ಡಾಯ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 15 ಕಾನೂನು ಮತ್ತು ಸುವ್ಯವಸ್ಥೆಯ ಠಾಣೆಗಳು, 4 ಸಂಚಾರ ಠಾಣೆಗಳು ಮತ್ತು ಒಂದು ಮಹಿಳಾ ಠಾಣೆ ಇದೆ. ಇದರ ವ್ಯಾಪ್ತಿಯೊಳಗಿನ ಕಟ್ಟಡಗಳಲ್ಲಿ ಒಟ್ಟು 20,870 ಸಿಸಿ ಕೆಮರಾಗಳಿವೆ. ಆದರೆ ಈ ಪೈಕಿ ಹೈ ರೆಸೊಲ್ಯೂಷನ್‌ ಹೊಂದಿರುವ ಸಿಸಿ ಕೆಮರಾಗಳು 3,224 ಮಾತ್ರ. ಅದರಲ್ಲಿಯೂ ಒಂದು ತಿಂಗಳ ಸ್ಟೋರೇಜ್‌ ಸಾಮರ್ಥ್ಯ ಹೊಂದಿರುವ ಸಿಸಿ ಕೆಮರಾಗಳ ಸಂಖ್ಯೆ 1,074 ಮಾತ್ರವಿತ್ತು ಎಂಬುದನ್ನು ಕೆಲವು ತಿಂಗಳ ಹಿಂದೆಯೇ ಗಮನಿಸಲಾಗಿತ್ತು. ಆದರೆ ಆ ಬಳಿಕವೂ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.

Advertisement

ಪ್ರಮುಖ ಕಟ್ಟಡ, ಕಚೇರಿಗಳಲ್ಲಿ ಮೆಟಲ್‌ ಡಿಟೆಕ್ಟರ್‌ ಅಳವಡಿಕೆ ಕಡ್ಡಾಯವಲ್ಲ, ಆದರೆ ಕಟ್ಟಡಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿದೆ. ನಗರದಲ್ಲಿ ಪೊಲೀಸ್‌ ಇಲಾಖೆ ಮತ್ತು ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಇನ್ನಷ್ಟು ಸಿಸಿ ಕೆಮರಾಗಳನ್ನು ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
– ದಿನೇಶ್‌ ಕುಮಾರ್‌, ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಗ

– ಸಂತೋಷ್‌ ಬೊಳ್ಳೆಟ್ಟು

ಇದನ್ನೂ ಓದಿ: ಕಾರು ಅಪಘಾತ: ಅಯ್ಯಪ್ಪ ಸ್ವಾಮಿ ಮಾಲಾಧಾರಣೆಗೆ ತೆರಳುತ್ತಿದ್ದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next