ಮಂಗಳೂರು : ನಾಗುರಿಯಲ್ಲಿ ಶನಿವಾರ ಸಂಭವಿಸಿರುವ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವು ಭಯೋತ್ಪಾದಕರು ವಿಧ್ವಂಸಕ ಕೃತ್ಯಗಳನ್ನು ಎಸಗಲು ಕರಾವಳಿಯನ್ನು ಮತ್ತೆ ಕಾರ್ಯಸ್ಥಾನವಾಗಿ ಮಾಡುತ್ತಿದ್ದಾರೆಯೇ ಎಂಬ ಶಂಕೆಯನ್ನು ಹುಟ್ಟುಹಾಕಿದೆ.
ಇತ್ತೀಚೆಗೆ ಐಸಿಸ್‌ನೊಂದಿಗೆ ನಂಟು ಸಂಬಂಧ ಉಳ್ಳಾಲದಲ್ಲಿ ಇಬ್ಬರನ್ನು ಎನ್‌ಐಎ ಬಂಧಿಸಿರುವುದು, ಬಂಟ್ವಾಳ ತಾಲೂಕಿನ ನಾವೂರಿನಲ್ಲಿ ನಡೆದಿದೆ ಎನ್ನಲಾಗಿರುವ ಬಾಂಬ್ ಪರೀಕ್ಷಾರ್ಥ ಸ್ಫೋಟಕ್ಕೆ ಸಂಬಂಧಿಸಿ ಐಸಿಸ್‌ನೊಂದಿಗೆ ನಂಟು ಹೊಂದಿದ್ದ ಆರೋಪಿಗಳಲ್ಲಿ ಓರ್ವನಾಗಿರುವ ಮಾಝ್ ಮುನೀರ್‌ನನ್ನು ಕರೆತಂದು ಸ್ಥಳ ಮಹಜರು ನಡೆಸಿರುವುದು ಮುಂತಾದ ಬೆಳವಣಿಗೆ ಗಳು ಇದಕ್ಕೆ ಪುಷ್ಟಿ ನೀಡಿವೆ.
ಹೈದರಾಬಾದ್ ಮಂಗಳೂರಿನಿಂದ ಸ್ಫೋಟಕ ಭಯೋತ್ಪಾದಕರು 8 ವರ್ಷಗಳ ಹಿಂದೆ ಮಂಗಳೂರನ್ನು ಬಾಂಬ್ ತಯಾರಿಕೆ ತಾಣವಾಗಿ ಮಾಡುವ ಪ್ರಯತ್ನ ನಡೆಸಿದ್ದು ರಾಷ್ಟ್ರೀಯ ತನಿಖಾ
ಸಂಸ್ಥೆಯವರ ಕಾರ್ಯಾಚರಣೆಯಿಂದ ವಿಫಲವಾ ಗಿತ್ತು. ಕುಖ್ಯಾತ ಭಯೋತ್ಪಾದಕರಾದ ಯಾಸಿನ್ ಭಟ್ಕಳ್ ಮತ್ತು ಅಸಾದುಲ್ಲಾ ಅಖ್ತರ್ ಮಂಗಳೂರಿನ ಅತ್ತಾವರದ ಖಾಸಗಿ ವಸತಿ ಸಂಕೀರ್ಣವೊಂದರ ಕಟ್ಟಡದ 3ನೇ ಅಂತಸ್ತಿನ ಬಾಡಿಗೆ ಕೊಠಡಿಯಲ್ಲಿ 2013 ಮಾರ್ಚ್ ತನಕ ಸುಮಾರು 6 ತಿಂಗಳು ಕಾಲ ಉಳಿದುಕೊಂಡು ತಮ್ಮ ಕಾರ್ಯಾಚರಣೆ ನಡೆಸಿದ್ದರು. ಬಾಂಬ್ ತಯಾರಿಸಿ ಸರಬರಾಜು ಮಾಡುತ್ತಿದ್ದರು. ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಮತ್ತು ದೇಶದ ಇತರ ಕಡೆಗಳಲ್ಲಿ ನಡೆದ ಸ್ಫೋಟಗಳಿಗೆ ಇಲ್ಲಿಂದಲೇ ಸ್ಫೋಟಕಗಳ ರವಾನೆಯಾಗಿತ್ತು ಎಂಬುದು ಎನ್‌ಐಐ ತನಿಖೆಯಲ್ಲಿ ಬಹಿರಂಗ ಗೊಂಡಿತ್ತು. ಇಲ್ಲಿ ಬಾಂಬ್ ತಯಾರಿಸುತ್ತಿದ್ದ ಬಗ್ಗೆ ಅಸಾದುಲ್ಲಾ ವಿಚಾರಣೆ ವೇಳೆ ಒಪ್ಪಿ ಕೊಂಡಿದ್ದ. ರಿಯಾಜ್ ಭಟ್ಕಳ್ ಸ್ಫೋಟಕ ತಯಾರಿ
ಸಲು ನೆರವು ಒದಗಿಸುತ್ತಿದ್ದ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ 2013ರ ಸೆಪ್ಟಂಬರ್‌ನಲ್ಲಿ ಎನ್‌ಐಎ ಇವರಿಬ್ಬರನ್ನು ರಹಸ್ಯವಾಗಿ ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಿತ್ತು.
ತನಿಖೆ ಸಂದರ್ಭದಲ್ಲಿ ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ 50 ಡಿಜಿಟಲ್ ವಾಚ್‌ಗಳು, ಬಾಂಬ್‌ಗಳಿಗೆ ಜೋಡಿಸುವ ವೈರ್‌ಗಳು, ಕೆಲವು ಸೆಲ್ ಫೋನ್‌ಗಳು, 3 ಎಲೆಕ್ಟ್ರಿಕಲ್ ಡಿಟೊನೇಟರ್‌ಗಳು, 125 ಗ್ರಾಂ ಅಮೋನಿಯಂ ನೈಟ್ರೇಟ್ ಜೆಲ್, ಇಂಧನ, ಬಾಂಬ್ ಸರ್ಕ್ನೂಟ್ ವಿವರದ ಪುಸ್ತಕ ಪತ್ತೆಯಾಗಿತ್ತು. ಅದೇ ಕಾರಣಕ್ಕಾಗಿ ಮಂಗಳೂರು ಉಗ್ರರ “ಬಾಂಬ್ ಲ್ಯಾಬ್’ ಆಗಿತ್ತೆಂದು ಆಸಂದರ್ಭದಲ್ಲಿ ತನಿಖಾಧಿಕಾರಿಗಳು ವ್ಯಾಖ್ಯಾನಿಸಿದ್ದರು.
Related Articles
ಇದನ್ನೂ ಓದಿ: ಹುಣಸೂರು: ತುಂಬಿದ ಕೆರೆ ಮುಂದೆ ಸೆಲ್ಪಿ ಕ್ಲಿಕ್ಕಿಸಿ ಸಂಭ್ರಮಿಸಿದ ಶಾಸಕ ಮಂಜುನಾಥ್
ಅಸಾದುಲ್ಲಾನು ಇಲ್ಲಿಂದಲೇ ಹೈದರಾಬಾದ್‌ಗೆ ಸ್ಫೋಟಕ ಸಾಗಿಸಿ ಅಲ್ಲಿ ಸ್ಫೋಟಿಸಿದ್ದ. ಬಳಿಕ ಮಂಗಳೂರಿಗೆ ವಾಪಸಾಗಿ ಕೆಲವು ದಿನ ಇಲ್ಲಿದ್ದು ಅನಂತರ ಪಲಾಯನ ಮಾಡಿದ್ದ ಎಂಬ ಅಂಶ ತನಿಖೆಯಿಂದ ಬಹಿರಂಗಗೊಂಡಿತ್ತು.
ಈತನ ಜತೆಗೆ ಇಲ್ಲಿ ಬಾಂಬ್ ಜೋಡಿಸುವುದರಲ್ಲಿ ಪಳಗಿದವರೆನ್ನಲಾದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ತಹಸೀನ್ ಅಖ್ತರ್ ಯಾನೆ ಮೋನು ಯಾನೆ ಹಸನ್ (ಬಿಹಾರಿ) ಮತ್ತು ವಕಾಸ್ ಯಾನೆ ಅಹಮದ್ (ಪಾಕ್ ನಿವಾಸಿ) ಕೂಡ ಉಳಿದುಕೊಂಡಿದ್ದರು. ಅಸಾದುಲ್ಲಾ ಬಾಂಬ್ ಇಡುವ ಹಾಗೂ ಮೋನು ಮತ್ತು ವಕಾಸ್ ಸರ್ಕ್ನೂಟ್ ಜೋಡಿಸುವ ಕೆಲಸ ನಿರ್ವಹಿಸುತ್ತಿದ್ದರು. ಮೋನು ಮತ್ತು ವಕಾಸ್ ಅವರಿಬ್ಬರೂ 2011ರ ಮುಂಬಯಿ ಮತ್ತು 2013ರ ಹೈದರಾಬಾದ್ ಸ್ಫೋಟಗಳಲ್ಲಿ ಭಾಗಿಯಾಗಿದ್ದರು. ಮೋನು ಮತ್ತು ವಕಾಸ್ ಮತ್ತೂಂದು ಬಾಂಬ್ ಸ್ಫೋಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗಲೇ ಸೂತ್ರದಾರರಾದ ಯಾಸಿನ್ ಮತ್ತು ಅಸಾದುಲ್ಲಾ ಬಂಧಿತರಾಗಿದ್ದರು.
2007ರ ಹೈದರಾಬಾದ್ ಸ್ಫೋಟಕ್ಕೆ ಸಂಬಂಧಿಸಿ 2008 ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಅಕºರ್ ಇಸ್ಮಾಯಿಲ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ರಿಯಾಜ್ ಭಟ್ಕಳ್ ಮತ್ತು ಯಾಸಿನ್ ಭಟ್ಕಳ್ ಹೆಸರು ಕೇಳಿ ಬಂದಿತ್ತು. ರಿಯಾಜ್ ಮತ್ತು ಯಾಸಿನ್‌ಗಾಗಿ ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭ ಉಳ್ಳಾಲದ ಮುಕ್ಕಚ್ಚೇರಿಯ ಮನೆಯೊಂದರಲ್ಲಿ ಕೆಲವು ಸ್ಫೋಟಕಗಳು, ಬಟ್ಟೆ ಬರೆ ಲಭಿಸಿದ್ದು, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸುಳಿವು ಸಿಕ್ಕಿತ್ತು. ಆಗಲೂ ಐವರನ್ನು ಬಂಧಿಸಲಾಗಿತ್ತು.