Advertisement

ವೈದ್ಯ ವಿದ್ಯಾರ್ಥಿಗಳ ಗಾಂಜಾ ಪ್ರಕರಣ: ಹೈಕೋರ್ಟ್‌ ಮಧ್ಯಪ್ರವೇಶಿಸಲು, ಸಿಬಿಐಗೆ ವಹಿಸಲು ಆಗ್ರಹ

12:50 AM Jan 25, 2023 | Team Udayavani |

ಮಂಗಳೂರು: ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ ಇತ್ತೀಚೆಗೆ ವರದಿಯಾದ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳ ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಆದ್ದರಿಂದ ಹೈಕೋರ್ಟ್‌ ಮಧ್ಯ ಪ್ರವೇಶ ಮಾಡಬೇಕು ಇಲ್ಲವೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ, ನಿಕಟಪೂರ್ವ ಜಿಲ್ಲಾ ಸರಕಾರಿ ಅಭಿಯೋಜಕ ಮನೋರಾಜ್‌ ರಾಜೀವ ಮತ್ತು ವಿಧಿ ವಿಜ್ಞಾನ ತಜ್ಞ ಡಾ| ಮಹಾಬಲೇಶ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Advertisement

ಮನೋರಾಜ್‌ ಮಾತನಾಡಿ, ಮಾದಕ ವಸ್ತುಗಳನ್ನು ಮಾರಾಟ ಮಾಡುವವರನ್ನು ಬಂಧಿಸಿರು ವುದರಲ್ಲಿ ಯಾವುದೇ ಆಕ್ಷೇಪ ಇಲ್ಲ. ಆದರೆ ಸೇವಿಸಿದ್ದವರನ್ನು ಬಂಧಿಸು ವಾಗ ಕೆಲವೊಂದು ಕಾನೂನಾತ್ಮಕ ಅಂಶಗಳನ್ನು ಪಾಲಿಸಬೇಕಾಗುತ್ತದೆ. ಎನ್‌ಡಿಪಿಎಸ್‌ ಕಾಯ್ದೆ 64(ಎ) ಪ್ರಕಾರ ಅವರನ್ನು ಜೈಲಿಗೆ ಕಳುಹಿಸುವಂತಿಲ್ಲ. ಬದಲಾಗಿ ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಿ ಕೌನ್ಸೆಲಿಂಗ್‌ ನಡೆಸಬೇಕು. ಆದರೆ ಈ ಪ್ರಕರಣದಲ್ಲಿ ಆರೋಪಿ ಗಳಾಗಿರುವ ವೈದ್ಯರು, ವೈದ್ಯ ವಿದ್ಯಾರ್ಥಿ ಗಳ ಫೋಟೋ, ಹುದ್ದೆ, ವಿಳಾಸ ಎಲ್ಲವನ್ನೂ ಬಹಿರಂಗ ಪಡಿಸ ಲಾಗಿದೆ. ವಿದ್ಯಾರ್ಥಿಗಳನ್ನು ಗುರಿ ಪಡಿಸುವುದರೊಂದಿಗೆ ಕುಟುಂಬದ ಗೌರವಕ್ಕೂ ಧಕ್ಕೆ ತರಲಾಗಿದೆ ಎಂದು ಆರೋಪಿಸಿದರು.

ನಷ್ಟ ಭರಿಸುವವರಾರು?
ಶೈಕ್ಷಣಿಕ ಕೇಂದ್ರವಾಗಿ ಹೆಸರಾಗಿರುವ ಮಂಗಳೂರಿಗೆ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೊಡೆತ ಬಿದ್ದಿದೆ. ಶಿಕ್ಷಣ ಸಂಸ್ಥೆಗಳ ಹೆಸರು ಹಾಳಾಗುತ್ತಿದೆ. ಪೊಲೀಸ್‌ ಇಲಾಖೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುವಲ್ಲಿ ವಿಫಲವಾಗಿದೆ. ಅವರಿಗೆ ಮಾರ್ಗದರ್ಶನ ನೀಡಬೇಕಾದ ಹಿರಿಯ ಪೊಲೀಸ್‌ ಅಧಿಕಾರಿಗಳು, ಗೃಹ ಇಲಾಖೆ, ಸರಕಾರ ಎಲ್ಲರೂ ಇದಕ್ಕೆ ಜವಾಬ್ದಾರರು. ಒಂದು ವೇಳೆ ನ್ಯಾಯಾಲಯದಲ್ಲಿ ಸಂತ್ರಸ್ತರದ್ದು ತಪ್ಪಿಲ್ಲ ಎಂದು ಸಾಬೀತಾದರೆ, ಇದ ರಿಂದಾದ ನಷ್ಟವನ್ನು ಪೊಲೀಸ್‌ ಇಲಾಖೆ ಅಥವಾ ಸರಕಾರ ಭರಿಸು ತ್ತದೆಯೇ. . ಆದ್ದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ನಿಟ್ಟಿ ನಲ್ಲಿಯೂ ಚಿಂತನೆ ನಡೆಸಿದ್ದೇವೆ ಎಂದರು.

ಜೈಲಿಗಟ್ಟುವುದರಿಂದ ಪರಿವರ್ತನೆ ಅಸಾಧ್ಯ
ವಿಧಿ ವಿಜ್ಞಾನ ತಜ್ಞ ಡಾ| ಮಹಾ ಬಲೇಶ್‌ ಶೆಟ್ಟಿ ಮಾತನಾಡಿ, ವಿಚಾರಣೆಗೆ ಒಳಪಡಿಸುವ ವೇಳೆ ನಡೆಸುವ ತಪಾಸಣೆ(ಸ್ಕ್ರೀನಿಂಗ್‌ ಟೆಸ್ಟ್‌)ಯೇ ಅಂತಿಮವಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ದೃಢೀಕರಣ ವರದಿ ಪಡೆಯಬೇಕು. ಈ ಪ್ರಕರಣದಲ್ಲಿ ಎಫ್‌ಎಸ್‌ಎಲ್‌ ದೃಢೀಕರಣವಾಗಿಲ್ಲ. ಜೈಲಿಗೆ ಕಳುಹಿಸುವುದರಿಂದ ಅವರ ಪರಿವರ್ತನೆ ಸಾಧ್ಯವಿಲ್ಲ. ಬದಲಾಗಿ ಅವರ ಮನಸ್ಥಿತಿ ಮೇಲೆ ಪರಿಣಾಮ ಬೀರಬಹುದು. ಒಂದೇ ಕಾಲೇಜನ್ನು ಗುರಿ ಮಾಡುವ ಪ್ರಯತ್ನವೂ ಇಲ್ಲಿ ನಡೆದಿದೆ. ಜಿಲ್ಲೆಗೆ ಮಾದಕ ವಸ್ತುಗಳು ಯಾವ ಮೂಲದಿಂದ ಬರುತ್ತವೆ ಎನ್ನುವುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದು ಪೊಲೀಸ್‌ ಇಲಾಖೆ ಸರಕಾರದ ಜವಾಬ್ದಾರಿ ಎಂದವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next