ಮಂಗಳೂರು: ನಗರದ ಅಳಕೆ ಮಾರ್ಕೆಟ್ ಎದುರು 2015ರಲ್ಲಿ ನಡೆದ ಕುದ್ರೋಳಿಯ ಲತೀಶ್ ನಾಯಕ್ ಮತ್ತು ಇಂದ್ರಜಿತ್ ಕೊಲೆಯತ್ನ ಪ್ರಕರಣದ 5 ಮಂದಿ ಅಪರಾಧಿಗಳಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಮೂಲ್ಕಿ ನಿವಾಸಿಗಳಾದ ರವಿಚಂದ್ರ ಆಲಿಯಾಸ್ ವಿಕ್ಕಿ ಪೂಜಾರಿ (ಸೈಕೊ ವಿಕ್ಕಿ) (32), ಆತನ ಸಹೋದರ ಶಶಿ ಪೂಜಾರಿ (30), ವಾಮಂಜೂರು ಪೆರ್ಮಂಕಿಯ ಧನರಾಜ್ ಪೂಜಾರಿ (31), ಬೋಳೂರಿನ ಮೋಕ್ಷಿತ್ ಸಾಲ್ಯಾನ್ (28) ಮತ್ತು ರಾಜೇಶ್ (30) ಶಿಕ್ಷೆಗೊಳಗಾದವರು. ಇನ್ನೋರ್ವ ಆರೋಪಿ ಗಣೇಶ್ (28) ತಲೆಮರೆಸಿಕೊಂಡಿದ್ದಾನೆ.
2015ರ ಜು. 27ರಂದು ಸಂಜೆ 6.30ರ ಸುಮಾರಿಗೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಅಳಕೆ ಮಾರ್ಕೆಟ್ ಎದುರು ಲತೀಶ್ ನಾಯಕ್ ರಸ್ತೆ ದಾಟುತ್ತಿದ್ದಾಗ ಆರೋಪಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದರು. ಅವರನ್ನು ಬಿಡಿಸಲು ಬಂದ ಗೆಳೆಯ ಇಂದ್ರಜಿತ್‌ನ ಮೇಲೆ ಕೂಡ ದಾಳಿ ನಡೆಸಿದ್ದರು. ಇದರಿಂದ ಲತೀಶ್ ಮತ್ತು ಇಂದ್ರಜಿತ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಇನ್‌ಸ್ಪೆಕ್ಟರ್‌ಗಳಾದ ಟಿ.ಡಿ. ನಾಗರಾಜ್ ಮತ್ತು ಭಜಂತ್ರಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗ ಮಾರ್ಗರೆಟ್ ಕ್ರಾಸ್ತಾ ಅವರು ವಾದಿಸಿದ್ದರು.
ಆರೋಪಿಗಳಿಗೆ ನ್ಯಾಯಾಧೀಶರು ಭಾರತೀಯ ದಂಡಸಂಹಿತೆ ಕಲಂ 143ರಡಿ 3 ತಿಂಗಳ ಸಾದಾ ಸಜೆ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 15 ದಿನ ಹೆಚ್ಚುವರಿ ಸಾದಾ ಸಜೆ, ಕಲಂ 149ರಡಿ 2 ವರ್ಷ ಸಾದಾ ಸಜೆ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಾದಾ ಸಜೆ, ಕಲಂ 307ರ ಅಡಿ ಲತೇಶ್ ಕೊಲೆಯತ್ನಕ್ಕೆ 4 ವರ್ಷ ಕಠಿನ ಸಜೆ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಹೆಚ್ಚುವರಿ ಸಾದಾ ಸಜೆ, ಇಂದ್ರಜಿತ್ ಕೊಲೆಯತ್ನಕ್ಕೆ 4 ವರ್ಷ ಕಠಿನ ಸಜೆ, 2,500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಸಂಗ್ರಹಿಸುವ ಒಟ್ಟು 1.60 ಲ.ರೂ. ದಂಡದ ಮೊತ್ತವನ್ನು ಇಂದ್ರಜಿತ್‌ನ ತಾಯಿಗೆ ನೀಡಬೇಕು. ಅಲ್ಲದೆ ಕಾನೂನು ಸೇವಾ ಪ್ರಾಧಿಕಾರದಿಂದಲೂ ಇಂದ್ರಜಿತ್ ತಾಯಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.