ಮಂಗಳೂರು: ನಗರದ ಡೊಂಗರಕೇರಿಯಲ್ಲಿ ಬಾಲಕೃಷ್ಣ ನಾಯಕ್ ಅವರ ಮನೆಯ ಕೊಟ್ಟಿಗೆಯ ಬಳಿಯಲ್ಲಿದ್ದ ಸುಮಾರು 9 ಅಡಿ ಉದ್ದದ ಹೆಬ್ಬಾವೊಂದನ್ನು ಲಕ್ಷ್ಮೀ ಕಾಮತ್ ಅವರು ಸೆರೆ ಹಿಡಿದು ರಕ್ಷಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳವಾರ ರಾತ್ರಿ 9.30ರ ಸುಮಾರಿಗೆ ಬಾಲಕೃಷ್ಣ ಅವರ ಹಟ್ಟಿಯ ಬಳಿ ಹೆಬ್ಬಾವು ಪತ್ತೆಯಾಗಿತ್ತು. ವಿಷಯ ತಿಳಿದ ಸ್ಥಳೀಯರೂ ಸ್ಥಳದಲ್ಲಿ ನೆರೆದರು. ಆದರೆ ಯಾರೂ ಹೆಬ್ಬಾವನ್ನು ಹಿಡಿಯಲು ಮುಂದಾಗಲಿಲ್ಲ.
ಹಾವು ಕಟ್ಟಿಗೆಯ ರಾಶಿಯೊಳಗೆ ಹೋಗುವ ಭೀತಿ ಇತ್ತು. ಈ ವೇಳೆ ನೆರೆಮನೆ ನಿವಾಸಿ ಲಕ್ಷ್ಮೀ ಕಾಮತ್ ಅವರು, ಹೆಬ್ಟಾವನ್ನು ಸಾಹಸದಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಉರಗತಜ್ಞ ಆದಿತ್ಯ ಅವರ ನೆರವಿನಿಂದ ಗೋಣಿ ಚೀಲಕ್ಕೆ ತುಂಬಿಸಿ ದೂರದ ಸುರಕ್ಷಿತ ಜಾಗಕ್ಕೆ ಬಿಟ್ಟು ಬರಲಾಯಿತು.
ಈ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಲಕ್ಷ್ಮೀ ಕಾಮತ್ ಅವರು, ಪತಿ ರಾಘವೇಂದ್ರ ಹಾವು ಹಿಡಿಯುತ್ತಿರುವುದನ್ನು ಗಮನಿಸಿ ಅವುಗಳನ್ನು ಮುಟ್ಟುತ್ತಿದ್ದೆ. ಇದರಿಂದ ಹೆಬ್ಬಾವು ಹಿಡಿಯಲು ಧೈರ್ಯ ಸಿಕ್ಕಿತು ಎಂದು ತಿಳಿಸಿದ್ದಾರೆ.
ಮೂರು ವರ್ಷಗಳಿಂದ ಹೆಬ್ಬಾವು ಮನೆ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಕಳೆದ ವರ್ಷ ಉರಗ ತಜ್ಞರು ಸೆರೆ ಹಿಡಿದಿದ್ದರು. ಈ ಬಾರಿಯೂ ಉರಗ ತಜ್ಞರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಅವರು ಬರುವ ಮೊದಲೇ ಲಕ್ಷ್ಮೀ ಕಾಮತ್ ಸೆರೆ ಹಿಡಿದಿದ್ದಾರೆ. ಸುಮಾರು 9 ಅಡಿಯ ಹೆಬ್ಬಾವನ್ನು ಲಕ್ಷ್ಮೀ ಕಾಮತ್ ಧೈರ್ಯ ಮಾಡಿ ಸೆರೆ ಹಿಡಿದಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.