Advertisement

ಮಂಗಳೂರು ಕಾರಾಗೃಹದಲ್ಲಿ ಹಲ್ಲೆ ಪ್ರಕರಣ : ಕೇರಂ ಬೋರ್ಡ್‌, ಟ್ಯೂಬ್‌ಲೈಟ್‌ನಿಂದ ಆಯುಧ ತಯಾರಿ !

07:27 PM Apr 26, 2021 | Team Udayavani |

ಮಂಗಳೂರು : ಮಂಗಳೂರಿನ ಜಿಲ್ಲಾ ಕಾರಾಗೃಹದೊಳಗೆ ಇದ್ದ ಸೊತ್ತುಗಳನ್ನು ಬಳಸಿ ಕೈದಿಗಳು ಮರದ ಚೂರಿ ಮಾದರಿಯ ಮಾರಾಕಾಸ್ತ್ರಗಳನ್ನು ತಯಾರು ಮಾಡಿಟ್ಟುಕೊಂಡಿದ್ದರು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

Advertisement

ರವಿವಾರ ಕಾರಾಗೃಹದಲ್ಲಿ ನಡೆದ ಹಲ್ಲೆ ಘಟನೆ ಸಂದರ್ಭ ಕಾರಾಗೃಹಕ್ಕೆ ಭೇಟಿ ನೀಡಿದಾಗ ಹಳೆಯ ಕೇರಂ ಬೋರ್ಡ್‌ನ ಫ್ರೇಮ್ ಅನ್ನು ಹರಿತವಾದ ಆಯುಧವನ್ನಾಗಿ ಮಾಡಿ ಚೂರಿ ರೀತಿಯಲ್ಲಿ ಬಳಸಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಟ್ಯೂಬ್‌ಲೈಟ್‌ ಪುಡಿಗಳನ್ನು ಶೇಖರಿಸಿ ಅದನ್ನು ಬಟ್ಟೆಯೊಳಗಿರಿಸಿ ಅದರಿಂದ ದಾಳಿ ಮಾಡಲು ತಂತ್ರಗಾರಿಕೆ ರೂಪಿಸಿರುವುದು ಕೂಡ ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.

5 ಪ್ರಕರಣ ದಾಖಲು
ಕಾರಾಗೃಹದಲ್ಲಿ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿ ಒಟ್ಟು 5 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಸಮೀರ್‌ ವಿರುದ್ಧ ಈಗಾಗಲೇ ಕೊಲೆಯತ್ನ, ದರೋಡೆ, ಕಳ್ಳತನ ಸೇರಿದಂತೆ 10ಕ್ಕೂ ಅಧಿಕ ಪ್ರಕರಣಗಳಿವೆ. ಈತ ಈ ಹಿಂದೆ ಎಎಸ್‌ಐ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ್ದ. ಅನ್ಸಾರ್‌ ಕೂಡ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯಾಗಿದ್ದಾನೆ. ಸಮೀರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಿದೆ. ಸಮೀರ್‌ ಮತ್ತು ಇತರ 20 ಮಂದಿ ಕೈದಿಗಳನ್ನು ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಕಾರಾಗೃಹದಲ್ಲಿ ಯಾವ ಕಾರಣಕ್ಕೆ ಹಲ್ಲೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಅಗತ್ಯವಾದರೆ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಿಸಲಾಗುವುದು ಎಂದವರು ತಿಳಿಸಿದರು.

ಇದನ್ನೂ ಓದಿ :ವಾರಾಂತ್ಯ ಕರ್ಫ್ಯೂ : ಎರಡು ದಿನದಿಂದ ಬೋಟ್‌ಗಳಲ್ಲಿ ಬಾಕಿಯಾಗಿದ್ದ ಮೀನು ಅನ್‌ಲೋಡ್‌!

ಕೈದಿಗಳಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದ
ಕಳೆದ ಜೂನ್‌ನಿಂದ ಮಂಗಳೂರು ಕಾರಾಗೃಹದಲ್ಲಿದ್ದ ಸಮೀರ್‌ ಇತರ ಕೈದಿಗಳನ್ನು ಬೆದರಿಸಿ ಆತನ ಗ್ಯಾಂಗ್‌ಗೆ ಸೇರಿಸಿಕೊಳ್ಳುತ್ತಿದ್ದ. ಅನಂತರ ಅವರನ್ನು ತನ್ನ ಕೈ, ಕಾಲು ಒತ್ತುವುದು ಮೊದಲಾದ ಸೇವೆಗಳಿಗೂ ಬಳಸಿಕೊಳ್ಳುತ್ತಿದ್ದ. ರವಿವಾರ ನಡೆದ ಹಲ್ಲೆ ಪ್ರಕರಣದಲ್ಲಿ ಆತನ ಗ್ಯಾಂಗ್‌ಗೆ ಸೇರಿದವರು ಕೂಡ ಕೆಲವರು ಇದ್ದರು ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

ಮಾರಕಾಸ್ತ್ರ, ಗಾಂಜಾ ಕಡಿಮೆ
ಬೇರೆ ಕೆಲವು ಕಾರಾಗೃಹಗಳಿಗೆ ಹೋಲಿಸಿದರೆ ಮಂಗಳೂರು ಕಾರಾಗೃಹದಲ್ಲಿ ಇತ್ತೀಚೆಗೆ ಮಾರಕ ಆಯುಧ, ಗಾಂಜಾ ಪ್ರಕರಣಗಳು ತುಂಬಾ ಕಡಿಮೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಕಾರಾಗೃಹದ ಹೊರಗೆ ಭದ್ರತೆಯನ್ನು ನೋಡಿಕೊಳ್ಳುತ್ತಿದೆ ಎಂದು ಆಯುಕ್ತರು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾರಾಗೃಹದಲ್ಲಿ ಮೊಬೈಲ್‌ ಸಿಕ್ಕಿದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next