Advertisement

ಮಂಗಳೂರು IT ಕಚೇರಿ ಎತ್ತಂಗಡಿ: ಸರ್ವಥಾ ಸರಿಯಲ್ಲ; ಸಂಸದ ನಳಿನ್‌; ಹಣಕಾಸು ಸಚಿವೆಗೆ ಮನವಿ

11:14 PM Sep 05, 2020 | mahesh |

ಮಂಗಳೂರು: ಎರಡು ದಶಕಗಳಿಗಿಂತ ಹೆಚ್ಚು ಕಾಲ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆದಾಯ ತೆರಿಗೆ ಪ್ರಧಾನ ಆಯುಕ್ತರ (ಆಡಳಿತ) ಕಚೇರಿಯನ್ನು ಗೋವಾದ ಪಣಜಿಯ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯಲ್ಲಿ ವಿಲೀನಗೊಳಿಸಬಾರದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.

Advertisement

ವಿಲೀನ ವಿಚಾರವು ಕರಾವಳಿ ಕರ್ನಾಟಕದ ಉದ್ಯಮಿ ಹಾಗೂ ವೃತ್ತಿಪರ ಲೆಕ್ಕ ಪರಿಶೋಧಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಮಂಗಳೂರು ನಗರವು ಕರ್ನಾಟಕ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದ್ದು, ಈ ನಗರವು ರಸ್ತೆ, ವಿಮಾನ, ರೈಲ್ವೆ ಹಾಗೂ ಜಲಸಂಪರ್ಕ ಹೊಂದಿದೆ. ಶೈಕ್ಷಣಿಕ ಕೇಂದ್ರವೆಂದು ಕರೆಯಲ್ಪಡುವ, ಶೇಷ್ಠ ಧಾರ್ಮಿಕ ಪರಂಪರೆಯನ್ನು ಹೊಂದಿದ್ದು, ಅನೇಕ ಬ್ಯಾಂಕಿಂಗ್‌ ಸಂಸ್ಥೆಗಳಿಗೆ ಜನ್ಮ ನೀಡಿದ ಪ್ರದೇಶ. ಇದು ನಮ್ಮ ರಾಜ್ಯಕ್ಕೆ ಮತ್ತು ನಮ್ಮ ದೇಶಕ್ಕೆ ಹೆಮ್ಮೆ. ತೆರಿಗೆದಾರರ ಪ್ರಾಮಾಣಿಕತೆ, ಸುಮಾರು 4.50 ಲಕ್ಷ ರೂ. ಮತ್ತು ಹೆಚ್ಚಿನ ತೆರಿಗೆ ಪಾವತಿದಾರರು ಮತ್ತು ಸುಮಾರು 2 ಸಾವಿರ ವೃತ್ತಿಪರರನ್ನು ಹೊಂದಿರುವ ಮಂಗಳೂರಿನ ಆದಾಯ ತೆರಿಗೆ ಕಚೇರಿಯು ತೆರಿಗೆದಾರರ ನಡುವೆ ಸಂಪರ್ಕ ಸೇತುವಾಗಿದೆ. ಕಚೇರಿಯನ್ನು ಬೇರೆ ರಾಜ್ಯದೊಂದಿಗೆ ವಿಲೀನ ಮಾಡುವುದು ಇಲ್ಲಿನ ನಾಗರಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಮಯ, ಹಣ ವ್ಯರ್ಥ
ಮಂಗಳೂರು ಹಾಗೂ ಪಣಜಿ ನಡುವಿನ ಅಂತರ ಸುಮಾರು 376 ಕಿ.ಮೀ. ಪಣಜಿಗೆ ಕೇವಲ ರೈಲು ಅಥವಾ ರಸ್ತೆಯ ಮೂಲಕ ಮಾತ್ರ ಪ್ರಯಾಣಿಸಲು ಅವಕಾಶವಿದೆ. ಮಂಗಳೂರಿನಿಂದ ನೇರ ವಿಮಾನ ಸೌಲಭ್ಯ ಲಭ್ಯವಿಲ್ಲ. ಮಂಗಳೂರಿನಿಂದ ಪಣಜಿಗೆ ನೇರ ರೈಲುಗಳಿಲ್ಲ. ತೆರಿಗೆದಾರರು ಮತ್ತು ಅವರ ಅಧಿಕೃತ ಪ್ರತಿನಿಧಿಗಳು ಗೋವಾದ ಮಡ್ಗಾಂವ್‌ನಲ್ಲಿ ಇಳಿದು 36 ಕಿ.ಮೀ ದೂರದಲ್ಲಿ ಬಸ್‌ ಅಥವಾ ಖಾಸಗಿ ಟ್ಯಾಕ್ಸಿ ಮೂಲಕ ಪಣಜಿ ತಲುಪಬೇಕು. ಇದಕ್ಕಾಗಿ ಸಾಕಷ್ಟು ಸಮಯವನ್ನು ವ್ಯಯಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ನೇರ ತೆರಿಗೆಗೆ ಸಂಬಂಧಿಸಿದ ಬಾಕಿ ಇರುವ ವಿವಾದಗಳನ್ನು ಬಗೆಹರಿಸಲು 2020ರ ಬಜೆಟ್‌ನಲ್ಲಿ ವಿವಾಡ್‌ ಸೆ ವಿಶ್ವಾಸ್‌ ಯೋಜನೆ ಪರಿಚಯಿಸಲಾಗಿದ್ದು, ವಿವಿಧ ಮೇಲ್ಮನವಿ ವೇದಿಕೆಗಳಲ್ಲಿ ಬಾಕಿ ಇರುವ ಮೇಲ್ಮನವಿಗಳಲ್ಲಿ ನಿರ್ಬಂಧಿಸಲಾದ ಹಣ ಪಡೆಯಲು ಪಣಜಿಗೆ ಪ್ರಯಾಣಿಸುವ ಬದಲು ಪ್ರಧಾನ ಆಯುಕ್ತರ ಕಚೇರಿ ಮಂಗಳೂರಿನಲ್ಲಿದ್ದರೆ ತುಂಬಾ ಅನುಕೂಲವಾಗುತ್ತದೆ ಎಂದಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಗೆ ಮನವಿ
ಮಂಗಳೂರು: ಮಂಗಳೂರಿನಲ್ಲಿ ಆದಾಯ ತೆರಿಗೆ ಪ್ರಧಾನ ಆಯುಕ್ತರ (ಪಿಸಿಐಟಿ) ಕಚೇರಿಯನ್ನು ಉಳಿಸಿಕೊಳ್ಳುವಂತೆ ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ (ಐಸಿಎಐ) ಮಂಗಳೂರು ಶಾಖೆಯ ವತಿಯಿಂದ ಕೇಂದ್ರ ಸಚಿವ ಡಿ.ವಿ. ಅವರಿಗೆ ಮನವಿ ಸಲ್ಲಿಸಲಾಯಿತು. ಮಂಗಳೂರು ಅನೇಕ ವ್ಯವಹಾರಗಳು, ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಟ್ರಸ್ಟ್‌ಗಳು ಇತ್ಯಾದಿಗಳ ಕೇಂದ್ರವಾಗಿದ್ದು, ಕಚೇರಿ ಸ್ಥಳಾಂತರದಿಂದ ತೊಂದರೆಯಾಗುತ್ತದೆ ಎಂದು ಐಸಿಎಐನ ಮಂಗಳೂರು ಶಾಖೆಯ ಅಧ್ಯಕ್ಷ ಎಸ್‌.ಎಸ್‌. ನಾಯಕ್‌ ಮನವಿಯಲ್ಲಿ ಉಲ್ಲೇಖೀಸಿದ್ದಾರೆ.

Advertisement

ಐಸಿಎಐನ ಉಡುಪಿ ಶಾಖೆಯ ಅಧ್ಯಕ್ಷ ಪ್ರದೀಪ್‌ ಜೋಗಿ, ಕಾರ್ಯದರ್ಶಿ ಲೋಕೇಶ್‌, ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಅಧ್ಯಕ್ಷ ಐಸಾಕ್‌ ವಾಸ್‌, ಸುದೇಶ್‌ ರೈ, ಅನಂತ ಪದ್ಮನಾಭ, ಅಬ್ದುರ್‌ ರಹಮಾನ್‌ ಮುಸ್ಬಾ, ಮಹಿಳಾ ಪ್ರತಿನಿಧಿ ಯಶಶ್ವಿ‌ನಿ ಕೆ. ಅಮೀನ್‌ ಉಪಸ್ಥಿತರಿದ್ದರು.

ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್‌ ಅವರಲ್ಲಿ ಈ ವಿಚಾರ ಪ್ರಸ್ತಾವಿಸಲಾಗುವುದು ಎಂದು ಡಿವಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next