Advertisement

Mangaluruಯುವತಿಯ ಕೊಲೆ ಯತ್ನ ಪ್ರಕರಣ: ಅಪರಾಧಿ ಸುಶಾಂತ್‌ಗೆ 18 ವರ್ಷ 1 ತಿಂಗಳ ಸಜೆ

12:53 AM Jan 13, 2024 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ, ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲಿ 2019ರಲ್ಲಿ ಯುವತಿಯೊಬ್ಬಳಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಂಗಳೂರಿನ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಯುವಕ ಸುಶಾಂತ್‌ ಯಾನೆ ಶಾನ್‌ (31)ಗೆ ಒಟ್ಟು 18 ವರ್ಷ 1 ತಿಂಗಳು ಸಜೆ ವಿಧಿಸಿ ಆದೇಶ ನೀಡಿದೆ.

Advertisement

ಐಪಿಸಿ ಸೆಕ್ಷನ್‌ 341 ಶಿಕ್ಷಾರ್ಹ ಕಲಂಗೆ 1 ತಿಂಗಳು ಸಜೆ. 326 ಶಿಕ್ಷಾರ್ಹ ಕಲಂಗೆ 7 ವರ್ಷ ಕಠಿನ ಸಜೆ, 1 ಲಕ್ಷ ರೂ. ದಂಡ. ದಂಡ ಪಾವತಿಗೆ ವಿಫಲವಾದರೆ 1 ವರ್ಷ ಕಠಿನ ಕಜೆ. 307ರ ಶಿಕ್ಷಾರ್ಹ ಕಲಂಗೆ 10 ವರ್ಷದ ಕಠಿನ ಸಜೆ ಮತ್ತು 1 ಲಕ್ಷ ರೂ.ದಂಡ. ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಕಠಿನ ಸಜೆ. 354ರ ಶಿಕ್ಷಾರ್ಹ ಕಲಂಗೆ 1 ವರ್ಷದ ಕಠಿನ ಸಜೆ ಮತ್ತು 10 ಸಾವಿರ ರೂ.ದಂಡ ಪಾವತಿ. ದಂಡ ಪಾವತಿಸಲು ತಪ್ಪಿದರೆ 2 ತಿಂಗಳ ಕಠಿನ ಸಜೆ. 309 ಶಿಕ್ಷಾರ್ಹ ಕಲಂಗೆ 1 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಎಲ್ಲ ಶಿಕ್ಷೆಗಳನ್ನು ಒಂದರ ಅನಂತರ ಒಂದರಂತೆ ಪ್ರತ್ಯೇಕವಾಗಿ ಅನುಭವಿಸಬೇಕು ಎಂದು ನ್ಯಾಯಧೀಶರಾದ ಪ್ರೀತಿ ಕೆ.ಪಿ.ಅವರು ಆದೇಶ ನೀಡಿದ್ದಾರೆ. ದಂಡದ ರೂಪದಲ್ಲಿ ವಸೂಲಾಗುವ ಹಣದಲ್ಲಿ 2 ಲಕ್ಷ ರೂ. ವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣದ ವಿವರ
2019ರ ಜೂ.28ರಂದು ಸಂಜೆ 4.30ಕ್ಕೆ ಕೋಟೆಕಾರು ಗ್ರಾಮದ ದೇರಳಕಟ್ಟೆ ಬಗಂಬಿಲ ರಸ್ತೆಯ ಶಾಂತಿಧಾಮದ ಬಳಿ ಸಂತ್ರಸ್ತ ಯುವತಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಸುಶಾಂತ್‌ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ. ಬಳಿಕ ಆಕೆಯನ್ನು ತಡೆದು ಅವಳ ಮೈ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿ, ಮಾನಭಂಗ ಮಾಡಿ, ತನ್ನಲ್ಲಿದ್ದ ಚೂರಿಯಿಂದ ಆಕೆಯ ಎದೆಗೆ, ಹೊಟ್ಟೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರವಾಗಿ ತಿವಿದು ಗಾಯಗೊಳಿಸಿ ಕೊಲೆ ಮಾಡಲು ಯತ್ನಿಸಿದ್ದ. ಆಕೆ ಪ್ರಜ್ಞಾ ಹೀನಳಾಗಿ ಬಿದ್ದ ಬಳಿಕ ಅದೇ ಚೂರಿಯಿಂದ ತನ್ನ ಕುತ್ತಿಗೆಗೆ ಹಾಗೂ ಕೈಯ ನಾಡಿಗೆ ಇರಿದು ಆತ್ಮಹತ್ಯೆಗೆ ಪ್ರಯತ್ನಪಟ್ಟು ಸ್ಥಳದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ. ಸ್ಥಳೀಯರು, ಪಕ್ಕದ ಖಾಸಗಿ ಆಸ್ಪತ್ರೆ ಸಿಬಂದಿಯವರು ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರೂ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದರು.

ಜಾಮೀನಿನಲ್ಲಿ ಬಿಡುಗಡೆಯಾಗಿದ್ದ
ಸುಶಾಂತ್‌ ನೃತ್ಯ ತರಬೇತುದಾರನಾಗಿದ್ದು, ಯುವತಿ ಕಲಿಯುತ್ತಿದ್ದ ಕಾಲೇಜಿನಲ್ಲಿ ನೃತ್ಯ ಕಲಿಸುತ್ತಿದ್ದ. ಆಕೆಯೊಂದಿಗೆ ಗೆಳೆತನದಿಂದ ಇದ್ದು, ಪ್ರೀತಿಸುವಂತೆ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಬಗ್ಗೆ ಈ ಮೊದಲೇ ಆಕೆ ಕಾರ್ಕಳದ ಗ್ರಾಮಾಂತರ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದಳು. ಆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆತ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಈ ದ್ವೇಷದಿಂದ ಆತ ಕೃತ್ಯ ಎಸಗಿದ್ದ.

ಸಿಸಿ ಕೆಮರಾದಲ್ಲಿ ದೃಶ್ಯ ಸೆರೆ
ಉಳ್ಳಾಲ ಠಾಣೆಯ ಅಂದಿನ ಉಪನಿರೀಕ್ಷಕರಾಗಿದ್ದ ಗುರಪ್ಪ ಕಾಂತಿ ಅವರು ಸಮಗ್ರ ತನಿಖೆ ನಡೆಸಿ, 34 ಸಾಕ್ಷಿದಾರರನ್ನು ವಿಚಾರಣೆ ಮಾಡಿ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿ ದಾಖಲಿಸಿದ್ದರು. ಘಟನೆಯ ಸಂಪೂರ್ಣ ಚಿತ್ರಣ ಸಮೀಪದ ಕೆಎಸ್‌ ಹೆಗ್ಡೆ ಆಸ್ಪತ್ರೆಯ ಹಿಂಭಾಗದ 2 ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ತನಿಖಾಧಿಕಾರಿಯವರು ಸಿಸಿ ಕೆಮರಾ ದೃಶ್ಯಾವಳಿಯನ್ನು ಸಂಗ್ರಹಿಸಿ ಪ್ರಮುಖ ಸಾಕ್ಷ್ಯಧಾರವನ್ನಾಗಿ ದೋಷಾರೋಪಣ ಪಟ್ಟಿಯಲ್ಲಿ ಸೇರಿಸಿದ್ದರು.

Advertisement

ಒಡನಾಟದಲ್ಲಿದ್ದ ಬಗ್ಗೆ ಸಾಕ್ಷಿ ನುಡಿದಿದ್ದ
2021ರ ಫೆಬ್ರವರಿ 10ರಂದು ವಿಚಾರಣೆ ಪ್ರಾರಂಭಗೊಂಡು ಅಭಿಯೋಜನೆ ಪರ 21 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. ಆರೋಪಿಯೂ ತನ್ನ ಪರವಾಗಿ ತನ್ನ ತಂಗಿಯನ್ನು ನ್ಯಾಯಾಲಯದ ಮುಂದೆ ಸಾಕ್ಷ್ಯವಾಗಿ ಹಾಜರುಪಡಿಸಿದ್ದ. ತಾನು ಹಾಗೂ ಸಂತ್ರಸ್ತೆ ಪ್ರೀತಿಸುತ್ತಿದ್ದೆವು. ಸಂತ್ರಸ್ತೆ ತನ್ನ ಹಾಗೂ ಮನೆಯವರ ಜತೆ ಒಡನಾಟದಲ್ಲಿ ಇದ್ದಳು ಎಂದು ಸಾಕ್ಷಿ ನುಡಿದಿದ್ದು, ಅದಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಅಭಿಯೋಜನೆಯ ಸಾಕ್ಷ್ಯಧಾರಗಳನ್ನು ಪರಿಗಣಿಸಿ, ಆತನ ಮೇಲೆ ಹೊರಿಸಲಾದ ಎಲ್ಲ ಶಿಕ್ಷಾರ್ಹ ಕಲಂಗೆ ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ.

ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್‌ ನಾಯಕ್‌ ಅವರು ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next