Advertisement

Mangaluru ಗಾಂಜಾ ಮಾರಾಟ: ಇಬ್ಬರಿಗೆ ಶಿಕ್ಷೆ

12:59 AM Jan 03, 2024 | Team Udayavani |

ಮಂಗಳೂರು: ಗಾಂಜಾ ಮಾರಾಟ ಪ್ರಕರಣದಲ್ಲಿ ಮಂಗಳೂರಿನ ನ್ಯಾಯಾಲಯವು ಇಬ್ಬರಿಗೆ ಶಿಕ್ಷೆ ವಿಧಿಸಿದೆ.

Advertisement

ಮೋನಿಶ್‌ ಸುವರ್ಣ ಬೊಕ್ಕಪಟ್ಣ ಮತ್ತು ಅಖೀಲ್‌ ಕೋಡಿಕಲ್‌ ಶಿಕ್ಷೆಗೆ ಒಳಗಾದವರು. ಇವರು 2021ರ ಎ.17ರಂದು ಸುಲ್ತಾನ್‌ ಬತ್ತೇರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಅವರನ್ನು ಬರ್ಕೆ ಇನ್‌ಸ್ಪೆಕ್ಟರ್‌ ಹಾರೂನ್‌ ಅಖ್ತರ್‌ ಬಂಧಿಸಿ, ಸುಮಾರು 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪಿಎಸ್‌ಐ ಶೋಭಾ ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನಗರದ 6ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಪೂಜಾಶ್ರೀ ಅವರು ಡಿ.30ರಂದು ಒಂದು ತಿಂಗಳ ಕಠಿನ ಸಜೆ ಹಾಗೂ 1,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜನಾರ್ದನ್‌ ವಾದಿಸಿದ್ದರು.

ವರ್ಷದಲ್ಲಿ 1.71 ಕೋಟಿ ರೂ. ಡ್ರಗ್ಸ್‌ ವಶ
ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2023ನೇ ವರ್ಷದಲ್ಲಿ ಡ್ರಗ್ಸ್‌ ಮಾರಾಟ/ಸೇವನೆಗೆ ಸಂಬಂಧಿಸಿದಂತೆ ಒಟ್ಟು 713 ಪ್ರಕರಣಗಳನ್ನು ದಾಖಲಿಸಿಕೊಂಡು 948 ಮಂದಿಯನ್ನು ಬಂಧಿಸಿ 1,71,11,700 ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

51.74 ಲ.ರೂ. ಮೌಲ್ಯದ ಗಾಂಜಾ, 1.11 ಕೋ.ರೂ. ಮೌಲ್ಯದ ಎಂಡಿಎಂಎ, 2.50 ಲ.ರೂ ಮೌಲ್ಯದ ಎಲ್‌ಎಸ್‌ಡಿ ಸ್ಟಾಂಪ್ಸ್‌, 3.39 ಲ.ರೂ. ಮೌಲ್ಯದ ಮೆಥಾಂಪೆಟಮಿನ್‌ ವಶಪಡಿಸಿಕೊಂಡಿರುವ ಡ್ರಗ್ಸ್‌ಗಳಲ್ಲಿ ಸೇರಿವೆ ಎಂದರು.

Advertisement

ಗಾಂಜಾ ಸೇವನೆ: ಪ್ರಕರಣ ದಾಖಲು
ಕಾಪು: ಗಾಂಜಾ ಸೇವನೆ ಆರೋಪದಲ್ಲಿ ಮೊಹಮ್ಮದ್‌ ತೌಫಿಕ್‌ (26) ಹಾಗೂ ಅಕೀಬ್‌ ಜಾವೇದ್‌ (29) ಅವರ ವಿರುದ್ದ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದಕ ನಶೆಯಲ್ಲಿದ್ದ ತೌಫಿಕ್‌ ನನ್ನು ಇನ್ನಂಜೆ ಕ್ರಾಸ್‌ ಬಳಿ ಹಾಗೂ ಜಾವೇದ್‌ನನ್ನು ಪೊಲಿಪು ಕ್ರಾಸ್‌ ಬಳಿ ಕಾಪು ಪೊಲೀಸರು ರವಿವಾರ ಬಂಧಿಸಿದ್ದರು. ಆರೋಪಿಗಳನ್ನು ಮಣಿಪಾಲ ಕೆಎಂಸಿ ಪೊರೆನ್ಸಿಕ್‌ ವಿಭಾಗಕ್ಕೆ ಹಾಜರುಪಡಿಸಿದ್ದು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ದೃಢಪಡಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next