ಮಂಗಳೂರು: ವ್ಯಕ್ತಿಯೋರ್ವರು ಕಳೆದುಕೊಂಡಿದ್ದ ಮೊಬೈಲ್ ಅನ್ನು ಬಳಸಿ ಇನ್ನೋರ್ವ ವ್ಯಕ್ತಿ ಫೋನ್ ಪೇ ಮೂಲಕ ಹಣ ವರ್ಗಾಯಿಸಿ ವಂಚಿಸಿರುವ ಘಟನೆ ನಡೆದಿದೆ.
ದೂರುದಾರರು ಡಿ. 3ರಂದು ಕಣ್ಣೂರಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎರಡು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಮರುದಿನ ಕಂಕನಾಡಿ ಠಾಣೆಗೆ ದೂರು ನೀಡಿದ್ದರು.
ದೂರು ನೀಡಿದ ಎರಡು ದಿನಗಳ ಅನಂತರ ಒಂದು ಮೊಬೈಲ್‌ನ ಸಿಮ್ ಆನ್ ಆಗಿತ್ತು. ಅದಕ್ಕೆ ಸಂಬಂಧಿಕರ ಪೋನ್ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ ಮಂಗಳೂರಿನ ಪಡೀಲ್‌ನಲ್ಲಿ ಮೊಬೈಲ್ ಫೋನ್ ಸಿಕ್ಕಿದ್ದು, ತಾನು ಕಡಬದಲ್ಲಿದ್ದೇನೆ ಎಂದು ತಿಳಿಸಿದ್ದಾನೆ.
ಮಾತ್ರವಲ್ಲದೆ ನಾಲ್ಕು ದಿನ ಕಳೆದು ಮಂಗಳೂರಿಗೆ ಬಂದು ಮೊಬೈಲ್ ತಂದುಕೊಡುವುದಾಗಿಯೂ ಹೇಳಿದ್ದ. ಆದರೆ ಆತ ತಂದುಕೊಡಲಿಲ್ಲ. ಹಾಗಾಗಿ ದೂರುದಾರರು ಡಿ. 12ರಂದು ತನ್ನ ಹಳೆಯ ನಂಬರ್‌ನ ಮೊಬೈಲ್ ಸಿಮ್ ಅನ್ನು ಬ್ಲಾಕ್ ಮಾಡಿ ಹೊಸ ಸಿಮ್ ಖರೀದಿಸಿದ್ದರು.
ಆರೋಪಿಗಳು ಡಿ. 12ರಂದು ದೂರುದಾರರ ಮೊಬೈಲ್‌ನ ಫೋನ್ ಪೇ ಮೂಲಕ 1.82 ಲ.ರೂ.ಗಳನ್ನು ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.