Advertisement

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

02:11 AM Nov 16, 2024 | Team Udayavani |

ಮಂಗಳೂರು: ಸಿಬಿಐ ಅಧಿಕಾರಿಗಳೆಂದು ಕರೆ ಮಾಡಿ 68 ಲ.ರೂ. ಸುಲಿಗೆ ಮಾಡಿದ ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಹೆಸರಿನಲ್ಲಿ 90 ಲ.ರೂ. ವರ್ಗಾಯಿಸಿ ವಂಚಿಸಿದ ಎರಡು ಸೈಬರ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕಾವೂರು ಇನ್‌ಸ್ಪೆಕ್ಟರ್‌ ರಾಘವೇಂದ್ರ ಬೈಂದೂರು ಅವರ ನೇತೃತ್ವದ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಕೇರಳ ಎರ್ನಾಕುಲಂ ಆಲುವಾ ತಾಲೂಕಿನ ನಿಸಾರ್‌, ಕೋಝಿಕೋಡ್‌ ತಿರುವನ್ನೂರಿನ ಸಾಹಿಲ್‌ ಮತ್ತು ಕೋಯಿಲಾಂಡಿಯ ಮುಹಮ್ಮದ್‌ ನಶಾತ್‌ ಬಂಧಿತ ಆರೋಪಿಗಳು. ಬಂಧಿತರ ಪೈಕಿ ನಿಸಾರ್‌ ಸಿಬಿಐ ಅಧಿಕಾರಿ ಎಂದು ಬೆದರಿಸಿ ಸಾಫ್ಟ್ವೇರ್‌ ಎಂಜನಿಯರ್‌ ಓರ್ವರಿಂದ 68 ಲ.ರೂ.ಗಳನ್ನು ಸುಲಿಗೆ ಮಾಡಿದ ಪ್ರಕರಣದ ಆರೋಪಿ. ಸಾಹಿಲ್‌ ಮತ್ತು ನಶಾತ್‌ ಹೂಡಿಕೆ ಹೆಸರಿನಲ್ಲಿ ವಂಚಿಸಿದ ಪ್ರಕರಣದ ಆರೋಪಿಗಳು. ಆರೋಪಿಗಳನ್ನು ಕೇರಳದಿಂದ ವಶಕ್ಕೆ ಪಡೆದು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ಇನ್ನಷ್ಟು ಆರೋಪಿಗಳಿಗಾಗಿ ಶೋಧ
ಬಂಧಿಸಲ್ಪಟ್ಟಿರುವ ಆರೋಪಿಗಳು ಈ ಸೈಬರ್‌ ವಂಚಕರ ಜಾಲದಲ್ಲಿ ಮೂರು ಅಥವಾ ನಾಲ್ಕನೇ ಹಂತದಲ್ಲಿ ಕೆಲಸ ಮಾಡುವ ವಂಚಕರು. ಇವರ ಜತೆ ಇನ್ನಷ್ಟು ಮಂದಿ ಇದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಸುಲಿಗೆ ಮಾಡಿರುವ ಹಣವನ್ನು ಪೊಲೀಸರು ಇನ್ನಷ್ಟೇ ವಾಪಸ್‌ ಪಡೆಯಬೇಕಿದೆ. ಆ ಹಣ ಯಾವುದೋ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದ್ದು, ಅದನ್ನು ಪತ್ತೆ ಹಚ್ಚಬೇಕಾಗಿದೆ.

ಕಾವೂರು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ರಾಘವೇಂದ್ರ ಬೈಂದೂರು, ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ, ಸಿಬಂದಿ ರಾಮಣ್ಣ ಶೆಟ್ಟಿ, ಭುವನೇಶ್ವರಿ, ರಾಜಪ್ಪ ಕಾಶಿಬಾಯಿ, ಪ್ರವೀಣ್‌ ಎನ್‌. ಹಾಗೂ ಮಾಲತೇಶ ಅವರು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸಿಬಿಐ ಅಧಿಕಾರಿಗಳೆಂದು ಹೆದರಿಸಿ ಸುಲಿಗೆ
ಮಂಗಳೂರು ನಗರದ ನಿವಾಸಿಯಾಗಿರುವ ಸಾಫ್ಟ್ವೇರ್‌ ಎಂಜಿನಿಯರ್‌ ಓರ್ವರ ಮೊಬೈಲ್‌ಗೆ ಅ. 10ರಂದು ಅಪರಾಹ್ನ ಆರೋಪಿಗಳು ಕರೆ ಮಾಡಿ ‘ನಿಮ್ಮ ಹೆಸರಿನಲ್ಲಿ ಹೊಸದಿಲ್ಲಿಯಿಂದ ಪಾರ್ಸೆಲ್‌ ಹೋಗಿದ್ದು ಅದರಲ್ಲಿ ಡ್ರಗ್ಸ್‌, ಐಪೋನ್‌, ಬಟ್ಟೆ ಇತ್ತು. ನಾವು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಕನೆಕ್ಟ್ ಮಾಡುತ್ತೇವೆ’ ಎಂದು ತಿಳಿಸಿದರು. ಕೆಲವೇ ಹೊತ್ತಿನಲ್ಲಿ ಕರೆ ಮಾಡಿದ ಬೇರೆ ವ್ಯಕ್ತಿಗಳು “ನಾವು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಿಂದ ಕರೆ ಮಾಡುತ್ತಿದ್ದು ನಿಮ್ಮ ಮೇಲೆ 3 ದೂರುಗಳು ದಾಖಲಾಗಿವೆ. ತನಿಖೆ ಮಾಡುವುದಕ್ಕಾಗಿ ಕರೆಯನ್ನು ಸಿಬಿಐ ಅಧಿಕಾರಿಗೆ ಕನೆಕ್ಟ್ ಮಾಡುತ್ತೇವೆ’ ಎಂದು ಹೇಳಿದರು. ಬಳಿಕ ಸಿಬಿಐ ಅಧಿಕಾರಿಯೆಂದು ಪರಿಚರಿಸಿಕೊಂಡ ವ್ಯಕ್ತಿಯೋರ್ವ “ನಿಮ್ಮ ಖಾತೆಯನ್ನು ಯಾರೋ ದುರುಪಯೋಗ ಪಡಿಸುತ್ತಿದ್ದಾರೆ. ಬ್ಯಾಂಕ್‌ ವಿವರಗಳನ್ನು ನೀಡಿ ನಾವು ಪರಿಶೀಲಿಸುತ್ತೇವೆ’ ಎಂದ. ಕೆಲವು ಹೊತ್ತಿನ ಬಳಿಕ ಸಾಫ್ಟ್ವೇರ್‌ ಎಂಜಿನಿಯರ್‌ ಅವರಿಗೆ ಸಂಶಯ ಬಂದು ಪ್ರಶ್ನಿಸಿದಾಗ ಆರೋಪಿಗಳು ಗದರಿಸಲು ಆರಂಭಿಸಿ ಹಣ ವಾರ್ಗಯಿಸುವಂತೆ ಹೇಳಿದ್ದರು. ಅವರನ್ನು ಬಂಧನದ ರೀತಿಯಲ್ಲಿ (ಡಿಜಿಟಲ್‌ ಅರೆಸ್ಟ್‌) ನಡೆಸಿಕೊಂಡು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದರು. ಹೀಗೆ ಒಟ್ಟು 68 ಲ.ರೂ.ಗಳನ್ನು ಆರೋಪಿಗಳು ಅವರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದರು.

Advertisement

ಹೂಡಿಕೆ ಹೆಸರಿನಲ್ಲಿ 90 ಲ.ರೂ. ವಂಚನೆ
ಮೆಡಿಕಲ್‌ ರೆಪ್ರಸೆಂಟೇಟಿವ್‌ ಆಗಿ ಕೆಲಸ ಮಾಡಿಕೊಂಡಿರುವ ವ್ಯಕ್ತಿಯೋರ್ವರ ವಾಟ್ಸ್‌ಆ್ಯಪ್‌ಗೆ ಸ್ಟಾಕ್‌ ಮಾರ್ಕೆಟ್‌ನ ಹೆಸರಿದ್ದ ಗ್ರೂಪ್‌ವೊಂದರಿಂದ ಸಂದೇಶ ಬಂದಿತ್ತು. ಅದರಲ್ಲಿ ಷೇರು ಟ್ರೇಡಿಂಗ್‌ ಬಗ್ಗೆ ಮಾಹಿತಿ ಇತ್ತು. ಬಳಿಕ ಅದರಲ್ಲಿ ಖಾತೆ ತೆರೆಯಲು ಲಿಂಕ್‌ ಬಂದಿತ್ತು. ಖಾತೆ ತೆರೆದು ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿದಂತೆ ದೂರುದರಾರರು ಹಣ ಹೂಡಿಕೆ ಮಾಡಿದ್ದರು. ಅದರಂತೆ ಹಂತ ಹಂತವಾಗಿ 90.90 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು. ಆದರೆ ಅದನ್ನು ಹಿಂಪಡೆಯಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಅನುಮಾನ ಬಂದು ಅವರು ಪೊಲೀಸರಿಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next