ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕು ಬೊಳಂತೂರು ಗ್ರಾಮದ ನಿವಾಸಿ, ಆಟೋರಿಕ್ಷಾ ಚಾಲಕ ಅಬ್ದುಲ್ ರೆಹಮಾನ್ (26) ಶಿಕ್ಷೆಗೊಳಗಾದವ. ಬಾಲಕಿ ಪ್ರತೀದಿನ ಬೊಳಂತೂರಿನಿಂದ ಕಲ್ಲಡ್ಕದದವರೆಗೆ ಬಸ್‌ನಲ್ಲಿ ಬಂದು ಬಸ್ ನಿಲ್ದಾಣ ಸಮೀಪದ ಕಟ್ಟಡದಲ್ಲಿ ತನ್ನ ಗೆಳತಿಯರಿಗಾಗಿ ಕಾದು ಬಳಿಕ ಅವರ ಜತೆ ಸೇರಿ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಳು. ಇದನ್ನು ಅಬ್ದುಲ್ ರೆಹಮಾನ್ ಗಮನಿಸಿದ್ದ. 2019ರ ನ. 21ರಂದು ತನ್ನ ರಿಕ್ಷಾದಲ್ಲಿ ಬಸ್ ಅನ್ನು ಹಿಂಬಾಲಿಸಿಕೊಂಡು ಬಂದ ರೆಹಮಾನ್ ಎಂದಿನಂತೆ ಕಟ್ಟಡದ ಮೆಟ್ಟಿಲಿನ ಬಳಿ ತನ್ನ ಗೆಳತಿಯರಿಗಾಗಿ ಕಾದು ಕುಳಿತಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಪನಿರೀಕ್ಷಕರಾದ ಅವಿನಾಶ್ ಮತ್ತು ಜಯರಾಮ್ ರೈ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ ಭಾ.ದಂ.ಸಂ. ಕಲಂ 354ಎ ಅಡಿಯಲ್ಲಿ 6 ತಿಂಗಳು ಜೈಲು, 10,000 ರೂ. ದಂಡ ವಿಧಿಸಿದ್ದಾರೆ. ಅಲ್ಲದೆ ದಂಡದ ಮೊತ್ತವನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.