ಮಂಗಳೂರು: ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಅಪರಾಧಿಗೆ ಮಂಗಳೂರಿನ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮರೋಳಿಯ ವಿನೋದ್ (46) ಶಿಕ್ಷೆಗೊಳಗಾದ ಅಪರಾಧಿ. 2017ರ ಮೇ ತಿಂಗಳಿನಲ್ಲಿ ಹೆತ್ತವರು ಕೆಲಸಕ್ಕೆಂದು ಹೋಗುವಾಗ ಅವರ ಮಗುವನ್ನು ನೆರೆಮನೆಯಲ್ಲಿ ಬಿಟ್ಟು ಹೋಗಿದ್ದರು. ಇದೇ ಪರಿಸರದವನಾದ ವಿನೋದ್ ಮಗುವನ್ನು ಆತನ ಮನೆಗೆ ಎತ್ತಿಕೊಂಡು ಹೋಗಿ ಲೈಂಗಿಕ ಹಲ್ಲೆ ನಡೆಸಿದ್ದ. ಮಗು ಬೊಬ್ಬೆ ಹಾಕಿದಾಗ ನೆರೆಮನೆಯವರು ಓಡಿ ಬಂದಿದ್ದು, ಆಗ ಘಟನೆ ಬೆಳಕಿಗೆ ಬಂದಿತ್ತು. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್‌ಸ್ಪೆಕ್ಟರ್ ರವಿ ನಾಯ್ಕ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ಟಿಎಸ್‌ಸಿ 2 (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಪೋಕೊÕ ಕಲಂ 8ರಡಿ 3 ವರ್ಷ ಜೈಲು ಹಾಗೂ 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳ ಜೈಲು ಶಿಕ್ಷೆ ವಿಧಿಸಿ ಮಾ. 4ರಂದು ತೀರ್ಪು ನೀಡಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ಅವರು ವಾದಿಸಿದ್ದರು.