ಮಂಗಳೂರು: ವಿದೇಶಿ ಕರೆನ್ಸಿ ಮತ್ತು ಚಿನ್ನ ನೀಡುವುದಾಗಿ ಹೇಳಿ ಹಣ ಪಡೆದು ಕಾಗದದ ಕಟ್ಟನ್ನು ನೀಡಿ 4 ಲ.ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮುಡಿಪು ಜಂಕ್ಷನ್‌ನಲ್ಲಿರುವ ತಾಜ್‌ಬುಕ್ ಸ್ಟಾಲ್ ಎಂಬ ಅಂಗಡಿಗೆ ಬಂದಿದ್ದ ಓರ್ವ ಅಪರಿಚಿತ ವ್ಯಕ್ತಿಯು ಆತನ ಬಳಿ ಸೌದಿ ಅರೇಬಿಯಾ ದೇಶದ ಕರೆನ್ಸಿ ಮತ್ತು ಚಿನ್ನ ಇದ್ದು ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿದ. ಜ.29ರಂದು ಅಪರಿಚಿತ ವ್ಯಕ್ತಿ ಅಂಗಡಿಯವರಿಗೆ ಕರೆ ಮಾಡಿ 4 ಲ.ರೂ.ಗಳೊಂದಿಗೆ ಮಂಗಳೂರಿಗೆ ಬಂದು ಕರೆ ಮಾಡುವಂತೆ ತಿಳಿಸಿದ. ಅಂಗಡಿಯವರು ಜ.30ರಂದು ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ನಗರದ ಸ್ಟೇಟ್‌ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋಗುವ ಮೈದಾನದ ಬಳಿ ಇರುವ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಕಾಯುವಂತೆ ತಿಳಿಸಿದ.
ಅದರಂತೆ ಅಂಗಡಿಯವರು ಕಾದು ನಿಂತಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಅಂಗಡಿಯವರಿಂದ 4 ಲ.ರೂ. ಪಡೆದು ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕಟ್ಟನ್ನು ನೀಡಿ ತೆರಳಿದ. ಅಂಗಡಿಯವರು ಕಟ್ಟನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಕಾಗದ ತುಂಡುಗಳನ್ನು ಮಡಚಿ ಒಂದರ ಮೇಲೆ ಒಂದರಂತೆ ನೋಟಿನಂತೆ ಇಟ್ಟಿರುವುದು ಕಂಡುಬಂದಿದೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯಲ್ಲಿ ಗುಂಡಿನ ದಾಳಿ: 8 ಮಂದಿ ಸಾವು, 3 ಮಂದಿಗೆ ಗಾಯ