Advertisement

ನಾಗನ ಕಲ್ಲು ಎಸೆದ ಪ್ರಕರಣ : ತನಿಖೆ ಚುರುಕು

10:41 PM Nov 14, 2021 | Team Udayavani |

ಮಂಗಳೂರು: ನಗರದ ಬಂಗ್ರ ಕೂಳೂರು ವಾರ್ಡ್‌ನ ಕೋಡಿಕಲ್‌ನ ನಾಗಬನದಿಂದ ನಾಗನ ಕಲ್ಲನ್ನು ಎಸೆದಿರುವ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಉರ್ವ ಪೊಲೀಸರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ಈ ಹಿಂದೆ ಬೇರೆ ಕಡೆಗಳಲ್ಲಿ ಇದೇ ರೀತಿಯ ಕೃತ್ಯಗಳಲ್ಲಿ ಪಾಲ್ಗೊಂಡಿದ್ದವರು, ಗಾಂಜಾ ವ್ಯಸನಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕೋಡಿಕಲ್‌ ಪರಿಸರದಲ್ಲಿ ಲಭ್ಯವಾದ ಸಿಸಿ ಕೆಮರಾ ದೃಶ್ಯಗಳನ್ನು ಕೂಡ ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Advertisement

ಕಳೆದ ಒಂದು ತಿಂಗಳ ವ್ಯಾಪ್ತಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 3 ಕಡೆ ನಾಗನಕಟ್ಟೆಗಳಿಗೆ ಹಾನಿ ಮಾಡಿ ನಾಗನ ಕಲ್ಲುಗಳನ್ನು ಎಸೆದಿರುವ ಘಟನೆಗಳು ನಡೆದಿವೆ. ಅ.17ರಂದು ಬೈಕಂಪಾಡಿಯಲ್ಲಿ ನಾಗನಕಟ್ಟೆಗೆ ಹಾನಿಗೊಳಿಸಿ ಕೆಲವು ಕಲ್ಲುಗಳನ್ನು ಎಸೆದಿದ್ದು ಬೆಳಕಿಗೆ ಬಂದಿತ್ತು. ಅ.23ರಂದು ಕೂಳೂರಿನ ನಾಗಬನದ 6 ನಾಗನಕಲ್ಲುಗಳು ನಾಪತ್ತೆಯಾಗಿದ್ದವು. ಮೂರು ದಿನಗಳ ಅನಂತರ ಪಕ್ಕದ ಗದ್ದೆಯಲ್ಲಿ ಪತ್ತೆಯಾಗಿದ್ದವು. ಇದೀಗ ಕೂಳೂರು ಸಮೀಪದ ಕೋಡಿಕಲ್‌ನಲ್ಲಿ ಇದೇ ರೀತಿಯ ಘಟನೆ ಮರುಕಳಿಸಿದೆ.

ಬೈಕಂಪಾಡಿಯಲ್ಲಿ ನಡೆದ ಘಟನೆಯಲ್ಲಿ ಓರ್ವನನ್ನು ಬಂಧಿಸಲಾಗಿತ್ತು. ಆತ ಮಾನಸಿಕ ಅಸ್ವಸ್ಥ ಎಂಬುದಾಗಿ ಪೊಲೀಸರು ತಿಳಿಸಿದ್ದರು. ಕೂಳೂರು ಘಟನೆಯ ಆರೋಪಿಗಳ ಬಂಧನವಾಗಿಲ್ಲ. ಕೂಳೂರು ಘಟನೆಯ ಬಳಿಕ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಕೂಳೂರಿನಲ್ಲಿ ಪ್ರತಿಭಟನೆ ನಡೆದಿತ್ತು.

ರಾಜ್ಯಾಧ್ಯಕ್ಷ ನಳಿನ್‌ ಭೇಟಿ
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ರವಿವಾರ ಕೋಡಿಕಲ್‌ ನಾಗಬನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ಸಂದರ್ಭ ಶಾಸಕ ಡಾ| ವೈ.ಭರತ್‌ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಮನಪಾ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌, ಮನೋಜ್‌ ಕುಮಾರ್‌, ಲೋಹಿತ್‌ ಅಮೀನ್‌, ಕೋಡಿಕಲ್‌ ನಾಗಬನ ಮುಖ್ಯಸ್ಥ ಭಾಸ್ಕರ್‌ ಶೆಟ್ಟಿ, ಬಿಜೆಪಿ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್‌ ಪಚ್ಚನಾಡಿ, ಸಂಘಟನೆಯ ಪ್ರಮುಖರು, ಮಂಗಳೂರು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌, ಡಿಸಿಪಿ ಹರಿರಾಂ ಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.

ಇಂದು ಬಂದ್‌, ಪ್ರತಿಭಟನೆ
ದುಷ್ಕೃತ್ಯವೆಸಗಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕೋಡಿಕಲ್‌ನಲ್ಲಿ ಸೋಮವಾರ ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಶಾಂತಿಯುತ, ಸ್ವಯಂಪ್ರೇರಿತ ಬಂದ್‌ ನಡೆಯಲಿದ್ದು ಕಟ್ಟೆ ಗ್ರೌಂಡ್‌ನ‌ಲ್ಲಿ ಬೆಳಗ್ಗೆ ಶಾಂತಿಯುತ ಪ್ರತಿಭಟನೆ ನಡೆಯಲಿದೆ. ಅಂಗಡಿ ಮುಂಗಟ್ಟುಗಳು ಬಂದ್‌ ಆಗಲಿದ್ದು ಬಸ್‌ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next