Advertisement

ಮಂಗಳೂರು ಸ್ಫೋಟ: ಸಮಗ್ರ ತನಿಖೆ ನಡೆಯಲಿ

10:37 PM Nov 20, 2022 | Team Udayavani |

ಮಂಗಳೂರು ನಗರದ ನಾಗುರಿಯಲ್ಲಿ ಶನಿವಾರ ಸಂಜೆ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಘಟನೆ ಕೇವಲ ಕರಾವಳಿ ಮಾತ್ರವಲ್ಲದೆ ರಾಜ್ಯದ ಜನತೆಯನ್ನು ಒಂದಿಷ್ಟು ವಿಚಲಿತರಾಗುವಂತೆ ಮಾಡಿದೆ. ಬೇರೆ ಸ್ಥಳದಲ್ಲಿ ಸ್ಫೋಟಿಸಲು ಸ್ಫೋಟಕವನ್ನು ಕೊಂಡೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ರಿಕ್ಷಾದಲ್ಲಿಯೇ ಇದು ಸ್ಫೋಟಿಸಿತೇ? ಎಂಬ ಅನುಮಾನವನ್ನು ಹುಟ್ಟು ಹಾಕಿದೆ.

Advertisement

ಸ್ಫೋಟ ಸಂಭವಿಸಿದಾಗಿನಿಂದ ಘಟನೆಗೆ ಸಂಬಂಧಿಸಿದಂತೆ ವಿವಿಧ ತೆರನಾದ ವದಂತಿ, ಗುಮಾನಿಗಳು ಹರಡತೊಡಗಿದ್ದು ಸಹಜವಾಗಿಯೇ ರಾಜ್ಯದ ಅದರಲ್ಲೂ ಮುಖ್ಯವಾಗಿ ಕರಾವಳಿಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಸ್ಫೋಟ ಅಷ್ಟೊಂದು ತೀವ್ರತರವಾಗಿರದಿದ್ದರೂ ಈ ಹಿಂದೆ ಕೊಯಮತ್ತೂರಿನಲ್ಲಿ ನಡೆದ ಸಿಲಿಂಡರ್‌ ಸ್ಫೋಟದ ವೇಳೆ ಬಳಸಲಾದ ಐಇಡಿ ಮಾದರಿಯಲ್ಲಿಯೇ ಸ್ಫೋಟಕವನ್ನು ತಯಾರಿಸಿರುವುದು ಬಹಿರಂಗವಾಗಿರುವುದು ಇಡೀ ಘಟನೆಯ ಹಿಂದೆ ಪ್ರಬಲ ಷಡ್ಯಂತ್ರ ಇರುವಂತೆ ಕಂಡುಬರುತ್ತಿದೆ. ಅಲ್ಲದೆ ಮುಖ್ಯಮಂತ್ರಿಯವರು ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದಿನವೇ ಈ ಘಟನೆ ನಡೆದಿರುವುದು ಮತ್ತು ಇದೊಂದು ಭಯೋತ್ಪಾದಕ ಕೃತ್ಯ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಘಟನೆಯ ಪ್ರಾಥಮಿಕ ತನಿಖೆಯ ಹಂತದ ವೇಳೆಯೇ ನೀಡಿರುವ ಹೇಳಿಕೆ ಕೂಡ ಇಡೀ ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಘಟನೆಯ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದು ಎನ್‌ಐಎ ಅಧಿಕಾರಿಗಳು ರವಿವಾರ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಷಾದ ಪ್ರಯಾಣಿಕನ ಕುರಿತಂತೆ ತೀವ್ರ ತನಿಖೆ ಕೈಗೊಂಡಿದ್ದಾರೆ. ಆತನಲ್ಲಿದ್ದ ಮೊಬೈಲ್‌ ಸಹಿತ ಎಲ್ಲವನ್ನೂ ವಶಪಡಿಸಿಕೊಂಡಿರುವ ತನಿಖಾಧಿಕಾರಿಗಳು ಪ್ರಕರಣದ ಬಗೆಗೆ ಸಮಗ್ರ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ಆತನಲ್ಲಿದ್ದ ಆಧಾರ್‌ ಕಾರ್ಡ್‌ನ್ನು ಈ ಹಿಂದೆ ಕಳವುಗೈಯ್ಯಲಾಗಿತ್ತು ಎಂಬುದು ತನಿಖೆಯ ವೇಳೆ ದೃಢಪಟ್ಟಿದ್ದು ಆಧಾರ್‌ ಕಾರ್ಡ್‌ನ ವ್ಯಕ್ತಿಗೂ ಈ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ. ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆಯೇ ಆರೋಪಿಯ ಒಂದೊಂದೇ ಹಿನ್ನೆಲೆಗಳು ಬಹಿರಂಗಗೊಳ್ಳತೊಡಗಿವೆ. ಆರೋಪಿಯು ಈ ಹಿಂದೆ ಕೆಲವೊಂದು ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದನು ಎನ್ನಲಾಗಿದ್ದು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೂ ನಂಟು ಹೊಂದಿದ್ದ ಎಂಬ ಗುಮಾನಿಗಳ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಏತನ್ಮಧ್ಯೆ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಸ್ಫೋಟ ಪ್ರಕರಣ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯ ವಿಚಾರದಲ್ಲಿ ನಾಯಕರು ತಮ್ಮೆಲ್ಲ ಸೈದ್ಧಾಂತಿಕ ಭಿನ್ನಾಭಿಪ್ರಾಯ, ರಾಜಕೀಯ ಹಿತಾಸಕ್ತಿಗಳನ್ನು ಬದಿಗಿರಿಸಿ ದುಷ್ಕರ್ಮಿಗಳನ್ನು ಸದೆಬಡಿಯುವ ಕಾರ್ಯದಲ್ಲಿ ಕೈಜೋಡಿಸಬೇಕು. ಅಲ್ಲದೆ ಜನರಲ್ಲಿ ಧೈರ್ಯ ತುಂಬುವ ಕಾರ್ಯವನ್ನು ಮಾಡಬೇಕು. ಈ ಪ್ರಕರಣವನ್ನು ಶೀಘ್ರದಲ್ಲೇ ಭೇದಿಸಿ, ತಪ್ಪಿತಸ್ಥರನ್ನು ಕಂಡುಹಿಡಿಯಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next