Advertisement

Mangaluru: ಹಲವು ಅಪರಾಧಗಳಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಕುಖ್ಯಾತರಿಬ್ಬರ ಬಂಧನ

09:41 PM Feb 21, 2024 | Team Udayavani |

ಮಂಗಳೂರು: ಹಲವು ಸಮಯದಿಂದ ಕಾನೂನು ವಂಚನೆ ಮಾಡುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಬುಧವಾರ ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಗಳು ಮಂಜನಾಡಿಯ ಮೊಹಮ್ಮದ್ ಅಬ್ದುಲ್ ಫಯಾನ್ (26) ಮತ್ತು ಮೊಯಿದ್ದೀನ್ ಹಾಫಿಸ್ ಅಲಿಯಾಸ್ ಅಭಿ (47) ಎಂದು ಗುರುತಿಸಲಾಗಿದೆ. ಇವರು ಮಂಗಳೂರು ನಗರ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವಾರು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಕಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೊಹಮ್ಮದ್ ಅಬ್ದುಲ್ ಫಯಾನ್ ಕಳ್ಳತನ, ಕೊಲೆ ಯತ್ನ ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ 23 ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ವ್ಯಕ್ತಿಯಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸುಮಾರು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಅಪರಾಧ ಚಟುವಟಿಕೆಗಳು ಕೊಣಾಜೆ, ಉಳ್ಳಾಲ, ಬಂಟ್ವಾಳ ಟೌನ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಹಲವು ನ್ಯಾಯಾಲಯದ ವಾರಂಟ್‌ಗಳ ಹೊರತಾಗಿಯೂ, ಫಯಾನ್ ಬೆಂಗಳೂರಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವವರೆಗೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಮೊಯಿದ್ದೀನ್ ಹಾಫಿಸ್ ಅಲಿಯಾಸ್ ಅಭಿಯನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಬಂಧಿಸಲಾಗಿದೆ. ಮಂಗಳೂರು ನಗರ ಹಾಗೂ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ 10 ಪ್ರಕರಣಗಳಲ್ಲಿ ಭಾಗಿಯಾಗಿರುವ ಹಾಫಿಸ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಪರಾರಿಯಾಗಿದ್ದ.ಇಬ್ಬರನ್ನೂ ಮುಂದಿನ ಕಾನೂನು ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next