Advertisement

ಮಂಗಳೂರು ಸ್ಫೋಟ: ಒಂದೂವರೆ ತಿಂಗಳು ಮೈಸೂರಿನಲ್ಲಿ ವಾಸವಿದ್ದ ಶಂಕಿತ

12:10 AM Nov 21, 2022 | Team Udayavani |

ಮೈಸೂರು : ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿ ಮೈಸೂರಿನ ಮೇಟಗಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶಂಕಿತ ವ್ಯಕ್ತಿ ಮೈಸೂರಿನ ಲೋಕನಾಯಕ ನಗರದ ಸಂಜೀವಿನಿ ರಸ್ತೆಯಲ್ಲಿನ ಮಂಗಳಮ್ಮ ಮಾಲಕತ್ವದ ಮನೆಯಲ್ಲಿ ವಾಸ ವಾಗಿರುವುದು ದೃಢಪಡುತ್ತಿದ್ದಂತೆ ಮೈಸೂರು ಪೊಲೀಸರು ಪ್ರಕರಣದ ತೀವ್ರ ಜಾಲಾಟದಲ್ಲಿ ತೊಡಗಿದ್ದಾರೆ.

Advertisement

ಮಂಗಳೂರಿನ ಬಾಂಬ್‌ ಸ್ಫೋಟಕ್ಕೆ ಮೈಸೂರು ನಂಟು ಇರುವುದನ್ನು ಅರಿತ ಪೊಲೀಸರು ಶಂಕಿತ ಉಗ್ರನಿಗೆ ನಂಟು ಹೊಂದಿದ್ದ ಹಲವರನ್ನು ರವಿವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆಂದು ತಿಳಿದುಬಂದಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಮಾಹಿತಿ ನೀಡಲು ಪೊಲೀಸ್‌ ಅಧಿಕಾರಿಗಳು ನಿರಾಕರಿಸಿದ್ದಾರೆ.

ಮನೆ ಮಾಲಕನ ವಿಚಾರಣೆ
ಶಂಕತ ಉಗ್ರನಿಗೆ ಮನೆ ಬಾಡಿಗೆ ನೀಡಿದ್ದ ಮಾಲಕರಾದ ಮಂಗಳಮ್ಮ ಅವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆರೋಪಿ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಆತ ಉಗ್ರ ಎಂದು ನನಗೆ ಗೊತ್ತಿರಲಿಲ್ಲ. ತನ್ನ ಹೆಸರು ಪ್ರೇಮ್‌ ಹುಬ್ಬಳ್ಳಿಯಿಂದ ಬಂದಿದ್ದೇನೆಂದು ಮಾಹಿತಿ ನೀಡಿ ಮನೆ ಬಾಡಿಗೆ ಪಡೆದುಕೊಂಡಿದ್ದ. ಒಂದೂವರೆ ತಿಂಗಳು ವಾಸವಿದ್ದ ಆತನ ಚಲನವಲನಗಳ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಆರೋಪಿ ಚಹರೆ ಬಗ್ಗೆ ವಿವರಣೆಯನ್ನು ಮನೆ ಮಾಲಕರು ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಮಂಗಳೂರಿನಲ್ಲಿ ಗಾಯಗೊಂಡಿರುವ ವ್ಯಕ್ತಿ ಶಾರಿಕ್‌ ಆಗಿದ್ದಾನೆಯೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಡಿವೈಎಸ್ಪಿ ಶಾಂತವೀರ್‌ ನೇತೃತ್ವದ ತಂಡವು ಶಾರಿಕ್‌ ಕುಟುಂಬದವರ ಜತೆ ಮಂಗಳೂರಿಗೆ ತೆರಳಿದೆ.

ಉದಕಮಂಡಲಂನಲ್ಲಿ ವಿಚಾರಣೆ
ಪ್ರಕರಣ ಸಂಬಂಧ ಪೊಲೀಸರು ತಮಿಳುನಾಡಿನ ಉದಕಮಂಡಲದಲ್ಲಿ 40 ವರ್ಷದ ವ್ಯಕ್ತಿಯೊಬ್ಬರ ವಿಚಾರಣೆ ನಡೆಸಿದ್ದಾರೆ. ಕುಂಡಸಪ್ಪಾಯಿ ಗ್ರಾಮದ ಸುರೇಂದ್ರನ್‌ ಎಂಬವರೇ ವಿಚಾರಣೆಗೆ ಒಳಗಾದ ವ್ಯಕ್ತಿ. ಸುರೇಂದ್ರನ್‌ ಅವರ ಆಧಾರ್‌ ಕಾರ್ಡ್‌ ನೀಡಿಯೇ ಆರೋಪಿಯು ಸಿಮ್‌ ಕಾರ್ಡ್‌ ಖರೀದಿಸಿದ್ದ. ಸಿಮ್‌ ಖರೀದಿಸಲು ಸುರೇಂದ್ರನ್‌ ಅವರೇ ಆರೋಪಿಗೆ ನೆರವಾಗಿದ್ದರೇ ಅಥವಾ ಅವರಿಗೆ ಅರಿವಿಲ್ಲದಂತೆಯೇ ಅವರ ಆಧಾರ್‌ ಸಂಖ್ಯೆಯನ್ನು ಬಳಸಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next