ಮಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಲ್ ಅವರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ದ.ಕ. ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪೋಸ್ಟರ್ ಅಭಿಯಾನ, ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಯಿತು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರ ಆಪ್ತನ ಕಿರುಕಳದಿಂದ ಸಚಿನ್ ಆತ್ಮಹತ್ಯೆ ಮಾಡಿಕೊಡಿರುವುದು ಡೆತ್‌ನೋಟ್‌ನಲ್ಲಿಯೂ ಉಲ್ಲೇಖವಾಗಿದೆ. ಕಾಂಗ್ರೆಸ್ ಸರಕಾರದ ಸಚಿವರು, ಶಾಸಕರು ಮತ್ತು ಅವರ ಆಪ್ತ ಸಹಾಯಕರ ಒತ್ತಡ, ಬೆದರಿಕೆಯಿಂದಾಗಿ ಗುತ್ತಿಗೆದಾರರು, ಸರಕಾರಿ ನೌಕರರು, ನಿಷ್ಠಾವಂತರು ಪ್ರಾಣ ಕಳೆದುಕೊಂಡು ಅವರ ಕುಟುಂಬಗಳು ಬೀದಿಪಾಲಾಗುತ್ತಿವೆ. ರಾಜ್ಯದಲ್ಲಿರುವುದು ಸುಸೈಡ್ ಮತ್ತು ಸುಪಾರಿ ಸರಕಾರ. ಸರಕಾರದ ತಪ್ಪುಗಳು ಅದರ ವಿನಾಶಕ್ಕೆ ಕಾರಣವಾಗಲಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಮಾತನಾಡಿ, ರಾಜ್ಯ ಸರಕಾರ ಅಹಂಕಾರದಿಂದ ವರ್ತಿಸುತ್ತಿದೆ. ಪ್ರತಿಭಟನೆ ನಡೆಸಿದವರನ್ನು ಬಂಧಿಸಲು ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ. ಅವರಿಗೆ ತಾಕತ್ತಿದ್ದರೆ ಎಲ್ಲ ಪ್ರತಿಭಟನಕಾರರನ್ನು ಬಂಧಿಸಲಿ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರ ಆದೇಶ, ಸಹಕಾರವಿಲ್ಲದೆ ಅವರ ಆಪ್ತ ಗುತ್ತಿಗೆದಾರನಿಗೆ ಕಿರುಕುಳ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ, ಕವಿತಾ ಸನಿಲ್, ಉಪಮೇಯರ್ ಭಾನುಮತಿ, ರಮೇಶ್ ಕಂಡೆಟ್ಟು, ರಾಜಗೋಪಾಲ ರೈ, ಪೂರ್ಣಿಮಾ, ಜಗದೀಶ ಶೇಣವ, ವಿಕಾಸ್ ಪುತ್ತೂರು, ಪೂಜಾ ಪೈ, ಸಂಜಯ್ ಪ್ರಭು, ಅಶ್ವಿತ್ ಕೊಟ್ಟಾರಿ, ರಕ್ಷಿತ್ ಪೂಜಾರಿ, ವಸಂತ ಜೆ. ಪೂಜಾರಿ, ದಿನೇಶ್ ದಂಬೆ ಮೊದಲಾದವರು ಪಾಲ್ಗೊಂಡಿದ್ದರು.
ಸರಕಾರ, ಸಚಿವರ ವಿರುದ್ಧ ಘೋಷಣೆಯನ್ನೊಳಗೊಂಡ ಪೋಸ್ಟರ್‌ಗಳನ್ನು ಪ್ರದರ್ಶಿಸಿ ಧಿಕ್ಕಾರ ಕೂಗಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರಸ್ತೆಯಲ್ಲಿಯೇ ಕುಳಿತು ಕೆಲವು ಹೊತ್ತು ರಸ್ತೆ ತಡೆ ನಡೆಸಿದರು. ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು.