ಮಂಗಳೂರು: ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೂ ಮುನ್ನ ಚುನಾವಣೆ ಬಹಿಷ್ಕಾರದ ಕೂಗು ದಕ್ಷಿಣ ಕನ್ನಡ ಜಿಲ್ಲೆಯ ಹಲವಡೆ ಕೇಳಿ ಬರುತ್ತಿದೆ. ಮುಖ್ಯವಾಗಿ ಜಿಲ್ಲೆಯ ಗ್ರಾಮ ಮಟ್ಟದಲ್ಲಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಸಾರ್ವಜನಿಕರು ಚುನಾವಣೆ ಬಹಿಷ್ಕಾರದ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಪರಿಣಾಮ ಅಲ್ಲಲ್ಲಿ ಬ್ಯಾನರ್ ರಾರಾಜಿಸುತ್ತಿದ್ದು, ಇದನ್ನು ಎದುರಿಸುವುದು ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ಹಲವು ಕಾರಣದಿಂದ ನೆನೆಗುದಿಗೆ ಬಿದ್ದ ಕಾಮಗಾರಿ, ರಸ್ತೆ, ಚರಂಡಿ ಅವ್ಯವಸ್ಥೆ, ಅಳವಡಿಸದ ಡಾಮರು, ಸಿಗದ ಉದ್ಯೋಗ, ಕುಡಿಯುವ ನೀರಿನ ಅವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಬ್ಯಾನರ್ ಅಳವಡಿಸಿ ಜನಪ್ರತಿನಿಧಿಗಳನ್ನು ಸೆಳೆಯಲು ಕಾರ್ಯತಂತ್ರ ರೂಪಿತವಾಗಿದೆ.
ಅಲ್ಲಲ್ಲಿ ಬಹಿಷ್ಕಾರದ ಕೂಗು
ಕಡಬ ತಾಲೂಕು ಆಲಂಕಾರು ಗ್ರಾಮದ ಶರವೂರು ನಗ್ರಿ ಕಂದ್ಲಾಜೆ ನಿವಾಸಿಗಳು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಬುಡೇರಿ ಕ್ರಾಸ್ ಕಂದ್ಲಾಜೆ ನಗ್ರಿ ಶರವೂರು ರಸ್ತೆ ಹದಗೆಟ್ಟಿದ್ದು, ಕಾಂಕ್ರಿಟ್ ಅಳವಡಿಸುವವರೆಗೂ ಒಮ್ಮತದಿಂದ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಉಲ್ಲೇಖಿಸಿದ್ದಾರೆ. ಅದೇ ರೀತಿ, ಪುತ್ತೂರು ತಾಲೂಕಿನ ಕೊಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯ ಪರನೀರು ನಿವಾಸಿಗಳು ರಸ್ತೆ ವ್ಯವಸ್ಥೆ ಕಲ್ಪಿಸಲು ಚುನಾವಣಾ
ಬಹಿಷ್ಕಾರದ ಮೊರೆ ಹೋಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಸಣ ಗುಡ್ಡೆ, ಗಾಂಧಿನಗರ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಕುಡಿಯಲು ನೀರಿನ ವ್ಯವಸ್ಥೆ ಅಸಮರ್ಪಕವಾಗಿದೆ. ಜನಪ್ರತಿನಿಧಿಗಳ ಗಮನಸೆಳೆಯಲು ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.
Related Articles
ಬೆಳ್ತಂಗಡಿ ತಾಲೂಕಿನ ಸೀಟು ಬಳಿಯಿಂದ ಮಿತ್ತೂಟ್ಟು ಬೈಲುವಿಗೆ ರಸ್ತೆ ಸಂಪರ್ಕ ಸರಿಪಡಿಸುವಂತೆಯೂ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ. ಮೂಲ್ಕಿ ಮೂಡುಬಿದಿರೆ ವ್ಯಾಪ್ತಿಯಲ್ಲಿ ಕುತ್ತೆತ್ತೂರು, ಪೆರ್ಮುದೆ ಸಹಿತ ನಾಲ್ಕನೇ ಹಂತದ ಎಂಆರ್‌ಪಿಎಲ್ ನಿರ್ವಸಿತ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಲು ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ ಎಂದು ಟೀಕಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವ ನೂರಾರು ಯುವಕರು ಮತದಾನ ಬಹಿಷ್ಕಾರದ ಘೋಷಣೆ ಮಾಡಿದ್ದಾರೆ.
ಸಂಭಾವ್ಯ ಅಭ್ಯರ್ಥಿಗಳೂ ಟಾರ್ಗೆಟ್ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಈಗಿರುವ ಸ್ಥಳೀಯ ಶಾಸಕರ ಜೊತೆ ಮುಂದಿನ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ಗಮನ ಸೆಳೆಯುವ ಪ್ರಯತ್ನ ಸಾರ್ವಜನಿಕರಿಂದ ನಡೆಯುತ್ತಿದೆ. ವಿವಿಧ ಪಕ್ಷಗಳ ಹಲವು ಮಂದಿ ಮುಖಂಡರು ತಮ್ಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಜನರ ಬೇಡಿಕೆ ಈಡೇರಿಸಿ ತಮ್ಮ ಪ್ರೊಫೈಲ್ ಗಟ್ಟಿ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಮನವೊಲಿಸಲು “ಸ್ವೀಪ್’ ತಂಡ
ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಪ್ರತಿಕ್ರಿಯಿಸಿ, “ಜಿಲ್ಲೆಯ ಹಲವು ಕಡೆಗಳಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಸಿಇಒ ಡಾ| ಕುಮಾರ್ ಅವರ ನೇತೃತ್ವದಲ್ಲಿ ಸ್ವೀಪ್ ಅಧಿಕಾರಿಗಳ ತಂಡವನ್ನು ನೇಮಿಸಲಾಗಿದೆ. ಬೇಡಿಕೆಗಳ ಈಡೇರಿಕೆಗೆ ಮತದಾನ ಬಹಿಷ್ಕಾರ ಮಾಡಿದ ಸ್ಥಳೀಯ ಪ್ರದೇಶಗಳಿಗೆ ತಂಡದ ಸದಸ್ಯರು ತೆರಳಿ ಬೇಡಿಕೆಗಳನ್ನು
ಪರಿಶೀಲಿಸುತ್ತಿದ್ದಾರೆ. ಸರಕಾರದ ಮಟ್ಟದಲ್ಲಿ ಈಡೇರಬೇಕಾದ ಬೇಡಿಕೆಗಳ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ತರಲಾಗುತ್ತದೆ. ಉಳಿದವುಗಳನ್ನು ಸ್ಥಳೀಯವಾಗಿಯೇ ಇತ್ಯರ್ಥಕ್ಕೆ ಪ್ರಯತ್ನಪಟ್ಟು ಪ್ರತಿಯೊಬ್ಬರೂ ಮತ ಚಲಾಯಿಸಲು ಪ್ರೋತ್ಸಾಹಿಸಲಾಗುತ್ತದೆ’ ಎಂದಿದ್ದಾರೆ.
*ನವೀನ್ ಭಟ್ ಇಳಂತಿಲ