ಮಂಗಳೂರು: ಬ್ಲೇಡ್‌ನಿಂದ ಇರಿದು ಗಾಯಗೊಳಿಸಿದ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ ಅವರು 2 ವರ್ಷಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಮೊಹಮ್ಮದ್ ಗೌಸ್ ಆಲಿಯಾಸ್ ರವೂಫ್ ಆಲಿಯಾಸ್ ಮುನ್ನ ಶಿಕ್ಷೆಗೊಳಗಾದವನು. ಅಬ್ದುಲ್ ಅಜೀಜ್ ಹಲ್ಲೆಗೊಳಗಾದವರು.
2014ರ ಮಾ.9ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಗೂಡ್ಸ್‌ಶೆಡ್ ಫ್ರೆಂಡ್ಸ್ ಬಾರ್ ಎದುರು ರಾತ್ರಿ ಸುಮಾರು 8.15ಕ್ಕೆ ಆರೋಪಿ ಮೊಹಮ್ಮದ್ ಗೌಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಲ್ಲಿ ಹಣವನ್ನು ಕೇಳಿ ತೊಂದರೆ ಕೊಡುತ್ತಿದ್ದುದನ್ನು ನೋಡಿದ ಅಬ್ದುಲ್ ಅಜೀಜ್ ಆರೋಪಿಯನ್ನು ಉದ್ದೇಶಿಸಿ “ಸಿಕ್ಕ ಸಿಕ್ಕವರಲ್ಲಿ ಹಣ ಕೇಳಿ ಜಾತಿ ಮರ್ಯಾದೆ ತೆಗೆಯುತ್ತೀಯಾ? ದುಡಿದು ತಿನ್ನಲು ಆಗುವುದಿಲ್ಲವೆ?’ ಎಂದು ಹೇಳಿದಾಗ ಆರೋಪಿ “ಇದನ್ನು ಹೇಳಲು ನೀನು ಯಾರು?’ ಎಂದು ಹೇಳಿ ಅವಾಚ್ಯ ಶಬ್ಧದಿಂದ ಬೈದು ಪ್ಯಾಂಟ್ ಕಿಸೆಯಲ್ಲಿದ್ದ ಹರಿತವಾದ ಬ್ಲೇಡ್‌ನಿಂದ ಅಬ್ದುಲ್ ಅಜೀಜ್ ಅವರ ಕುತ್ತಿಗೆಗೆ ಬಲವಾಗಿ ಇರಿದಿದ್ದ. ಪಿಎಸ್‌ಐಗಳಾಗಿದ್ದ ಶಿವರುದ್ರಪ್ಪ ಮೇಟಿ ಮತ್ತು ಅನಂತ ಮುರ್ಡೇಶ್ವರ್ ಅವರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆ ಕಲಂ 324ರಂತೆ 2 ವರ್ಷಗಳ ಸಾದಾ ಸಜೆ ಮತ್ತು 20,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ ವಿಧಿಸಿ ಆದೇಶ ನೀಡಿದ್ದಾರೆ. ಅಲ್ಲದೆ ವಸೂಲಾತಿಯಾಗುವ 20,000 ರೂ.ಗಳ ಪೈಕಿ 15,000 ರೂ.ಗಳನ್ನು ಅಬ್ದುಲ್ ಅಜೀಜ್‌ಗೆ ಭಾರತೀಯ ದಂಡ ಸಂಹಿತೆ ಕಲಂ 357ರಡಿಯಲ್ಲಿ ಪರಿಹಾರವಾಗಿ ನೀಡಲು ಮತ್ತು ಉಳಿದ ಹಣವನ್ನು ಖರ್ಚಿನ ಬಾಬ್ತು ಸರಕಾರದ ಬೊಕ್ಕಸಕ್ಕೆ ಹೊಂದಾಣಿಕೆ ಮಾಡಲು ಆದೇಶ ನೀಡಿದ್ದಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು.