Advertisement

Mangaluru: ಎಚ್ಚರ… ಹೆಚ್ಚಾಗುತ್ತಿದೆ ದ್ವಿಚಕ್ರ ವಾಹನ ಕಳವು ಪ್ರಕರಣ

03:24 PM Dec 05, 2024 | Team Udayavani |

ಮಹಾನಗರ: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳವು ಮುಂದುವರಿದಿದ್ದು ಕಳೆದರಡು ತಿಂಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ. ದಾಖಲಾಗದ ಪ್ರಕರಣಗಳು ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ.ಒಂದೆಡೆ ಸವಾರರ ನಿರ್ಲಕ್ಷ್ಯ ಕಳ್ಳರಿಗೆ ವರದಾನವಾಗುತ್ತಿದೆ. ಇನ್ನೊಂದೆಡೆ ಪೊಲೀಸರ ಬಿಗಿ ಕಣ್ಗಾವಲು, ಸಿಸಿ ಕೆಮರಾಗಳ ಕೊರತೆ ಇವು ಕೂಡ ಕಳವಿಗೆ ಅನುಕೂಲ ಒದಗಿಸುತ್ತಿದೆ. ಕೆಲವು ಸವಾರರು ಕೀಯನ್ನು ವಾಹನದಲ್ಲಿಯೇ ಬಿಟ್ಟು ಹೋಗಿದ್ದರಿಂದ ಕಳ್ಳರಿಗೆ ಸುಲಭ ತುತ್ತಾಗಿದ್ದರೆ, ಇನ್ನು ಕೆಲವು ಮಂದಿ ಹ್ಯಾಂಡ್‌ಲಾಕ್‌ ಹಾಕದೆ ನಿರ್ಲಕ್ಷ್ಯ ತೋರಿರುವುದು ಕೂಡ ಕಳ್ಳರ ಕೃತ್ಯಕ್ಕೆ ಸಹಕಾರಿಯಾಗಿದೆ.

Advertisement

ಮನೆಯಂಗಳಕ್ಕೂ ಲಗ್ಗೆ:  ರಸ್ತೆಬದಿ, ಪಾರ್ಕ್‌ ಬಳಿ ನಿಲ್ಲಿಸಿದ್ದ ವಾಹನಗಳನ್ನು ಮಾತ್ರವಲ್ಲದೆ ಮನೆಯ ಆವರಣದಲ್ಲಿ ನಿಲ್ಲಿಸಿಟ್ಟ ವಾಹನ ಕೂಡ ರಾತ್ರಿ ಬೆಳಗಾಗುವುದರೊಳಗೆ ಕಳವಾಗಿದೆ. ಒಂದು ಕಡೆ ಕಳ್ಳರ ಕೃತ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆದರೆ ಕಳ್ಳರ ಪತ್ತೆ, ಬಂಧನ ಸಾಧ್ಯವಾಗಿಲ್ಲ.

ಎಲ್ಲೆಲ್ಲಿಕೃತ್ಯ ?
-ಕಳೆದ ಅಕ್ಟೋಬರ್‌, ನವೆಂಬರ್‌ ತಿಂಗಳು ಗಳಲ್ಲಿ ನಡೆದಿರುವ ಕೃತ್ಯಗಳು ಇಂತಿವೆ.
-ಮನೆಯ ಒಳಾಂಗಣದಲ್ಲಿ ಹ್ಯಾಂಡಲ್‌ ಲಾಕ್‌ ಮಾಡಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ನ. 21ರ ರಾತ್ರಿಯಿಂದ ನ. 22ರ ನಡುವಿನ ಅವಧಿಯಲ್ಲಿ ಕಳವಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಪಡೀಲ್‌ನಲ್ಲಿ ಮುಖ್ಯರಸ್ತೆಯಿಂದ ಸ್ವಲ್ಪ ಒಳಗೆ ಹ್ಯಾಂಡ್‌ಲಾಕ್‌ ಹಾಕದೆ ನಿಲ್ಲಿಸಿದ್ದ ಬೈಕ್‌ ಕಳವಾಗಿದೆ.
-ಅ. 28ರಂದು ಬಾವುಟಗುಡ್ಡೆಯ ಠಾಗೋರ್‌ ಪಾರ್ಕ್‌ ಎದುರು ಬೆಳಗ್ಗೆ ನಿಲ್ಲಿಸಿದ್ದ ಸ್ಕೂಟರ್‌ ರಾತ್ರಿ ನೋಡುವಾಗ ಕಳವಾಗಿತ್ತು.
-ಫ‌ಳ್ನೀರ್‌ನಲ್ಲಿ ಅ. 28ರಂದು ಬೆಳಗ್ಗೆ ಪಾರ್ಕ್‌ ಮಾಡಿದ್ದ ದ್ವಿಚಕ್ರ ವಾಹನ ಮರುದಿನ ಬೆಳಗ್ಗೆ ನೋಡಿದಾಗ ಕಳವಾಗಿತ್ತು.
-ಅ. 21ರಂದು ಕಟ್ಟಡವೊಂದರ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ ಕಳವಾದ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಲಾಗಿತ್ತು. ಕಳವು ಕೃತ್ಯ ಸಿಸಿ ಕೆಮರಾದಲ್ಲಿ ದಾಖಲಾಗಿತ್ತು.
-ಅ. 9ರಂದು ಗ್ಯಾರೇಜ್‌ನಲ್ಲಿ ಕೀ ಸಮೇತ ನಿಲ್ಲಿ ಸಿದ್ದ ದ್ವಿಚಕ್ರ ವಾಹನ ಕಳವಾದ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
-ಕಂಕನಾಡಿ ಡಾನ್‌ಬಾಸ್ಕೊ ಹಾಸ್ಟೆಲ್‌ ಎದುರು ಅ.1ರಂದು ಪಾರ್ಕ ಮಾಡಿದ್ದ 50,000 ರೂ. ಮೌಲ್ಯದ ಹಿಮಾಲಯನ್‌ ಬೈಕ್‌ನ್ನು ಕಳವು ಮಾಡಲಾಗಿತ್ತು.
-ಕೆ.ಸಿ.ರೋಡ್‌ನ‌ ಕಟ್ಟವೊಂದರ ಪಾರ್ಕಿಂಗ್‌ ಸ್ಥಳದಲ್ಲಿ ಅ. 2ರಂದು ಪಾರ್ಕ್‌ ಮಾಡಿದ್ದ ದ್ವಿಚಕ್ರವಾಹನ ಕಳವಾದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
-ನ. 28ರಂದು ಕಾವೂರು ಠಾಣಾ ವ್ಯಾಪ್ತಿಯ ಮನೆ ಪಕ್ಕದ ಗ್ಯಾರೇಜೊಂದರಿಂದ ಬೈಕ್‌ ಕಳವಾಗಿದೆ.
-ನ. 20ರಂದು ಸುರತ್ಕಲ್‌ ಆರೋಗ್ಯ ಕೇಂದ್ರದ ಆವರಣಗೋಡೆಯ ಒಳಗೆ ನಿಲ್ಲಿಸಿದ್ದ ಬೈಕ್‌ ಒಂದು ತಾಸಿನ ಅಂತರದೊಳಗೆ ಕಳವಾಗಿತ್ತು.

ನಿಗಾ ಹೆಚ್ಚಾಗಲಿ
ಈ ಹಿಂದೆ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಲಾಗಿತ್ತು. ಆದರೆ ಕಳ್ಳತನ ಮುಂದುವರಿದಿದೆ. ನಗರ ಮಾತ್ರವಲ್ಲದೆ ಮೂಲ್ಕಿ, ಉಳ್ಳಾಲ, ಮೂಡುಬಿದಿರೆ ಮೊದಲಾದೆಡೆಯೂ ಅಲ್ಲಲ್ಲಿ ದ್ವಿಚಕ್ರ ವಾಹನಗಳ ಮೇಲೆ ಕಳ್ಳರು ಕಣ್ಣಿಟ್ಟಿದ್ದಾರೆ ಎನ್ನುವುದಕ್ಕೆ ಈಗಾಗಲೇ ನಡೆದಿರುವ ಕಳ್ಳತನ ಪ್ರಕರಣ ಗಳು ಸಾಕ್ಷಿಯಾಗಿವೆ. ಕಳ್ಳರು ಯಾವುದೇ ಒಂದು ನಿರ್ದಿಷ್ಟ ಪರಿಸರದಲ್ಲಿ ಮಾತ್ರವೇ ಕಳ್ಳತನ ಮಾಡದೆ ಒಂದು ಭಾಗದಲ್ಲಿ ಕೃತ್ಯ ನಡೆಸಿದ ಅನಂತರ ಅದರಿಂದ ಸಾಕಷ್ಟು ದೂರದ ಸ್ಥಳದಲ್ಲಿ ಮತ್ತೂಂದು ಕೃತ್ಯ ನಡೆಸುವ ‘ಚಾಣಾ ಕ್ಷತನ’ ಕೂಡ ತೋರಿತ್ತಿದ್ದಾರೆ. ಹಾಗಾಗಿ ಪೊಲೀಸರು ಗೌಪ್ಯವಾಗಿ ನಿಗಾ ವಹಿಸಿ ಯೋಜಿತ ಕಾರ್ಯಾಚರಣೆ ನಡೆಸುವ ಅಗತ್ಯವಿದೆ. ಜತೆಗೆ ಸಿಸಿ ಕೆಮರಾಗಳನ್ನು ಅಳವಡಿಸುವಂತೆ ಎಲ್ಲ ಕಟ್ಟಡ ಮಾಲಕರಿಗೂ ಸ್ಪಷ್ಟ ಸೂಚನೆ ನೀಡಬೇಕಾಗಿದೆ. ಅಗತ್ಯ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಕೆಲಸವಾಗಬೇಕು.

ನಿರ್ಲಕ್ಷ್ಯ ಸಲ್ಲದು
-ವಾಹನದಲ್ಲಿಯೇ ಲಾಕ್‌ ಬಿಟ್ಟು ಹೋಗಬೇಡಿ.
-ಹ್ಯಾಂಡ್‌ಲಾಕ್‌ನ್ನು ಹಾಕದೆ ತೆರಳಬೇಡಿ.
-ರಸ್ತೆಬದಿ ವಾಹನ ಪಾರ್ಕ್‌ ಮಾಡಿ ತುಂಬಾ ತಡವಾಗಿ, ಮರುದಿನ ವಾಪಸ್‌ ಬರುವುದು ಅಪಾಯಕಾರಿ.
-ಸಾಧ್ಯವಾದಷ್ಟು ಸಿಸಿ ಕೆಮರಾ, ಸೆಕ್ಯೂರಿಟಿ ಸಿಬಂದಿ ಇರುವಲ್ಲಿಯೇ ವಾಹನ ಪಾರ್ಕಿಂಗ್‌ ಮಾಡಿದರೆ ಸುರಕ್ಷಿತ.

Advertisement

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next