ಮಂಗಳೂರು: ನಗರ ಜಿಲ್ಲಾ ಕಾರಾಗೃಹದ ವಿಚಾರಣಾ ಕೈದಿ ಮಹೇಂದ್ರ ಶೆಟ್ಟಿಯನ್ನು ಭೇಟಿ ಮಾಡಲು ಬಂದಿದ್ದ ಅನಿಶ್ ವಾಟ್ಸನ್ ಡಿಸೋಜಾ ಎಂಬಾತನ ಬಳಿ ಗಾಂಜಾ ಪತ್ತೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಮೇ17ರಂದು 5ಗಂಟೆಗೆ ಕೈದಿಗೆ ಬಟ್ಟೆ ಹಾಗೂ ಚಪ್ಪಲಿಗಳನ್ನು ತಂದಿದ್ದ. ಜೈಲಿನ ಸಿಬಂದಿಯವರಾದ ಎಆರ್‌ಎಸ್‌ಐ ಮಹಾಬಲ ನಾಯ್ಕ, ಎಚ್.ಸಿ. ಕೀರ್ತಿಕುಮಾರ ಎಸ್‌ಎ ಹಾಗೂ ಪಿಸಿ ಇನಾಯತುಲ್ಲಾ ಅವರು ಪರಿಶೀಲಿಸುವ ಸಂದರ್ಭದಲ್ಲಿ ಚಪ್ಪಲಿಗಳಲ್ಲಿ ಹೆಚ್ಚುವರಿಯಾಗಿ ಹೊಲಿಗೆ ಹಾಕಿರುವ ರೀತಿಯಲ್ಲಿ ಕಂಡು ಬಂದಿದೆ. ಹೊಲಿಗೆ ಬಿಚ್ಚಿ ಪರಿಶೀಲಿಸಿದಾಗ ಗಾಂಜಾದಂತಹ ವಾಸನೆಯುಳ್ಳ ವಸ್ತು ಕಂಡು ಬಂದಿದೆ. ಪರಿಶೀಲನೆ ವೇಳೆ ಗಾಂಜ ಎಂದು ದೃಢಪಟ್ಟಿದೆ.
ಆತನನ್ನು ವಶಕ್ಕೆ ಪಡೆದು ಠಾಣೆಗೆ ಹಾಜರು ಪಡಿಸಿ, ಕರ್ನಾಟಕ ಕಾರಾಗೃಹ ಅಧಿನಿಯಮ 1963 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ ಮತ್ತು ಎನ್‌ಡಿಪಿಎಸ್ ಕಾಯಿದೆಯಡಿಯಲ್ಲಿ ಹಾಗೂ ಐಪಿಸಿ ಕಲಂನಲ್ಲಿ ಪ್ರಕರಣ ದಾಖಲಿಸಲಾಗಿದೆ.