Advertisement

Mangaluru; ಚರಂಡಿ ತೋಡಿಗೆ ಬಿದ್ದ ಆಟೋ ರಿಕ್ಷಾ; ಚಾಲಕ ಸಾವು

12:09 AM May 26, 2024 | Team Udayavani |

ಮಂಗಳೂರು: ಮಳೆನೀರು ತುಂಬಿ ಹರಿಯುತ್ತಿದ್ದ ರಸ್ತೆ ಬದಿಯ ತೋಡಿಗೆ (ರಾಜಕಾಲುವೆ) ಆಟೋರಿಕ್ಷಾ ಬಿದ್ದು ಚಾಲಕ ಮೃತಪಟ್ಟ ಘಟನೆ ಕೊಟ್ಟಾರಚೌಕಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

Advertisement

ಕೊಟ್ಟಾರಚೌಕಿ ನಿವಾಸಿ ದೀಪಕ್‌ ಆಚಾರ್ಯ (42) ಮೃತಪಟ್ಟವರು. ಘಟನೆ ವೇಳೆ ರಿಕ್ಷಾದಲ್ಲಿ ಒಬ್ಬರೇ ಇದ್ದರು. ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರ ಚೌಕಿಯಿಂದ ಸುಮಾರು 1 ಕಿ.ಮೀ. ದೂರದ ಒಳಭಾಗದ ರಸ್ತೆಯಲ್ಲಿ ರಾತ್ರಿ 11.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ದೀಪಕ್‌ ಬಾಡಿಗೆ ಮುಗಿಸಿ ಕೊಟ್ಟಾರದಲ್ಲಿರುವ ತನ್ನ ಮನೆಯ ಕಡೆಗೆಂದು ಬರುತ್ತಿದ್ದಾಗ ಭಾರೀ ಮಳೆ ಸುರಿಯುತ್ತಿತ್ತು. ತೋಡು ತುಂಬಿ ಹರಿಯುತ್ತಿದ್ದ ಕಾರಣ ರಸ್ತೆ ಕಾಣಿಸದೆ ನಿಯಂತ್ರಣ ಕಳೆದುಕೊಂಡು ರಿಕ್ಷಾ ತೋಡಿಗೆ ಜಾರಿತು. ಸರಿಸುಮಾರು ಒಂದು ತಾಸಿನ ಬಳಿಕ ಸಾರ್ವಜನಿಕರು ಗಮನಿಸಿ ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದ್ದರು.ಮೇಲಕ್ಕೆತ್ತಿದಾಗ ರಿಕ್ಷಾದಡಿ ನೀರಿನೊಳಗೆ ದೀಪಕ್‌ ಮೃತಪಟ್ಟಿದ್ದರು.

ನೆರೆಯೆಂದು ದಾರಿ ಬದಲಿಸಿದ್ದರು!
ದೀಪಕ್‌ ಪ್ರತಿದಿನವೂ ಬಾಡಿಗೆ ಮುಗಿಸಿ ಮುಖ್ಯರಸ್ತೆಯಿಂದ ಮನೆಗೆ ನೇರವಾಗಿ ಸಂಪರ್ಕಿಸುವ ರಸ್ತೆಯಲ್ಲಿಯೇ ಬರುತ್ತಿದ್ದರು. ಆದರೆ ಶುಕ್ರವಾರ ರಾತ್ರಿ ಭಾರೀ ಮಳೆಯ ಹಿನ್ನೆಲೆಯಲ್ಲಿ ತನ್ನ ಮನೆಗೆ ನೇರವಾಗಿ ಬರುವ ರಸ್ತೆ ನೆರೆಯಿಂದ ಆವೃತವಾಗಿರುವ ಮಾಹಿತಿ ಪಡೆದು ಮತ್ತೂಂದು ಮಾರ್ಗದಲ್ಲಿ ಬರಲು ನಿರ್ಧರಿಸಿರಬೇಕು ಎಂದು ಮನೆಯವರು ಹೇಳಿದ್ದಾರೆ.

ನೀರು ಇಳಿದಿತ್ತು… ಪ್ರಾಣ ಹಾರಿತ್ತು
ಘಟನೆ ಸಂಭವಿಸಿದ ಸ್ಥಳಕ್ಕೂ ದೀಪಕ್‌ ಅವರ ಮನೆಗೂ ಕೆಲವೇ ಮೀಟರ್‌ಗಳ ಅಂತರ. ಶುಕ್ರವಾರ ಸುರಿದ ಭಾರೀ ಮಳೆಗೆ ಅವರ ಮನೆಗೂ ನೀರು ನುಗ್ಗಿತ್ತು. ಶನಿವಾರ ಬೆಳಗ್ಗೆ ನೀರು ಇಳಿದುಹೋಗಿತ್ತು. ಆದರೆ ದೀಪಕ್‌ ಪ್ರಾಣ ಹಾರಿಹೋಗಿತ್ತು. “ಪ್ರತೀ ಮಳೆಗಾಲಕ್ಕೂ ನಮ್ಮ ಪರಿಸರದಲ್ಲಿ ನೀರು ಮೇಲೇರುತ್ತದೆ. ಆದರೆ ಈ ಬಾರಿ ಪ್ರಾಣವನ್ನೇ ಕಿತ್ತುಕೊಂಡು ಹೋಗಿದೆ’ ಎಂದು ಮನೆಯವರು ರೋದಿಸಿದರು. ಅವಘಡ ಸಂಭವಿಸಿದ ತೋಡಿನಲ್ಲೂ ಶನಿವಾರ ನೀರಿನ ಪ್ರಮಾಣ ಕಡಿಮೆಯಾಗಿತ್ತು.

Advertisement

ಆಟೋರಿಕ್ಷಾ ನೀರಿನಲ್ಲಿ ಬಹುತೇಕ ಮುಳುಗಿತ್ತು. ಧಾರಾಕಾರ ಮಳೆ, ಗಾಢ ಕತ್ತಲಿನಲ್ಲಿ ರಿಕ್ಷಾದಲ್ಲಿ ರಿವರ್ಸ್‌ಗೇರ್‌ ಲೈಟ್‌ ಉರಿಯುತ್ತಿತ್ತು. ಆಟೋರಿಕ್ಷಾ ರಸ್ತೆ ಬಿಟ್ಟು ಬದಿಗೆ ಸರಿಯುತ್ತಿದೆ ಎಂದು ಗೊತ್ತಾದ ಕೂಡಲೇ ದೀಪಕ್‌ ರಿವರ್ಸ್‌ ಗೇರ್‌ ಹಾಕಿ ರಕ್ಷಿಸಿಕೊಳ್ಳಲು ಯತ್ನಿಸಿದ್ದರು. ಆಗ ರಿಕ್ಷಾ ಚರಂಡಿಗೆ ಬಿದ್ದಿರಬೇಕು ಎಂದು ಹೇಳಲಾಗಿದೆ.

ವಿದೇಶಕ್ಕೆ ಹೋಗುವವರಿದ್ದರು
“ದೀಪಕ್‌ ಈ ಹಿಂದೆ ಮಂಗಳೂರಿನಲ್ಲೇ
ಆಟೋ ಓಡಿಸುತ್ತಿದ್ದರು. ಬಳಿಕ ವಿದೇಶಕ್ಕೆ ತೆರಳಿದ್ದರು. ಅನಂತರ ಊರಿಗೆ ಬಂದು ಕೆಲವು ವರ್ಷಗಳಿಂದ ಆಟೋ ಓಡಿಸುತ್ತಿದ್ದರು. ಮುಂದಿನ ತಿಂಗಳು ಮತ್ತೆ ವಿದೇಶಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು’ ಎಂದು ಗೆಳೆಯ ವಿಜಯ್‌ ನೋವು ಹಂಚಿಕೊಂಡಿದ್ದಾರೆ.

ಮನೆಯ ಆಧಾರಸ್ತಂಭ
ದೀಪಕ್‌ ತನ್ನ ಅನಾರೋಗ್ಯಪೀಡಿತ ತಾಯಿ ಮತ್ತು ಸಹೋದರನೊಂದಿಗೆ ಕೊಟ್ಟಾರದಲ್ಲಿ ವಾಸವಾಗಿದ್ದರು. ಅಕ್ಕನಿಗೆ ಮದುವೆಯಾಗಿದೆ. ದೀಪಕ್‌ ಈ ಹಿಂದೆ ನಗರದಲ್ಲಿ ಆಟೋ ಓಡಿಸುತ್ತಿದ್ದರು. ಅನಂತರ ವಿದೇಶಕ್ಕೆ ತೆರಳಿದ್ದರು. ಐದಾರು ವರ್ಷಗಳಿಂದ ಮತ್ತೆ ನಗರದಲ್ಲಿ ಬೇರೊಬ್ಬರ ಮಾಲಕತ್ವದ ರಿಕ್ಷಾದಲ್ಲಿ ಚಾಲಕನಾಗಿದ್ದರು.

ಪಾಲಿಕೆ ವಿರುದ್ಧ ಪ್ರಕರಣ
ಮುಂಜಾಗ್ರತ ಕ್ರಮವಾಗಿ ತೋಡಿಗೆ ತಡೆಗೋಡೆ ನಿರ್ಮಿಸದಿರು ವುದರಿಂದ, ತೋಡನ್ನು ಸ್ವತ್ಛ ಗೊಳಿಸದೇ ಇದ್ದ ಕಾರಣ ಮಳೆ ನೀರು ತುಂಬಿನಿಂತು ಅವಘಡ ಸಂಭವಿಸಿದ್ದು ಇದಕ್ಕೆ ಪಾಲಿಕೆಯೇ ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಾಲಿಕೆಯ ಅಧಿಕಾರಿಗಳ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಳುಚೀಲ, ರಿಫ್ಲೆಕ್ಟರ್‌ ಅಳವಡಿಕೆ
ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿಗೆ ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ರಾಜಕಾಲುವೆಗಳು ರಸ್ತೆಗೆ ಸಮಾನಾಂತರವಾಗಿರುವುದರಿಂದ ಹೆಚ್ಚು ಅಪಾಯಕಾರಿಯಾಗಿವೆ. ಅವುಗಳು 7ರಿಂದ 8 ಕಿ.ಮೀ. ವರೆಗೂ ಉದ್ದ ಇರುವುದರಿಂದ ಶಾಶ್ವತವಾಗಿ ತಡೆಗೋಡೆ ನಿರ್ಮಾಣ ಅಸಾಧ್ಯ. ಹಾಗಾಗಿ ಸದ್ಯ ತಾತ್ಕಾಲಿಕ ಕ್ರಮವಾಗಿ ಸುಮಾರು 20ರಿಂದ 30 ಕಡೆ ರಾಜಕಾಲುವೆಗಳ ಬಳಿ ಮರಳು ಚೀಲ, ರಿಫ್ಲೆಕ್ಟರ್‌ ಟೇಪ್‌ ಅಳವಡಿಸಲಾಗುತ್ತಿದೆ. ಕೊಟ್ಟಾರಚೌಕಿಯಲ್ಲಿ ನಡೆದಿರುವ ದುರಂತ ನೋವನ್ನುಂಟು ಮಾಡಿದೆ. ಇದು ಸ್ವಲ್ಪ ಒಳಪ್ರದೇಶವಾಗಿರುವುದರಿಂದ ಇಲ್ಲಿನ ರಾಜಕಾಲುವೆಯ ಅಪಾಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಾರದಿರುವ ಸಾಧ್ಯತೆ ಇದೆ. ಇನ್ನು ಮುಂದೆ ಪ್ರತೀ ಸಂಜೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗುವುದು. ಸಾರ್ವಜನಿಕರು ಕೂಡ ಮಳೆಗಾಲದ ಸಂದರ್ಭ, ಮುಖ್ಯವಾಗಿ ರಾತ್ರಿ ವೇಳೆ ಹೆಚ್ಚು ಜಾಗರೂಕತೆ ವಹಿಸಬೇಕು.
-ಆನಂದ್‌ ಸಿ.ಎಲ್‌., ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next