Advertisement

Mangaluru: ಅಂಬೇಡ್ಕರ್‌ ವೃತ್ತ ನಿರ್ಮಾಣ; ಯಾಕೆ ಮೀನಮೇಷ?

02:33 PM Dec 13, 2024 | Team Udayavani |

ಮಹಾನಗರ: ನಗರದ ಅಂಬೇಡ್ಕರ್‌ ವೃತ್ತದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆ ಸಹಿತ ವೃತ್ತ ನಿರ್ಮಾಣ ಕಾರ್ಯ ಬಹಳಷ್ಟು ವಿಳಂಬವಾಗಿದೆ. ಯಾವಾಗ ಕೆಲಸ ಆರಂಭವಾಗುತ್ತದೆ ಎನ್ನುವುದನ್ನು ಸಭೆಗೆ ಸ್ಪಷ್ಟ ಪಡಿಸಬೇಕು. ನಗರದಲ್ಲಿ ಈಗಾಗಲೇ ಬಹುತೇಕ ವೃತ್ತಗಳು ನಿರ್ಮಾಣವಾಗಿದ್ದು, ಅಂಬೇಡ್ಕರ್‌ ವೃತ್ತಕ್ಕೆ ಮಾತ್ರ ಯಾಕೆ ಮೀನಮೇಷ ಎಂದು ದಲಿತ ಸಂಘಟನೆಗಳ ಪ್ರಮುಖರು ದ.ಕ. ಜಿಲ್ಲಾಡಳಿತವನ್ನು ಪ್ರಶಸ್ನಿಸಿದ್ದಾರೆ.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿ ಚರ್ಚೆಯಾಯಿತು.

ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್‌ ಮಾತನಾಡಿ, ಅಂಬೇಡ್ಕರ್‌ ವೃತ್ತವನ್ನು ಯಾವ ಅನುದಾನದಲ್ಲಿ ಯಾವ ರೀತಿ ನಿರ್ಮಾಣ ಮಾಡಬೇಕು ಎಂದು ಪಾಲಿಕೆ ತೀರ್ಮಾನ ಕೈಗೊಳ್ಳಬೇಕು. ಕಾಮಗಾರಿ ಆರಂಭ ಮಾಡುವ ದಿನವನ್ನು ಕೂಡಲೇ ತಿಳಿಸಬೇಕು. 15 ದಿನದಲ್ಲಿ ಟ್ರಾಫಿಕ್‌ ಕುರಿತಂತೆ ಇರುವ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮೊದಲು ಸಭೆಯಲ್ಲಿ ವಿಚಾರ ಪ್ರಸ್ತಾವಿಸಿದ ದಸಂಸ ಮುಖಂಡ ಆನಂದ್‌, ಈಗಾಗಲೇ ಹಲವು ಚರ್ಚೆಗಳು, ಸಭೆಗಳು ನಡೆದಿವೆ. ಭೂಮಿ ಪೂಜೆ ನಡೆದು ಹಲವು ತಿಂಗಳು ಕಳೆದಿವೆ. ಶೀಘ್ರ ಅಂಬೇಡ್ಕರ್‌ ವೃತ್ತ ನಿರ್ಮಾಣ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಇತರ ಮುಖಂಡರೂ ಧ್ವನಿಗೂಡಿಸಿದರು.

ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಉತ್ತರಿಸಿ, ಈಗಾಗಲೇ ಕಲ್ಲುಗಳನ್ನು ಇರಿಸಿ ಒಂದು ಬಾರಿ ವಾಹನ ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸಲಾಗಿದ್ದು, ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದರು.

Advertisement

ವೃತ್ತ ನಿರ್ಮಾಣ: ಅನುದಾನದ ಚರ್ಚೆ
ಸಿಎಸ್‌ಆರ್‌ ಆನುದಾನದಲ್ಲಿ ವೃತ್ತ ನಿರ್ಮಾಣ ಮಾಡುವುದಾಗಿ ಬ್ಯಾಂಕ್‌ನವರು ಮುಂದೆ ಬಂದಿದ್ದಾರೆ. ಸುಮಾರು 75 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ ಎಂದು ಸಭೆಗೆ ಆಯುಕ್ತರು ವಿವರಿಸಿದರು. ಈ ವೇಳೆ ಮನಪಾ ಮಾಜಿ ಸದಸ್ಯೆ ಅಪ್ಪಿ ಮಾತನಾಡಿ, ಬ್ಯಾಂಕಿನ ಅನುದಾನದಲ್ಲಿ ವೃತ್ತ ನಿರ್ಮಿಸುವುದು ಸರಿಯಲ್ಲ. ವೃತ್ತ ನಿರ್ಮಾಣಕ್ಕಾಗಿ ಪಾಲಿಕೆ ಈಗಾಗಲೇ ಹಣವನ್ನು ಮೀಸಲಿಟ್ಟಿದೆ. ಅದರಲ್ಲೇ ನಿರ್ಮಿಸಬೇಕು ಎಂದರು. ಇದಕ್ಕೆ ಕೆಲವು ಮುಖಂಡರಿಂದ ವಿರೋಧವೂ ವ್ಯಕ್ತವಾಯಿತು. ಪಾಲಿಕೆ ಮೀಸಲಿಟ್ಟ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಬಳಸಿ. ಬ್ಯಾಂಕ್‌ ಸಿಎಸ್‌ಆರ್‌ ಅನುದಾನ ನೀಡುವುದಾದರೆ ಅದನ್ನೇ ಬಳಸಿ ವೃತ್ತ ನಿರ್ಮಾಣ ಮಾಡುವಂತೆ ಆಗ್ರಹ ವ್ಯಕ್ತವಾಯಿತು.

ಸೂಜಿಕಲ್ಲು ಗುಡ್ಡ: ಒಳಚರಂಡಿ ವ್ಯವಸ್ಥೆ ಕಲ್ಪಿಸಿ
ಕಾವೂರು ವ್ಯಾಪ್ತಿಯ ಸೂಜಿಕಲ್ಲು ಗುಡ್ಡ ಪ್ರದೇಶದಲ್ಲಿ ದಲಿತ ಕುಟುಂಬಗಳಿಗೆ ಸೇರಿದ ಸುಮಾರು 80 ಮನೆಗಳಿಗೆ ಒಳಚರಂಡಿ ಜಾಲ ಸಂಪರ್ಕವಾಗಿಲ್ಲ. ಈ ಬಗ್ಗೆ ಪಾಲಿಕೆಯಲ್ಲಿ ನಡೆದ ಎಸ್‌ಸಿ ಎಸ್‌ಟಿ ಸಭೆಯಲ್ಲಿ 2-3 ಬಾರಿ ಪ್ರಸ್ತಾವ ಮಾಡಿದರೂ ಯಾವುದೇ ಪ್ರಸ್ತಾವ ಮಾಡಿದರೂ ಸಮಸ್ಯೆ ಬಗೆ ಹರಿದಿಲ್ಲ. ಕಲುಷಿತ ನೀರು ಎಂದು ಸಮುದಾಯ ಮುಖಂಡರಾದ ರಮೇಶ್‌ ಕೋಟ್ಯಾನ್‌ ಆರೋಪಿಸಿದರು. ಈಬಗ್ಗೆ ಜಿಲ್ಲಾಧಿಕಾರಿಯವರ ಸೂಚನೆಯಂತೆ ಉತ್ತರಿಸಿದ ಪಾಲಿಕೆ ಎಂಜಿನಿಯರ್‌ ಈ ಬಗ್ಗೆ ಪರಿಶೀಲಿಸಿ ಪಾಲಿಕೆ ಸಾಮಾನ್ಯ ನಿಧಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಪಾಲಿಕೆ ಸಭೆಯಲ್ಲಿ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಕಾಲನಿಗಳಿಗೆ ಇನ್ನೂ ಬಾರದ ಸಿಸಿ ಕೆಮರಾ
ನಗರದ ವ್ಯಾಪ್ತಿಯ ಪರಿಶಿಷ್ಟ ಜಾತಿ- ಪಂಗಡದವರ ಕಾಲನಿಗಳಿಗೆ ಭದ್ರತೆಯ ಉದ್ದೇಶವಾಗಿ ಸಿಸಿ ಕೆಮರಾ ಅಳವಡಿಸಬೇಕು ಎಂದು ಈಗಾಗಲೇ ತೀರ್ಮಾನವಾಗಿದ್ದು, ಇನ್ನೂ ಸಮಪರ್ಕಕವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದರು. ಇದಕ್ಕೆ ಪಾಲಿಕೆ ಆಯುಕ್ತರು ಉತ್ತರಿಸಿ ಸಾಕಷ್ಟು ಕಡೆಗಳಲ್ಲಿ ಅಳವಡಿಸಲಾಗಿದೆ ಎಂದರು. ಶೀಘ್ರ ಕೆಮರಾ ಅಳವಡಿಕೆ ಕೆಲಸವಾಗಬೇಕು ಜಿಲ್ಲಾಧಿಕಾರಿಯವರು ಸೂಚಿಸಿದರು.

ಶ್ಮಶಾನದ ಅಭಿವೃದ್ಧಿಗೆ ಸ್ಥಳೀಯರ ಅಡ್ಡಿ
ಉಳ್ಳಾಲದ ತಲಪಾಡಿಯಲ್ಲಿ 20 ವರ್ಷಗಳ ಹಿಂದೆ ಶ್ಮಶಾನಕ್ಕೆ ಮೀಸಲಿಟ್ಟ 65 ಸೆಂಟ್ಸ್‌ ಜಾಗದಲ್ಲಿ ಇನ್ನೂ ಸರಿಯಾಗಿ ತಡೆಗೋಡೆ ಆಗಿಲ್ಲ. ಚಿತಾಗಾರ ನಿರ್ಮಾಣ ಮಾಡಿಲ್ಲ ಎಂದು ದಲಿತ ನಾಯಕ ಎಸ್‌.ಪಿ. ಆನಂದ್‌ ದೂರಿದರು.

ತಡೆಗೋಡೆ ನಿರ್ಮಾಣವಾಗಿದ್ದು, ಸ್ವಲ್ಪ ಬಾಕಿ ಇದೆ. ಸ್ಥಳೀಯರ ಆಕ್ಷೇಪದ ಹಿನ್ನೆಲೆಯಲ್ಲಿ ಬಾಕಿ ಆಗಿದೆ. ಈ ಬಗ್ಗೆ ಪಂಚಾಯತ್‌ನಲ್ಲೂ ನಿರ್ಣಯವಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿ ಪ್ರತಿಕ್ರಿಯಿಸಿದರು. ಜಿಲ್ಲಾಧಿಕಾರಿ ಉತ್ತರಿಸಿ, ಪಂಚಾಯತ್‌ನಿಂದಲೇ ಮೀಸಲಿಟ್ಟ ಭೂಮಿಗೆ ಮತ್ತೆ ಪಂಚಾಯತ್‌ನಲ್ಲಿ ನಿರ್ಣಯ ಮಾಡಿದರೆ ಅದನ್ನು ಪರಿಗಣಿಸಲಾಗದು. ಸೂಕ್ತ ಕ್ರಮ ಕೈಗೊಂಡು ಅಭಿವೃದ್ಧಿ ಚಟುವಟಿಕೆ ನಡೆಸುವಂತೆ ತಿಳಿಸಿದರು.

ಪ್ರಮುಖ ಆಕ್ಷೇಪಗಳು
-ವಾಮಂಜೂರು ತಿರುವೈಲ್‌ನ ಕೆತ್ತಿಕಲ್‌ನಲ್ಲಿರುವ ಅಂಬೇಡ್ಕರ್‌ ಭವನಕ್ಕೆ ಸ್ಥಳೀಯ ವ್ಯಕ್ತಿಯಿಂದ ಅಡ್ಡಿ ಆರೋಪ
-ಹಳೆಯಂಗಡಿ ಅಂಬೇಡ್ಕರ್‌ ಭವನದ ಹೆಸರು ‘ಇಂದಿರಾಗಾಂಧಿ ಭವನ’ ಎಂದು ಬದಲಾವಣೆಗೆ ಆಕ್ಷೇಪ
-ಸಹಕಾರ ಸಂಘಗಳಲ್ಲಿ ಎಸ್‌ಸಿ ಎಸ್‌ಟಿ ಸಮುದಾಯದವರು ಸಾಲಕ್ಕೆ ಅರ್ಜಿ ಹಾಕಿದರೆ ಸಿಇಒಗಳಿಂದ ಅಡ್ಡಿ ಆರೋಪ

ಕಲುಷಿತ ನೀರು ಪರೀಕ್ಷೆಗೆ ಸೂಚನೆ
10ನೇ ತೋಕೂರು ಗ್ರಾಮದ ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಬೋರ್‌ವೆಲ್‌ನಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ದಲಿತ ನಾಯಕರೊಬ್ಬರು ಆರೋಪಿಸಿದರು. ನೀರಿನ ಮಾದರಿ ಪಡೆದು ಪರೀಕ್ಷೆ ನಡೆಸಿ, ಮುಂದಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯುತ ಸಂಕರ್ಪ; ತ್ವರಿತ ಸರ್ವೇ ಸೂಚನೆ
ಕುದುರೆಮುಖ ರಕ್ಷಿತಾರಣ್ಯದ ಸಮೀಪ ವಾಸವಿರುವ 7 ಗ್ರಾಮದ ಜನರು ವಿದ್ಯುತ್‌ ಸಂಪರ್ಕವಿಲ್ಲದೆ ನಲುಗುವಂತಾಗಿದೆ. ಒಂದು ಗ್ರಾಮದವರಿಗೆ ಸೋಲಾರ್‌ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಅದು ಕೂಡ ಸಮರ್ಪಕವಾಗಿ ಉರಿಯುವುದಿಲ್ಲ ಎಂದು ಶೇಖರ್‌ ಲಾೖಲ ಆರೋಪಿಸಿದರು. ಈ ಬಗ್ಗೆ ಉತ್ತರಿಸಿ ಜಿಲ್ಲಾಧಿಕಾರಿಯವರು, ವಿದ್ಯುತ್‌ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಸರ್ವೇ ಕಾರ್ಯವನ್ನು ತ್ವರಿತಗೊಳಿಸಿ ಜ. 5ರೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಯವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next