ಮಂಗಳೂರು: ಮಂಗಳವಾರದಂದು ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ರೌಡಿಶೀಟರ್ ರೋಹಿದಾಸ್ ಕೆ. ಆಲಿಯಾಸ್ ಶರಣ್ ಆಲಿಯಾಸ್ ಶರಣ್ ಪೂಜಾರಿ ಆಲಿಯಾಸ್ ಆಕಾಶ ಭವನ ಶರಣ್ (37) ನ ಸಹಚರರಿಗಾಗಿ ಪೊಲೀಸರು ಬಲೆ ಬೀಸಿದ್ದು ತನಿಖೆ ತೀವ್ರಗೊಳಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿ ರುವ ಶರಣ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಆತನೊಂದಿಗೆ 7ರಿಂದ 8 ಮಂದಿ ನಿಕಟ ಸಂಪರ್ಕ ಹೊಂದಿದ್ದು ಸಹಕರಿಸುತ್ತಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಎಂದು ತಿಳಿದು ಬಂದಿದೆ.
ಭೂಗತ ಪಾತಕಿಯ ಬಂಟ ಕರಾವಳಿ ಮೂಲದವನಾಗಿದ್ದು ವಿದೇಶದಲ್ಲಿರುವ ಭೂಗತ ಪಾತಕಿಯೋರ್ವನ ಬಲಗೈ ಬಂಟನಾಗಿಯೂ ಕೃತ್ಯ ನಡೆಸುತ್ತಿದ್ದ ಶರಣ್ ಹಫ್ತಾ ವಸೂಲಿ, ಸುಲಿಗೆಯನ್ನು ಕೂಡ ಮಾಡುತ್ತಿದ್ದ. ಸುಪಾರಿ ಪಡೆದು ಹತ್ಯೆಗಳನ್ನು ಕೂಡ ನಡೆಸಿದ್ದ. ಮಾತ್ರವಲ್ಲದೆ ಅತ್ಯಾಚಾರದಂತಹ ಕೃತ್ಯಗಳಿಂದಾಗಿ ಕೆಲವು ಆಪ್ತ ಸ್ನೇಹಿತರ ವಲಯದಿಂದಲೇ ತಿರಸ್ಕರಿಸಲ್ಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ.
ಶರಣ್‌ಗೆ ವಿವಿಧೆಡೆ ಆಶ್ರಯ ನೀಡಿದ್ದ ಮಂಗಳೂರು ಕೋಡಿಕಲ್‌ನ ಶೀಲಾ, ಉಡುಪಿ ಸಂತೆಕಟ್ಟೆಯ ಶರತ್ ಭಂಡಾರಿ ಹಾಗೂ ಆತನ ಪತ್ನಿ ಮಯೂರಿ, ಧನಂಜಯ ಹಾಗೂ ಚೇತನ್ ಬುಳ್ಳ ಅವರ ವಿರುದ್ಧ ಕಾವೂರು ಠಾಣೆಯಲ್ಲಿ, ಶಿವ ಕರ್ಬಿಸ್ಥಾನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ, ಶಾನು ಶೆಟ್ಟಿ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳಿವು ನೀಡಿದ ಟೋಲ್‌ಗೇಟ್ ಕೆಮರಾ
ಶರಣ್ ಮಲ್ಪೆಯ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಂಡಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಮಂಗಳವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸುವಾಗ ಅಲ್ಲಿಂದ ಪರಾರಿಯಾಗಿದ್ದ. ಮಂಗಳೂರು ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಾಹಿತಿ ಲಭಿಸಿದ ಪೊಲೀಸರು ಟೋಲ್‌ಗೇಟ್‌ನ ಸಿಸಿ ಕೆಮರಾಗಳನ್ನು ಪರಿಶೀಲಿಸಿದ್ದರು. ಆಗ ಕಾರು ಮಂಗಳೂರು ಕಡೆಗೆ ಸಂಚರಿಸಿರುವುದು ಖಚಿತವಾಗಿತ್ತು.