ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಐಎಂಎ) ಸಮಗ್ರ ಸರಕು ಟರ್ಮಿನಲ್ (ಐಸಿಟಿ) ಕಾರ್ಯಾರಂಭ ಮಾಡಿದ (ಮೇ 1ರಿಂದ) ನಂತರ ಸೆ. 30ರ ವರೆಗೆ 1,676.21 ಟನ್ ಸರಕುಗಳನ್ನು ದೇಶೀಯವಾಗಿ ನಿರ್ವಹಿಸಿದೆ.
ಒಟ್ಟು ಸರಕು ನಿರ್ವಹಣೆಯಲ್ಲಿ ಇಲ್ಲಿಂದ ಬೇರೆಡೆಗೆ ರವಾನೆ ಮಾಡಿರುವ ಸರಕುಗಳ ಪ್ರಮಾಣ 1,560.23 ಟನ್. ಅಂಚೆ ಸೇವೆ ಮೂಲಕ ರವಾನೆ ಯಾಗುವ ಸರಕುಗಳ ಪ್ರಮಾಣ ಅಧಿಕ. ಉಳಿದಂತೆ ಸಾಮಾನ್ಯ ಸರಕುಗಳ ಜತೆಗೆ ಬೆಲೆಬಾಳುವ ವಸ್ತುಗಳು, ಸಾಗರೋತ್ಪನ್ನಗಳು, ಆಲಂಕಾರಿಕ ಮೀನು ಗಳನ್ನು “ಐಸಿಟಿ’ ಮೂಲಕ ರವಾನಿಸಲಾಗುತ್ತಿದೆ.
ಯಂತ್ರೋ ಪಕರಣದ ಬಿಡಿ ಭಾಗಗಳು, ವೈದ್ಯಕೀಯ ಸರಕುಗಳು ಬೇರೆ ಪ್ರದೇಶದಿಂದ ಇಲ್ಲಿಗೆ ರವಾನೆಯಾಗುತ್ತಿವೆ. ಹಣ್ಣು, ತರಕಾರಿಗಳಂತಹ ಋತು ಮಾನ ಆಧರಿತ ಪಾರ್ಸೆಲ್‌ಗಳನ್ನು ಇಲ್ಲಿ ನಿರ್ವಹಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಸರಕು ಕಾರ್ಯಾಚರಣೆ ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಐಸಿಟಿ ಆದ ಬಳಿಕ ಕರಾವಳಿಯ ಸಾಗರೋತ್ಪನ್ನ ರಫ್ತುದಾರರಿಗೆ ಅನುಕೂಲವಾಗಿದೆ. ಅದರಲ್ಲಿಯೂ “ಏಡಿ’ಗಳನ್ನು ಕೋಲ್ಕತ್ತಕ್ಕೆ ಸಾಗಿಸಿ ಅಲ್ಲಿಂದ ಚೀನಾಕ್ಕೆ ರಫ್ತು ಮಾಡುವ ಹೊಸ ಅವಕಾಶ ಸಾಧ್ಯವಾಗಿದೆ. ಜೀವಂತ ಏಡಿಗಳಿಗೆ ಚೀನದಲ್ಲಿ ಬಹು ಬೇಡಿಕೆಯೂ ಇದೆ ಎನ್ನುತ್ತಾರೆ ರಫ್ತುದಾರ ಪ್ರಮುಖರು.