ಮಹಾನಗರ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಯಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಮೀಸಲಾದ 50 ಮಂದಿ ಮಹಿಳಾ ಪೊಲೀಸರನ್ನೊಳಗೊಂಡ ‘ರಾಣಿ ಅಬ್ಬಕ್ಕ ಪಡೆ’ ಮಂಗಳವಾರದಿಂದ ನಗರದಲ್ಲಿ ಕಾರ್ಯಾರಂಭಿಸಿದೆ.
ಸಿಟಿಸೆಂಟರ್ ಮಾಲ್ನ ಆವರಣದಲ್ಲಿ ಮಂಗಳವಾರ ಬೆಳಗ್ಗೆ ನೂತನ ‘ಅಬ್ಬಕ್ಕ ಪಡೆ’ಯ ಉದ್ಘಾಟನೆ ನೆರವೇರಿತು. ಪೊಲೀಸ್ ಆಯುಕ್ತ ಡಾ| ಸಂದೀಪ್ ಪಾಟೀಲ್ ಅವರು ಚಾಲನೆ ನೀಡಿದರು.
ಡಿಜಿ, ಐಜಿಪಿ ಅವರ ಸೂಚನೆ ಮೇರೆಗೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿಶೇಷ ಮಹಿಳಾ ಪಡೆ ರಚಿಸಲಾಗಿದೆ. ನಗರದ ಮಹಿಳಾ ಪಡೆಗೆ 16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ದಿಟ್ಟ ಹೋರಾಟ ಮಾಡಿದ ‘ರಾಣಿ ಅಬ್ಬಕ’್ಕ ಹೆಸರನ್ನಿಡಲಾಗಿದೆ. ಈ ಪಡೆಯನ್ನು ಒಬ್ಬರು ಎಸ್‌ಐ ದರ್ಜೆ ಮಹಿಳಾ ಅಧಿಕಾರಿ ನಿರ್ವಹಣೆ ಮಾಡಲಿದ್ದಾರೆ. ನಗರದಲ್ಲಿರುವ ಜನನಿ ಬಿಡ ಪ್ರದೇಶಗಳಾದ ಮಾಲ್ಗಳು, ಕಾಲೇಜು, ಪಾರ್ಕ್, ಬೀಚ್, ರೈಲುನಿಲ್ದಾಣ, ಸೆಂಟ್ರಲ್ಮಾರ್ಕೆಟ್ ಸಹಿತ ಕೆಲವು ಪ್ರದೇಶಗಳಿಗೆ ಈ ಸಿಬಂದಿಯನ್ನು ನಿಯೋಜಿಸಲಾಗುವುದು ಎಂದರು.
ಮಂಗಳೂರು ಕಮಿಷನರೇಟ್ ವ್ಯಾಪ್ತಿ ಯಲ್ಲಿ ಇಂತಹ 50 ಪ್ರದೇಶಗಳನ್ನು ಗುರುತಿಸಲಾಗಿದ್ದು, ಒಂದೊಂದು ಪಾಯಿಂಟ್‌ಗಳಲ್ಲಿ 3ರಿಂದ 5 ಮಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕಿರುಕುಳ, ಚುಡಾಯಿ ಸುವಿಕೆ, ಪಿಕ್ ಪಾಕೆಟ್, ಸರಗಳ್ಳತನ ಮತ್ತಿತರ ಅಪರಾಧ ಕೃತ್ಯಗಳನ್ನು ಮಟ್ಟ ಹಾಕುವ ಕಾರ್ಯದಲ್ಲಿ ಈ ಪಡೆ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಜತೆ ಅಸಭ್ಯ ವರ್ತನೆ, ಚುಡಾವಣೆ, ಮಹಿಳಾ ದೌರ್ಜನ್ಯ, ನೈತಿಕ ಪೊಲೀಸ್‌ಗಿರಿ ಸಹಿತ ಹಲವು ಪ್ರಕರಣಗಳನ್ನು ಹತ್ತಿಕ್ಕಲು ಈ ಪಡೆ ಕಾರ್ಯನಿರ್ವಹಿಸಲಿದೆ. ಯಾವುದೇ ಅಪರಾಧ ಘಟನೆಗಳು ನಡೆದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಆ ಪ್ರಕರಣ ದಾಖಲಾಗಲಿದೆ ಎಂದರು.
ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪಪೊಲೀಸ್ ಆಯುಕ್ತ ಹನುಮಂತರಾಯ, ನಗರ ಸಂಚಾರ ಮತ್ತು ಅಪರಾಧ ವಿಭಾಗ ಉಪಪೊಲೀಸ್ ಆಯುಕ್ತ ಲಕ್ಷ್ಮೀಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
5 ಮಹಿಳಾ ಪೊಲೀಸರ 10 ತಂಡ
50 ಮಂದಿ ಮಹಿಳಾ ಪೊಲೀಸರ ನ್ನೊಳಗೊಂಡ ‘ರಾಣಿ ಅಬ್ಬಕ್ಕ ಪಡೆ’ಗೆ ಇನ್ಸ್ ಪೆಕ್ಟರ್ ಶ್ರೀಕಲಾ ಅವರು ಮುಖ್ಯಸ್ಥರು. ತಲಾ 5 ಮಂದಿ ಯ (ಓರ್ವ ಹೆಡ್‌ಕಾನ್‌ಸ್ಟೇಬಲ್ ಮತ್ತು ನಾಲ್ವರು ಕಾನ್‌ಸ್ಟೇಬಲ್) 10 ತಂಡ ಗಳ ನ್ನಾಗಿ ವಿಂಗಡಿಸಲಾಗಿದೆ. ಪ್ರತೀ ತಂಡವು ಆಯ್ದ ಮಾಲ್ಗಳು,ಬಸ್ ನಿಲ್ದಾಣಗಳು, ಬೀಚ್, ಕಾಲೇಜುಗಳಿಗೆ ಹಾಗೂ ಹೆಚ್ಚು ಜನ ಸಂದಣಿಇರುವ ಪ್ರದೇಶದಲ್ಲಿ ಗಸ್ತು ಕಾರ್ಯಾಚರಣೆ ನಡೆಸಲಿದ್ದಾರೆ. ಈ ಪಡೆಗೆ ಕಪ್ಪು ಟೀ ಶರ್ಟ್ ಮತ್ತು ಡೋಂಗ್ರಿ ಬಣ್ಣದ ಪ್ಯಾಂಟ್ ಇರುವ ಸಮವಸ್ತ್ರ ಒದಗಿಸಲಾಗಿದೆ.