Advertisement

Mangaluru: ಟ್ರೇಡಿಂಗ್‌ನಲ್ಲಿ ಲಾಭ ಗಳಿಸುವ ಆಸೆಯಿಂದ 1.12 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!

10:26 AM Oct 17, 2024 | Team Udayavani |

ಮಂಗಳೂರು: ಕಳೆದ ಕೆಲ ವರ್ಷಗಳಿಂದ ಆನ್ ಲೈನ್ ಮೂಲಕ ಹಲವು ವಿಧದಲ್ಲಿ ವಂಚನೆಗೊಳಗಾದವರಿದ್ದಾರೆ. ಇಲ್ಲೊಬ್ಬರು ಟ್ರೇಡಿಂಗ್‌ನಲ್ಲಿ ಭಾರಿ ಲಾಭ ಗಳಿಸುವ ಆಸೆಯಿಂದ ಅಪರಿಚಿತ ವ್ಯಕ್ತಿಯ ಖಾತೆಗೆ ಒಟ್ಟು 1,12,48,240 ರೂ. ವರ್ಗಾಯಿಸಿ ಮೋಸ ಹೋಗಿದ್ದಾರೆ.

Advertisement

ಹ್ಯಾಪನ್‌ ಎನ್ನುವ ಡೇಟಿಂಗ್‌ ಆಪ್‌ನಲ್ಲಿ ಮೊದಲು ದೂರುದಾರರಿಗೆ ಲೀನಾ ಜೋಸ್‌ ಎಂಬವರ ಜೊತೆ ಸಂಪರ್ಕವಾಗಿದ್ದು, ಬಳಿಕ ಟೆಲಿಗ್ರಾಂ ಮೂಲಕ ಚಾಟ್‌ ಮಾಡತೊಡಗಿದರು. ಆಗ ಲೀನಾ ಆಡ್ಮಿರಲ್‌ ಮಾರ್ಕೆಟ್‌ ಫೋರೆಕ್ಸ್‌ ಟ್ರೇಡಿಂಗ್‌ ನಲ್ಲಿ ಹಣ ಹೂಡಿಕೆ ಮಾಡಲು ತಿಳಿಸಿದ್ದು, ಅದರಂತೆ ದೂರುದಾರರು ಅಡ್ಮಿರಲ್‌ ಮಾರ್ಕೆಟ್‌ ಫೋರೆಕ್ಸ್‌ ಟ್ರೇಡಿಂಗ್‌ ನಕಲಿ ವೇವ್‌ಜಿಪಿಟೆಕ್ಸಾ ಎಂಬ ಆಪ್‌ ಡೌನ್‌ಲೋಡ್‌ ಮಾಡಿ ಲಾಗಿನ್‌ ಆದರು. ಬಳಿಕ 50 ಸಾವಿರ ರೂ. ಮೊತ್ತವನ್ನು ನೆಫ್ಟ್‌ ಮೂಲಕ ವರ್ಗಾಯಿಸಿದರು.

ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಆಮಿಷಕ್ಕೊಳಗಾದ ದೂರುದಾರರು ಜುಲೈ 3ರಿಂದ 23ರ ವರೆಗೆ 10 ಲಕ್ಷ ರೂ. ಮೊತ್ತವನ್ನು ಆರೋಪಿಗಳು ಕೊಟ್ಟ ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿದರು. ನಂತರ ವೇವ್‌ಜಿಪಿಟೆಕ್ಸಾ ಆಪ್‌ ಖಾತೆಯಲ್ಲಿ 80 ಲಕ್ಷ ರೂ. ತೋರಿಸಿದೆ. ಅದನ್ನು ಹಿಂಪಡೆಯಲು ಹೋದಾಗ ಆರೋಪಿಗಳು ಶೇ 30 ತೆರಿಗೆ ಮೊತ್ತ ಪಾವತಿಸಲು ಸೂಚಿಸಿದ್ದಾರೆ. ಅದರಂತೆ 19,26,560 ರೂ. ಮೊತ್ತವನ್ನು ಆರೋಪಿತರ ವಿವಿಧ ಖಾತೆಗೆ ವರ್ಗಾಯಿಸಿದ್ದಾರೆ.

ನಂತರ ಡಾಲರ್‌ನಲ್ಲಿರುವ ಮೊತ್ತವನ್ನು ಭಾರತೀಯ ರೂಪಾಯಿಗೆ ವರ್ಗಾಯಿಸಲು ಬ್ಯಾಂಕ್‌ ವಹಿವಾಟು ಶುಲ್ಕ ಶೇ.10 ಪಾವತಿಸಲು ವಂಚಕರು ಸೂಚಿಸಿದ್ದು, ಅದರಂತೆ ದೂರುದಾರರು 7,36,880 ರೂ. ವರ್ಗಾಯಿಸಿದ್ದಾರೆ. ಇಷ್ಟಾದ ಬಳಿಕವಾದರೂ 50 ಲಕ್ಷ ರೂ. ಮೊತ್ತ ವರ್ಗಾವಣೆ ಮಾಡಲು ಹೋದಾಗ ಆರೋಪಿಗಳು ಮತ್ತೆ ಮರುಳು ಮಾಡಿದ್ದು ನಮ್ಮ ರಿಸ್ಕ್ ಕಂಟ್ರೋಲ್‌ ವಿಭಾಗದವರು ಇಷ್ಟು ದೊಡ್ಡ ಮೊತ್ತವನ್ನು ಹಿಂಪಡೆಯುವುದನ್ನೇ ಹೋಲ್ಡ್‌ ಮಾಡಿದ್ದಾರೆ. ಹಿಂಪಡೆಯಬೇಕಾದರೆ ಶೇ.50ರಷ್ಟನ್ನು ಠೇವಣಿ ಇರಿಸಬೇಕು ಎಂದಿದ್ದಾರೆ. ಅದರಂತೆ ಮತ್ತೆ ದೂರುದಾರರು 26,84,800 ರೂ. ವರ್ಗಾಯಿ ಸಿದ್ದಾರೆ.
ಇಷ್ಟಾದ ನಂತರವೂ ಆರೋಪಿಗಳು ದೂರುದಾರರಲ್ಲಿ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆ ಇದೆ, ಅದು ಏರಿಕೆಯಾಗಬೇಕಾದರೆ ಹಣ ಹಾಕಲು ತಿಳಿಸಿದ್ದಾರೆ. ಈ ರೀತಿ ದೂರುದಾರರು ಒಟ್ಟಾರೆ 1 ಕೋಟಿ ರೂ. ಗೂ ಅಧಿಕ ಮೊತ್ತವನ್ನು ಆನ್ ಲೈನ್ ಮೂಲಕ ಪಾವತಿಸಿದ್ದಾರೆ. ಇಷ್ಟೆಲ್ಲ ಆದ ಬಳಿಕ ವ್ಯಕ್ತಿಗೆ ತಾನು ಮೋಸ ಹೋದ ಅರಿವಾಗಿದೆ. ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಗೆ ವ್ಯಕ್ತಿ ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next