ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯವು ನಡೆಸುವ ಅಂತಿಮ ವರ್ಷದ ವಾಣಿಜ್ಯ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆಯುವ ವಿದ್ಯಾರ್ಥಿಗೆ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರಟರೀಸ್ ಆಫ್ ಇಂಡಿಯಾ (ಐಸಿಎಸ್‌ಐ) ವತಿಯಿಂದ ಚಿನ್ನದ ಪದಕ ಮತ್ತು ಅನಂತರದ ಮೂರು ಸ್ಥಾನಗಳನ್ನು ಪಡೆದವರಿಗೆ ಎರಡೂವರೆ ವರ್ಷಗಳ ಕಂಪೆನಿ ಸೆಕ್ರಟರೀಸ್ ಕೋರ್ಸ್‌ಗೆ
ಉಚಿತ ಪ್ರವೇಶ ನೀಡುವ ಒಡಂಬಡಿಕೆಗೆ ವಿ.ವಿ.ಯ ಸೆನೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಿ ಹಾಕಲಾಯಿತು.
ಸೋಮವಾರ ವಿ.ವಿ. ಉಪಕುಲಪತಿ ಪ್ರೊ| ಪಿ.ಎಸ್. ಎಡಪಡಿತ್ತಾಯ ಮತ್ತು ಐಸಿಎಸ್‌ಐ ಮಂಗಳೂರು ಘಟಕದ ಅಧ್ಯಕ್ಷ ಚೇತನ್ ನಾಯಕ್ ಚಿನ್ನದ ಪದಕದ ವಿವರಗಳನ್ನು ಪ್ರಕಟಿಸಿ ಒಡಂಬಡಿಕೆಗೆ ಸಹಿ ಮಾಡಿದರು.
ಚೇತನ್ ನಾಯಕ್ ಮಾಹಿತಿ ನೀಡಿ, ಪ್ರತೀ ವರ್ಷ ವಿ.ವಿ.ಯ ಅಂತಿಮ ಬಿ.ಕಾಂ. ಪ್ರಥಮ ರ್‍ಯಾಂಕ್ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ. ಮೌಲ್ಯದ ಚಿನ್ನದ ಪದಕ ನೀಡಲಾಗುವುದು. ವಿ.ವಿ. ಮಾನದಂಡಗಳನುಸಾರ ಪದಕ ಸಿದ್ಧಪಡಿಸಿ ಒದಗಿಸಲಾಗುವುದು. ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೆಟರೀಸ್ ಕೋರ್ಸ್ ಕುರಿತು ಅರಿವು ಮೂಡುವ ಸಲುವಾಗಿ ಚಿನ್ನದ ಪದಕ ಮತ್ತು ಕೋರ್ಸ್‌ಗೆ ಉಚಿತ ಪ್ರವೇಶದ ಅವಕಾಶವನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ಪದಕವನ್ನು “ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಸಿಗ್ನೇಚರ್ ಅವಾರ್ಡ್’ ಎಂದು ಕರೆಯಲಾಗುತ್ತದೆ. ಇದೇ ಘಟಿಕೋತ್ಸವದಿಂದ ಅವಾರ್ಡ್ ಜಾರಿಗೆ ಬರುತ್ತದೆ ಎಂದರು.
ಉಪಕುಲಪತಿ ಪ್ರೊ| ಎಡಪಡಿ ತ್ತಾಯ ಮಾತನಾಡಿ, ವಿ.ವಿ.ಯಲ್ಲಿ ಒಟ್ಟು 45 ಚಿನ್ನದ ಪದಕಗಳಿದ್ದು, ಈಗ 46ಕ್ಕೆ ಏರಿಕೆಯಾಗಿದೆ. 75 ನಗದು ಬಹುಮಾನಗಳಿವೆ ಎಂದರು.
ಐಸಿಎಸ್‌ಐ ಮಂಗಳೂರು ಘಟಕದ ಉಪಾಧ್ಯಕ್ಷ ಪ್ರಸನ್ನ ಪಾಟೀಲ್, ಮಂಗಳೂರು ವಿ.ವಿ. ಕುಲಸಚಿವ ಪ್ರೊ| ಎ.ಎಂ. ಖಾನ್ ಮತ್ತು ಪರೀಕ್ಷಾಂಗ ಕುಲಸಚಿವ ಪ್ರೊ| ರವೀಂದ್ರಾಚಾರಿ ಉಪಸ್ಥಿತರಿದ್ದರು.