ಮಂಗಳೂರು: ತಾಪಮಾನ ಏರಿಕೆಯ ಆತಂಕದ ಜತೆಯಲ್ಲೇ ಜಿಲ್ಲೆಯಾದ್ಯಂತ ಈಗಾಗಲೇ ಕುಡಿಯುವ ನೀರಿನ ಕೊರತೆ ಜನಸಾಮಾನ್ಯರನ್ನು ಕಂಗೆಡಿಸಿದೆ. ಚುನಾವಣೆಯ ಹೊಸ್ತಿಲ್ಲಲ್ಲಿ ಮತ ಬೇಟೆ ಆರಂಭಿಸಿರುವ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರನ್ನೂ ಈ ವಿಚಾರ
ಇಕ್ಕಟ್ಟಿಗೆ ಸಿಲುಕಿಸಿದೆ.
ಜಿಲ್ಲೆಯಾದ್ಯಂತ ಜಲಮೂಲಗಳಲ್ಲಿ ನೀರಿನ ಕೊರತೆಯಿಂದಾಗಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದಲ್ಲಿ ಮತ ಯಾಚನೆಗಾಗಿ ಮನೆಗಳಿಗೆ ತೆರಳುವ ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರನ್ನು ಮತದಾರರು ಬೆವರಿಳಿಸುವ ಸಾಧ್ಯತೆಯ ಬಗ್ಗೆ ಕಾರ್ಯಕರ್ತರ ನಡುವೆಯೇ ಚರ್ಚೆಗಳು ಆರಂಭವಾಗಿವೆ.
ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಿಗೆ ನೀರುಣಿಸುವ ತುಂಬೆ ವೆಂಟೆಂಡ್ ಡ್ಯಾಂ ಹಾಗೂ ಎಎಂಆರ್ ಡ್ಯಾಂನಲ್ಲಿ ನೀರಿನ ಒಳಹರಿವು ಸ್ಥಗಿತಗೊಂಡಿದೆ ಮಾತ್ರವಲ್ಲದೆ, ಸಂಗ್ರಹವಾಗಿದ್ದ ನೀರಿನ ಮಟ್ಟ ಕ್ಷೀಣಿಸುತ್ತಿರುವುದು ಪಾಲಿಕೆ ವ್ಯಾಪ್ತಿಯಲ್ಲಿ ಶೀಘ್ರದಲ್ಲೇ ನೀರು ಪೂರೈಕೆಯಲ್ಲಿ ರೇಶನಿಂಗ್ ವ್ಯವಸ್ಥೆ ಜಾರಿಯಾಗುವ ಸೂಚನೆಯನ್ನು ನೀಡಿದೆ.
ನೀರಿನ ಸಮಸ್ಯೆ ಉತ್ತುಂಗ ತಲಪುವ ವೇಳೆಯಲ್ಲೇ ಚುನಾವಣ ಪ್ರಚಾರ, ಮುಖ್ಯವಾಗಿ ಮನೆ ಮನೆಗೆ ತೆರಳಿ ಮತ ಯಾಚಿಸುವ ಸನ್ನಿವೇಶವೂ ಬರುತ್ತದೆ, ಇದನ್ನು ಎದುರಿಸುವುದು ಹೇಗೆ ಎಂಬ ತಲೆಬಿಸಿಯಲ್ಲಿ ಕಾರ್ಯಕರ್ತರಿದ್ದಾರೆ.
ಮೂರು ವರ್ಷಗಳಲ್ಲಿ ಮಾರ್ಚ್‌ನಿಂದ ಜೂನ್ ನಡುವೆ ಮುಂಗಾರು ಪೂರ್ವ ಮಳೆಯ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಾಡಿರಲಿಲ್ಲ. ನೀರಿನ ಮಟ್ಟದಲ್ಲಿಯೂ ಮಾರ್ಚ್ ತಿಂಗಳ ಅಂತ್ಯದವರೆಗೆ ಕುಸಿತ ಕಂಡು ಬಂದಿರಲಿಲ್ಲ. ಆದರೆ ಈ ಬಾರಿ ಫೆಬ್ರವರಿ ತಿಂಗಳಲ್ಲೇ ಉರಿ ಬಿಸಿಲಿನ ವಾತಾವರಣ, ತಾಪಮಾನ ಏರಿಕೆಯು ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹದ ಮಟ್ಟವನ್ನು ಕ್ಷೀಣಿಸುವಂತೆ ಮಾಡುತ್ತಿದೆ. ಚುನಾವಣೆ ಘೋಷಣೆ ಆದ ಬಳಿಕ ಮತದಾರರ ಮನವೊಲಿಸುವ ನಿಟ್ಟಿನಲ್ಲಿ ಪಕ್ಷಗಳ ನಾಯಕರು, ಕಾರ್ಯಕರ್ತರು ಮನೆ ಮನೆ ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಾಮಾನ್ಯ. ಆದರೆ ಅಷ್ಟರೊಳಗೆ ಮುಂಗಾರು ಪೂರ್ವ ಮಳೆಯಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಿದ್ದರೆ ಸರಿ. ಇಲ್ಲವಾದಲ್ಲಿ, ಈ ಬಾರಿ ಮತದಾರರಿಂದ ಟೀಕೆ ಎದುರಿಸಲು ಸಿದ್ಧರಾಗಬೇಕಾಗುತ್ತದೆ.
ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್. ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಈಗಾಗಲೇ ನೀರಿನ ಕೊರತೆ ಬಗ್ಗೆ ಚರ್ಚೆ ನಡೆಸಲಾಗಿದೆ. ಬಾಳೆಪುಣಿ, ನರಿಕೊಂಬು, ಕೊಣಾಜೆ, ತಲಪಾಡಿ ಹಾಗೂ ಮಂಜನಾಡಿಯಲ್ಲಿ ಅಂತರ್ಜಲ ಮಟ್ಟ ಕಡಿಮೆ ಇರುವ ಬಗ್ಗೆ ಚರ್ಚೆ ಆಗಿದೆ. ಮೂಲ್ಕಿ, ಮೂಡುಬಿದಿರೆ, ಸೋಮೇಶ್ವರ ಮೊದಲಾದ ಕಡೆಗಳಲ್ಲಿ ಈಗಾಗಲೇ ನೀರಿನ ಕೊರತೆ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ತುಂಬೆಯಲ್ಲಿಯೂ ನೀರಿನ ಮಟ್ಟ ಮತ್ತಷ್ಟು ಕುಸಿದಲ್ಲಿ ರೇಶನಿಂಗ್ ಮಾಡುವಂತೆ, ದಿನಬಿಟ್ಟು ದಿನ ನೀರು ಪೂರೈಕೆಗೆ ಪಾಲಿಕೆ ಆಡಳಿತಕ್ಕೆ ಸೂಚನೆ ನೀಡಲಾಗಿದೆ.
ಬಿಸಿಲ ಬೇಗೆಯೂ ಬೆವರಿಳಿಸಲಿದೆ !
ಬಿಸಿಲ ಧಗೆಯಿಂದಾಗಿ ಬೆಳಗ್ಗೆ 11ರಿಂದ ಅಪರಾಹ್ನ 3 ಗಂಟೆಯವರೆಗೆ ಸೂರ್ಯನಿಗೆ ಮೈಯೊಡ್ಡಿ ತಿರುಗಾಡುವುದು ಕಷ್ಟ ಸಾಧ್ಯವಾಗಿರುವುದರಿಂದ, ಚುನಾವಣ ಕಾರ್ಯದ ನಿಮಿತ್ತ ಮನೆಗಳಿಗೆ ಭೇಟಿ ನೀಡುತ್ತಿರುವ ಪಕ್ಷಗಳ ನಾಯಕರು, ಕಾರ್ಯಕರ್ತರು ಬಿಸಿಲ ಬೇಗೆಗೆ ಬೆವರಿಳಿಸುವಂತಾಗಿದೆ. ಚುನಾವಣೆಯ ಘೋಷಣೆಯ ಬಳಿಕ ಮನೆ ಭೇಟಿ ಕಾರ್ಯ ಇನ್ನಷ್ಟು ಚುರುಕು ಗೊಳ್ಳುವ ಕಾರಣ ಮತಯಾಚಕರು ಹೈರಾಣಾಗುವುದು ಖಂಡಿತ.
*ಸತ್ಯಾ ಕೆ.