ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತೀ ವರ್ಷ ಸರಕಾರ ವಿದ್ಯಾರ್ಥಿ ವೇತನ ನೀಡುತ್ತದೆ. ಆದರೆ ಪರೀಕ್ಷೆ ಮುಗಿದು ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ಹಲವರಿಗೆ ವಿದ್ಯಾರ್ಥಿವೇತನ ಮಾತ್ರ ಇನ್ನೂ ಬಂದಿಲ್ಲ.
ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗ, ವಿದ್ಯಾ ಸಿರಿ, ರೈತ ವಿದ್ಯಾನಿಧಿ ಸಹಿತ ವಿವಿಧ ಇಲಾಖೆಗಳ ವಿದ್ಯಾರ್ಥಿವೇತನ ಕಾಲೇಜು ವಿದ್ಯಾರ್ಥಿಗಳಿಗೆ ಸಿಗುತ್ತದೆ. ಆದರೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರ ಪೈಕಿ ಹಲವರಿಗೆ ವಿದ್ಯಾರ್ಥಿವೇತನ ದೊರಕಿದ್ದರೆ, ಕೆಲವರು ಇನ್ನೂ ಕಾಯುತ್ತಲೇ ಇದ್ದಾರೆ.
ಹಿಂದೆ ವಿದ್ಯಾರ್ಥಿವೇತನ ಕಾಲೇಜಿಗೆ ಬಂದು ಅಲ್ಲಿಂದ ವಿದ್ಯಾರ್ಥಿಗಳಿಗೆ ಚೆಕ್ ಮೂಲಕ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರಕಾರ 2020ರಲ್ಲಿ “ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್’ (ಎಸ್‌ಎಸ್‌ಪಿ) ರೂಪಿಸಿದ ಅನಂತರ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿ ವೇತನ ಆನ್‌ಲೈನ್ ಮೂಲಕ ನೇರವಾಗಿ ಖಾತೆಗೆ ಜಮೆಯಾಗುತ್ತದೆ. ಹೀಗಾಗಿ ಕೆಲವರಿಗೆ ತಾಂತ್ರಿಕ ಸಮಸ್ಯೆಯಿಂದ ಲಭಿಸಿಲ್ಲ. ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿದ ಕಾರಣ ಕಾಲೇಜುಗಳಲ್ಲಿ ಇದಕ್ಕೆ ಉತ್ತರವಿಲ್ಲ. ಇಲಾಖೆಗಳನ್ನು ಸಂಪರ್ಕಿಸಿದರೆ ಆನ್‌ಲೈನ್ ಮೂಲಕ ಖಾತೆಗೆ ಹಣ ಬರಲಿದೆ ಎನ್ನುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಕಾಯುತ್ತಲೇ ಇದ್ದಾರೆ.
ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಈ ವಿದ್ಯಾರ್ಥಿ ವೇತನಗಳು ಶೈಕ್ಷಣಿಕ ವೆಚ್ಚಕ್ಕೆ ಪೂರಕವಾಗಿರುತ್ತದೆ. ಈ ಬಾರಿ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ಅನಂತರ ಕೆಲವರಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಆಗಿದೆ. ಆದರೆ ಬಹುತೇಕರಿಗೆ ದೊರೆತಿಲ್ಲ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ.
ಸರಕಾರದಿಂದ ವಿವಿಧ ಇಲಾಖೆಗಳಿಗೆ ಪೂರ್ಣಪ್ರಮಾಣದಲ್ಲಿ ಹಣ ಬಿಡುಗಡೆ ಆಗಿಲ್ಲ, ಬಿಡುಗಡೆ ಆದ ಬಳಿಕ ಎಲ್ಲ ವಿದ್ಯಾರ್ಥಿಗಳಿಗೂ ದೊರೆಯಲಿದೆ. ಕೆಲವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ ಸರಿಯಾಗದ ಕಾರಣ ವಿದ್ಯಾರ್ಥಿವೇತನ ಲಭಿಸಿಲ್ಲ ಎಂಬುದು ಇಲಾಖೆಗಳ ಅಧಿಕಾರಿಗಳು ನೀಡುವ ಮಾಹಿತಿ.
2021-22 ಬಿಡುಗಡೆಯಾಗದ ವಿದ್ಯಾರ್ಥಿವೇತನ!
2021-22ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನದ ಹಣ ಹಲವರಿಗೆ ಇನ್ನೂ ಬಿಡುಗಡೆಯಾಗಿಲ್ಲ. ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳಿದ್ದಾರೆ. ತತ್‌ಕ್ಷಣವೇ ವಿದ್ಯಾರ್ಥಿವೇತನ ಹಣ ಬಿಡುಗಡೆ ಯಾಗಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಆಧಾರವಾಗಿರುವುದರಿಂದ ಹಣ ಬಿಡುಗಡೆಗೆ ಸರಕಾರ ಆದ್ಯತೆ ನೀಡಬೇಕು ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರಕಿಲ್ಲ ಎಂಬ ದೂರಿನ ಬಗ್ಗೆ ಪರಿಶೀಲಿಸಲಾಗುವುದು. ಇದು ಸರಕಾರದ ವಿವಿಧ ಇಲಾಖೆಗಳಿಂದ ಆನ್‌ಲೈನ್ ಮೂಲಕ ವಿದ್ಯಾರ್ಥಿಯ ಖಾತೆಗೆ ಜಮೆಯಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿ.ವಿ.ಯಿಂದ ಇಲಾಖೆಗಳಿಗೆ ಪತ್ರ ಬರೆಯಲಾಗುವುದು.
-ಪ್ರೊ| ಪಿ.ಎಸ್. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿ.ವಿ.
– ದಿನೇಶ್ ಇರಾ