Advertisement

ಪದವಿ ಪ್ರಶ್ನೆಪತ್ರಿಕೆಗಳ ಮೇಲೆ ಕಣ್ಗಾವಲು ಬಿಗಿ!

11:04 PM Sep 29, 2022 | Team Udayavani |

ಮಂಗಳೂರು: ಪ್ರಶ್ನೆಪತ್ರಿಕೆ ಸಿದ್ಧಗೊಳಿಸುವ ಸಂದರ್ಭ ನಿಯಮಾವಳಿ ಪ್ರಕಾರ ಹಲವು ಬಗೆಯ ಕಣ್ಗಾವಲು ಇರುತ್ತದೆ. ಆದರೂ ಪ್ರಶ್ನೆಪತ್ರಿಕೆ ಲೋಪದ ಗಂಭೀರ ಆರೋಪ ಎದುರಾದ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಕಣ್ಗಾವಲನ್ನು ಮತ್ತಷ್ಟು ಬಿಗಿ ಮಾಡಲು ನಿರ್ಧರಿಸಿದೆ.

Advertisement

ವಿ.ವಿ.ಯಲ್ಲಿ ವಿವಿಧ ವಿಷಯ ಆಧಾರಿತವಾಗಿ ಬೋರ್ಡ್‌ ಆಫ್‌ ಎಕ್ಸಾಮಿನೇಷನ್‌ (ಬಿಒಇ-ಪರೀಕ್ಷಾ ಮಂಡಳಿ) ರಚಿಸಲಾಗುತ್ತದೆ. ಅಧ್ಯಕ್ಷರು ಸಹಿತ ಸದಸ್ಯರಿರುತ್ತಾರೆ. ಮಂಡಳಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಗೊಳಿಸಿದ ಅನಂತರ ಗೌಪ್ಯತೆಯಿಂದ ಅದನ್ನು ಕುಲಸಚಿವರ (ಪರೀಕ್ಷಾಂಗ) ಮುಖೇನ ಮುದ್ರಣಕ್ಕೆ ಕಳುಹಿಸಲಾಗುತ್ತದೆ. ಮುದ್ರಿತ ವಾಗಿ ಬಂದಿರುವುದನ್ನು ಇಲ್ಲಿಯವರೆಗೆ ಮರು ಪರಿಶೀಲನೆ ಮಾಡಲು ಅವಕಾಶವಿರಲಿಲ್ಲ. ಆದರೆ ಇನ್ನು ಮುಂದೆ “ಕರಡು ತಿದ್ದುವಿಕೆ’ಗಾಗಿ ಕುಲಸಚಿವರ ಮೂಲಕ ಮಂಡಳಿಗೆ ವಾಪಸ್‌ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ.

ಸೆ. 5ರಂದು ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪರೀಕ್ಷೆಗೆ ಹಳೆಯ ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷೆಯನ್ನೇ ಮುಂದೂಡಿದ ಘಟನೆಯಿಂದ ಎಚ್ಚೆತ್ತುಕೊಂಡು “ಕರಡು ತಿದ್ದುವಿಕೆ’ ಜಾರಿಗೆ ಉದ್ದೇಶಿ ಸಲಾಗಿದ್ದು, ಸಿಂಡಿಕೇಟ್‌ ಸಭೆ ಕೂಡ ಸಹಮತ ವ್ಯಕ್ತಪಡಿಸಿದೆ. ಶೀಘ್ರದಲ್ಲಿ ತೀರ್ಮಾನ ಅಂತಿಮವಾಗಲಿದೆ.

ಪ್ರಶ್ನೆಪತ್ರಿಕೆಗೆ ಕೆಲವು ಸೂತ್ರ! :

ಪ್ರಶ್ನೆಪತ್ರಿಕೆ ಸಿದ್ಧವಾದ ಬಳಿಕ ಆಯಾ ಮಂಡಳಿಯವರು ಅದನ್ನು ಪರಿಶೀಲಿಸಬೇಕಿದೆ. ಇದರ ಟೈಟಲ್‌, ಕೋಡ್‌ ಸರಿ ಇದೆಯೇ? ಪ್ರಶ್ನೆಗಳು ಎಷ್ಟು? ಪ್ರಶ್ನೆಗಳು ಪಠ್ಯದ ಒಳಗೆ ಇರುವಂಥದ್ದನ್ನೇ ನೀಡಲಾಗಿದೆಯೇ? ಇತ್ಯಾದಿ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ಪ್ರಶ್ನೆಪತ್ರಿಕೆಯನ್ನು ಲಕೋಟೆಗೆ ಹಾಕಲಾಗುತ್ತದೆ. ಲಕೋಟೆಯ ಹೊರಗಡೆ/ಒಳಗಡೆ ಇರುವ ಟೈಟಲ್‌ ಬಗ್ಗೆ ವಿಸ್ತೃತ ಪರಿಶೀಲನೆ ಆಗಲೇಬೇಕಿದೆ.

Advertisement

ಲೋಪ ಆಗುವುದು ಹೇಗೆ? :

ಪರೀಕ್ಷಾ ಮಂಡಳಿ-ಪ್ರಾಧ್ಯಾಪಕರು ಒತ್ತಡದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಕಾರಣ ಹಾಗೂ ಪರೀಕ್ಷೆಗೆ ಬೆರಳೆಣಿಕೆ ದಿನ ಇರುವಾಗ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಪರಿಪಾಠದಿಂದಾಗಿ ಹೆಚ್ಚು ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ. ಒಬ್ಬರು ಎರಡಕ್ಕಿಂತ ಅಧಿಕ ಪ್ರಶ್ನೆಪತ್ರಿಕೆ ಸಿದ್ಧಗೊಳಿಸುವ ಕಾರಣ ಗುಣಮಟ್ಟದಲ್ಲಿಯೂ ಸಮಸ್ಯೆ ಆಗುತ್ತಿದೆ ಎಂಬುದು ಕೆಲವರ ಅನಿಸಿಕೆ. ಹೀಗಾಗಿ ಇಂತಹ ವಿಚಾರಗಳಲ್ಲಿ ಸಡಿಲಿಕೆ ಮಾಡಲು ವಿ.ವಿ. ನಿರ್ಧರಿಸಿದೆ.

ಸೆಮಿಸ್ಟರ್‌ ಪರೀಕ್ಷೆ ಮುಗಿದ  ತತ್‌ಕ್ಷಣವೇ ಮತ್ತೂಂದು ಪ್ರಶ್ನೆಪತ್ರಿಕೆ :

ಬಹುಮುಖ್ಯವಾಗಿ ಬರುವ ತಿಂಗಳು ಪರೀಕ್ಷೆಯಾದರೆ ಈ ತಿಂಗಳು ಪರೀಕ್ಷಾ ಮಂಡಳಿಯವರು ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಬಗ್ಗೆ ನಿರ್ಧಾರ ಕೈಗೊಂಡು ಪ್ರಕ್ರಿಯೆ ಆರಂಭಿಸುತ್ತಾರೆ. ಅದು ಮುದ್ರಣವಾಗಿ ಬರುವಾಗ ಸ್ವಲ್ಪ ಸಮಯ ಆಗಿರುತ್ತದೆ. ಕೊನೆಯ ಹಂತದಲ್ಲಿ ಎಲ್ಲವೂ ಗಡಿಬಿಡಿ ಆಗಿರುತ್ತದೆ. ಆದರೆ ಇನ್ನು ಮುಂದೆ ಹಾಗಾಗದು; ಬದಲಾಗಿ ಪ್ರಸಕ್ತ ನಡೆಯುವ ಪರೀಕ್ಷೆ ಮುಗಿದ ಒಂದು ವಾರದೊಳಗೆ ಮುಂದಿನ ಸೆಮಿಸ್ಟರ್‌ನ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತದೆ. ಈ ಮೂಲಕ ಒತ್ತಡವಿಲ್ಲದೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಸಾಧ್ಯವಾಗಲಿದೆ. ಮುಂಬರುವ ಎಲ್ಲ ಪರೀಕ್ಷೆಗೂ ಇದು ಅನ್ವಯ.

ಮೌಲ್ಯಮಾಪಕರಿಗೆ ಚೆಕ್‌ ಪೇಮೆಂಟ್‌! :

ಮೌಲ್ಯಮಾಪನ ಮಾಡಿದವರಿಗೆ ಕಳೆದ ಬಾರಿ “ಗೂಗಲ್‌’ ಪೇಮೆಂಟ್‌ ಮಾಡಲಾಗಿತ್ತು. ಆದರೆ ಕೆಲವರಿಗೆ ಹಣ ದೊರಕದೆ ಅಸಮಾಧಾನಕ್ಕೂ ಕಾರಣವಾಗಿತ್ತು. ಹೀಗಾಗಿ ಮುಂದೆ ಮೌಲ್ಯಮಾಪಕರಿಗೆ ಸ್ಥಳದಲ್ಲಿಯೇ ಹಣ ನೀಡುವ ಉದ್ದೇಶದಿಂದ ಹಳೆಯ ಕ್ರಮದಂತೆ “ಚೆಕ್‌ ಪೇಮೆಂಟ್‌’ ಮಾಡಲು ವಿ.ವಿ. ನಿರ್ಧರಿಸಿದೆ.

ಪ್ರಶ್ನೆಪತ್ರಿಕೆ ಸಿದ್ಧಪಡಿಸುವಾಗ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚನೆ ಇದ್ದರೂ ಪೂರ್ಣವಾಗಿ ಜಾರಿಯಾಗುತ್ತಿಲ್ಲ. ಹೀಗಾಗಿ ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ಈ ಬಗ್ಗೆ ನಿರ್ದೇಶನ ನೀಡಲಾಗುವುದು. ಪ್ರೊ| ಪಿ.ಎಸ್‌. ಯಡಪಡಿತ್ತಾಯ ಕುಲಪತಿಗಳು, ಮಂಗಳೂರು ವಿ.ವಿ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next