ಮಂಗಳೂರು : ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾವನ್ನು ಸರ್ಕಾರ ವಶಕ್ಕೆ ಪಡೆದಿದೆ ಎನ್ನುವ ವದಂತಿಯ ಕುರಿತು ಸ್ಪಷ್ಟನೆ ನೀಡಿರುವ ದರ್ಗಾದ ನೂತನ ಆಡಳಿತಾಧಿಕಾರಿ ಹಾಜಿ ಇಬ್ರಾಹಿಂ ಗೂನಡ್ಕ, ದರ್ಗಾವನ್ನು ಸರ್ಕಾರ ಅಧೀನಕ್ಕೆ ಪಡೆದಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆಯಷ್ಟೇ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಸರ್ಕಾರ ಅನೇಕ ಕಡೆ ಮಸೀದಿಗಳಲ್ಲಿ ಆಡಳಿತಾಧಿಕಾರಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿದಂತೆಯೇ ಇದೀಗ ಉಳ್ಳಾಲ ದರ್ಗಾಕ್ಕೂ ನೇಮಕ ಮಾಡಿದೆ. ಆಡಳಿತಾಧಿಕಾರಿಯಾಗಿ ನಾನು ನ.25ರಿಂದಲೇ ಅಧಿಕಾರ ಸ್ವೀಕಾರ ಮಾಡಿದ್ದೇನೆ. ದರ್ಗಾದ ಹೊಸ ಆಡಳಿತ ಮಂಡಳಿ ರಚನೆ ಹೊಣೆ, ದರ್ಗಾದ ದೈನಂದಿನ ಆಡಳಿತ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ನೀಡಿದೆ. ನನ್ನ ಅಧಿಕಾರ ಇರುವುದು ಕೇವಲ 6 ತಿಂಗಳು ಮಾತ್ರ. ಸರ್ಕಾರ ಅಪೇಕ್ಷೆಪಟ್ಟರೆ ಈ ಅವಧಿಯನ್ನು ವಿಸ್ತರಿಸಲೂಬಹುದು ಎಂದು ಸ್ಪಷ್ಟನೆ ನೀಡಿದರು.
ದರ್ಗಾದ ಈ ಹಿಂದಿನ ಆಡಳಿತ ಮಂಡಳಿಯನ್ನು ಸರ್ಕಾರ ಈಗಾಗಲೇ ಬರ್ಕಾಸ್ತು ಮಾಡಿದೆ. ಇನ್ನು 6 ತಿಂಗಳೊಳಗೆ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ ನನ್ನ ಅಧಿಕಾರವನ್ನು ಬಿಟ್ಟುಕೊಡಬೇಕಿದೆ. ಈ ಚುನಾವಣೆಗೆ ಮತದಾರರ ಪಟ್ಟಿ ಪ್ರಕ್ರಿಯೆ ಆರಂಭಿಸಬೇಕಿದೆ ಎಂದರು.
ಸುಳ್ಳು ಸುದ್ದಿ ನಂಬಬೇಡಿ: ಈ ನಡುವೆ ಬರ್ಕಾಸ್ತುಗೊಂಡ ಸಮಿತಿಯು ಆಡಳಿತಾಧಿಕಾರಿ ನೇಮಕಕ್ಕೆ ತಡೆ ಕೋರಿ ಹೈ ಕೋರ್ಟಿಗೆ ಮನವಿ ಸಲ್ಲಿಸಿತ್ತು. ಆದರೆ ನ್ಯಾಯಾಲಯವು ಈ ನೇಮಕದ ಕುರಿತು ತಡೆಯಾಜ್ಞೆ ನೀಡಲು ನಿರಾಕರಿಸಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದರ್ಗಾವನ್ನು ವಶಪಡಿಸಿಕೊಳ್ಳಲು ಸರ್ಕಾರ ಕುತಂತ್ರ ನಡೆಸುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಲ್ಲದೆ ವೈಯಕ್ತಿಕವಾಗಿಯೂ ನಿಂದನೆ ಮಾಡಲಾಗುತ್ತಿದೆ. ಜನರು ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗಿದೆ ಎಂದು ಗೂನಡ್ಕ ಮನವಿ ಮಾಡಿದರು.
ದೂರು ಕುರಿತು ಕ್ರಮ: ಉಳ್ಳಾಲ ದರ್ಗಾದ ಹಿಂದಿನ ಆಡಳಿತ ಮಂಡಳಿ ಮೇಲೆ ಹಲವು ದೂರುಗಳು ಬಂದಿವೆ. 1.70 ಕೋಟಿ ರು. ಸರ್ಕಾರಕ್ಕೆ ಪಾವತಿಸಬೇಕಾದ ಸೆಸ್ ಪಾವತಿಸಿಲ್ಲ, ಸಂಸ್ಥೆಯ ಅಧೀನದಲ್ಲಿರುವ 13 ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ 2 ವರ್ಷದಿಂದ ವೇತನ ನೀಡಿಲ್ಲ ಎಂಬಿತ್ಯಾದಿ ದೂರುಗಳಿವೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಡಿ.5ರಂದು ದರ್ಗಾಕ್ಕೆ ನಾನು ಭೇಟಿ ನೀಡಿದಾಗ ಬರ್ಕಾಸ್ತುಗೊಂಡ ಸಮಿತಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮಿತಿಯ ಪದಾಧಿಕಾರಿಗಳು ಮುಖ್ಯ ಕಚೇರಿಯ ಬೀಗ ತೆರೆಯದೆ ದರ್ಗಾದ ವಠಾರದಲ್ಲೇ ಕಾಯುವಂತೆ ಮಾಡಿ ಸರ್ಕಾರಿ ಕೆಲಸ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ. ಅಲ್ಲದೆ, ಸಂಸ್ಥೆಗೆ ಸೇರಿದ ದಾಖಲೆಗಳನ್ನು ಹಸ್ತಾಂತರ ಮಾಡಲು 60 ದಿನಗಳ ಕಾಲಾವಕಾಶ ಕೋರಿ ವಿಳಂಬ ನೀತಿ ಅನುಸರಿಸಿದ್ದು, ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ ಎಂದೂ ಗೂನಡ್ಕ ತಿಳಿಸಿದರು.