Advertisement

ಮಲೇರಿಯಾ ಬಾಧಿತರ ಪಟ್ಟಿಯಲ್ಲಿ ಮಂಗಳೂರಿಗೆ ಮೊದಲ ಸ್ಥಾನ!

02:09 AM Jul 19, 2019 | mahesh |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಲೇರಿಯಾ ಬಾಧಿತರ ಪ್ರಮಾಣ ಇಳಿಕೆಯಾಗುತ್ತಿದ್ದರೂ ರಾಜ್ಯ ಮಟ್ಟದಲ್ಲಿ ಉಭಯ ಜಿಲ್ಲೆಗಳಿಗೆ ಮೊದಲೆರಡು ಸ್ಥಾನ ಖಾಯಂ ಆಗಿದೆ. ಮಂಗಳೂರಿಗಂತೂ ಮೊದಲ ಸ್ಥಾನ!

Advertisement

ಈ ಎರಡೂ ಜಿಲ್ಲೆಗಳಲ್ಲಿ ಹೆಚ್ಚಿರುವ ಅನ್ಯ ರಾಜ್ಯಗಳ ವಲಸೆ ಕಾರ್ಮಿಕರು ರೋಗ ಪ್ರಸರಣದಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದು ಮತ್ತು ಸೊಳ್ಳೆ ಉತ್ಪತ್ತಿಗೆ ಇರುವ ಪೂರಕ ವಾತಾವರಣ ಇದಕ್ಕೆ ಮುಖ್ಯ ಕಾರಣ. ಸಮುದ್ರದ ಹಿನ್ನೀರು ಕೂಡ ಸೊಳ್ಳೆ ಉತ್ಪತ್ತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಳಿಕದ ಸ್ಥಾನ ಕೊಪ್ಪಳ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳದು.

1990ರ ಬಳಿಕ ಮಂಗಳೂರಿನಲ್ಲಿ ನಿರ್ಮಾಣ ಚಟುವಟಿಕೆಗಳು ವೇಗ ಪಡೆದುಕೊಂಡ ಕಾರಣ ವಲಸಿಗರ ಸಂಖ್ಯೆಯೂ ಹೆಚ್ಚಿತು. ಅವರ ದೇಹದಲ್ಲಿರುವ ರೋಗಾಣುಗಳು ಸೊಳ್ಳೆಗಳ ಮೂಲಕ ಇತರರ ದೇಹ ಪ್ರವೇಶಿಸಿ ರೋಗ ವ್ಯಾಪಿಸುತ್ತಿದೆ; ನಿರ್ಮಾಣ ಸ್ಥಳಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿರುವುದೂ ಮಲೇರಿಯಾಕ್ಕೆ ಪೂರಕ ಎಂದು ಮನಪಾ ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ ಮತ್ತು ಉಡುಪಿ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್‌ ಹೇಳುತ್ತಾರೆ.

ಪ್ರಮಾಣ ಇಳಿಕೆ
ಮಂಗಳೂರು ನಗರ ಮಲೇರಿಯಾ ಪ್ರಮಾಣದಲ್ಲಿ ಅಗ್ರಸ್ಥಾನದಲ್ಲಿದ್ದರೂ ಕಳೆದ ವರ್ಷಕ್ಕೆ ಹೋಲಿಸಿ ದರೆ ಈ ಬಾರಿ ಇಳಿಕೆಯಾಗಿದೆ. 2019ರ ಜೂನ್‌ ವರೆಗೆ 814 ಅಧಿಕೃತ ಮಲೇರಿಯಾ ಪ್ರಕರಣ ಕಂಡು ಬಂದಿದ್ದು, ಕ್ಯೂಬಿಸಿ ಪರೀಕ್ಷಾ ವಿಧಾನದ ಪ್ರಕಾರ ನೋಡಿದರೆ ಪ್ರಕರಣ 1,500 ದಾಟಿರುವ ಸಾಧ್ಯತೆ ಇದೆ. ಕ್ಯೂಬಿಸಿ ಪರೀಕ್ಷಾ ವಿಧಾನದಲ್ಲಿ ತತ್‌ಕ್ಷಣ ಫ‌ಲಿತಾಂಶ ಸಾಧ್ಯವಾಗುತ್ತದೆ. ಪ್ರಸ್ತುತ ಈ ವ್ಯವಸ್ಥೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮಾತ್ರವಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ ಕುಮಾರ್‌.

ಮಂಗಳೂರಿನಲ್ಲೇ ಯಾಕೆ ಹೆಚ್ಚು?
ಮಂಗಳೂರಿನಲ್ಲಿ ವಾತಾವರಣದಲ್ಲೂ ತೇವಾಂಶ ಸಾಮಾನ್ಯವಾಗಿ ಹೆಚ್ಚು ಇರುವುದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗಿದೆ.

Advertisement

ಮಂಗಳೂರು ನಗರದಲ್ಲಿ ಕ್ಯೂಬಿಸಿ ಮಲೇರಿಯಾ ಪರೀಕ್ಷಾ ವಿಧಾನ (ಕ್ಯೂಬಿಸಿ) ಪ್ರಕಾರ ಮಲೇರಿಯಾ ಪ್ರಮಾಣ ದಾಖಲು ಮಾಡಲಾಗಿದೆ. ಅದರಂತೆ ಜನವರಿಯಲ್ಲಿ 342 (ಕಳೆದ ವರ್ಷ 431), ಫೆಬ್ರವರಿಯಲ್ಲಿ 182 (281), ಮಾರ್ಚ್‌ನಲ್ಲಿ 180 (329), ಎಪ್ರಿಲ್ನಲ್ಲಿ 117 (292), ಮೇ ತಿಂಗಳಿನಲ್ಲಿ 106 (372), ಜೂನ್‌ನಲ್ಲಿ 166 (741) ಪ್ರಕರಣಗಳು ದಾಖಲಾಗಿವೆ. ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಇಲ್ಲಿಯವರೆಗೆ 35 ಪ್ರಕರಣಗಳು ದಾಖಲಾಗಿವೆ.

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next