Advertisement

Mangalore: ಬೀದಿ ಬದಿ ಅನಧಿಕೃತ ವ್ಯಾಪಾರ-ಪಾಲಿಕೆಯಿಂದ ಟಾಸ್ಕ್ ಫೋರ್ಸ್

06:19 PM Aug 09, 2023 | Team Udayavani |

ಮಹಾನಗರ: ನಗರದಲ್ಲಿ‌ ಅನಧಿಕೃತ ಬೀದಿ ಬದಿ ವ್ಯಾಪಾರ ತಡೆಯುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಕಾರ್ಯೋನ್ಮುಖವಾಗಿದ್ದು, ವಲಯವಾರು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ‌ ಮಾಡಲು ನಿರ್ಧರಿಸಲಾಗಿದೆ.

Advertisement

ಪಾಲಿಕೆಯಿಂದ ಈಗಾಗಲೇ ನಾಲ್ಕು ವಲಯವನ್ನಾಗಿ ವಲಯ-1 ಸುರತ್ಕಲ್‌, ವಲಯ-2 ಕೇಂದ್ರ ಕಚೇರಿ, ವಲಯ-3 ಕದ್ರಿ ಎಂದು ವಿಂಗಡಿಸಲಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ. ಮಹಾನಗರ ಪಾಲಿಕೆ ಈ ಹಿಂದೆಯೇ ಹಲವು ಬಾರಿ ಅನಧಿಕೃತ ಬೀದಿ ಬದಿ ವ್ಯಾಪಾರ ತಡೆಗೆ ಕಾರ್ಯಾಚರಣೆ ನಡೆಸಿತ್ತು. ಆದರೆ ಅದು ಅಷ್ಟೊಂದು ಫಲ ನೀಡಿರಲಿಲ್ಲ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮತ್ತೆ ಅದೇ ಜಾಗದಲ್ಲಿ ಅಂಗಡಿಗಳು ತಲೆ ಎತ್ತುತ್ತಿದ್ದವು. ಇದೀಗ ಪರಿಣಾಮಕಾರಿ ತಡೆಗೆ ಪಾಲಿಕೆಯಿಂದ ಪ್ರತ್ಯೇಕ ತಂಡ ನಿಯೋಜನೆ ಮಾಡಲಾಗುತ್ತಿದೆ.

ಈ ತಂಡದಲ್ಲಿ ಮುಖ್ಯವಾಗಿ ಕಂದಾಯ, ಆರೋಗ್ಯ, ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು, ಜತೆಗೆ ಕಾರ್ಮಿಕರು ಕೂಡ
ಇರಲಿದ್ದಾರೆ. ಇದರ ಜತೆ ಟಿಪ್ಪರ್‌, ಜೆಸಿಬಿ ಮುಖೇನ ಅನಧಿಕೃತ ಅಂಗಡಿಗಳ ತೆರವು ನಡೆಸಲಿದೆ. ನಗರದ ಸ್ಟೇಟ್‌ಬ್ಯಾಂಕ್‌, ಅತ್ತಾವರ, ಮಣ್ಣಗುಡ್ಡೆ, ಚಿಲಿಂಬಿ, ಪಂಪ್‌ವೆಲ್‌ ಸಹಿತ ಹಲವು ಕಡೆಗಳಲ್ಲಿ ಅನಧಿಕೃತ ಅಂಗಡಿಗಳು ಕಾರ್ಯಾಚರಿಸುತ್ತಿದೆ ಎಂದು ಈಗಾಗಲೇ ತೆರವು ನಡೆಸಲಾಗಿತ್ತು. ಇದೀಗ ಈ ಉಪಕ್ರಮ ಮತ್ತಷ್ಟು ಚುರುಕುಗೊಳಿಸಲು ಪಾಲಿಕೆ ನಿರ್ಧಾರ ಮಾಡಿದೆ.

ಮತ್ತೆ ಟೈಗರ್‌ ಕಾರ್ಯಾಚರಣೆ !
ಉದ್ದಿಮೆ ಪರವಾನಗಿ ಪಡೆಯದೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಕಾನೂನು ಬಾಹಿರವಾಗಿ ರಸ್ತೆ ಬದಿ ಯಲ್ಲಿ ಹಾಗೂ ಫುಟ್‌ಪಾತ್‌ಗಳಲ್ಲಿ ಬೀದಿ – ಬದಿ ವ್ಯಾಪಾರಸ್ಥರು ಅನಧಿಕೃತ ವಾಗಿ ಅಂಗಡಿಗಳು, ಗೂಡಂಗಡಿ ಮೂಲಕ ಇತರ ವ್ಯಾಪಾರ ವಹಿವಾಟು ಗಳನ್ನು ನಡೆಸುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಓಡಾಡಲು, ವಾಹನ ಸವಾರನಿಗೆ ರಸ್ತೆತಡೆ ಉಂಟಾಗಿ ತೊಂದರೆ ಯಾಗುತ್ತಿರುವ ಬಗ್ಗೆ ಪಾಲಿಕೆಗೆ ಈಗಾಗಲೇ ಸಾರ್ವಜನಿಕರು ದೂರುತ್ತಿದ್ದಾರೆ. ಈ ಹಿನ್ನೆಲೆ ಯಲ್ಲಿ ಇದೀಗ ಮತ್ತೂಮ್ಮೆ ಟೈಗರ್‌ ಕಾರ್ಯಾಚರಣೆ ನಡೆಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ ಎನ್ನುತ್ತಾರೆ ಅಧಿಕಾರಿಗಳು.

ಸಭೆ ನಡೆಸಿ ಪರಿಹರಿಸಲಿ
ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮಿ¤ಯಾಝ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರದಿಂದ ತೊಂದರೆ ಯಾಗುತ್ತಿದ್ದರೆ ಪಾಲಿಕೆಯಿಂದ ಪಟ್ಟಣ ವ್ಯಾಪಾರ ಸಮಿತಿ ಸಭೆ ಆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಆದರೆ ವ್ಯಾಪಾರಿಗಳಿಗೆ ಇನ್ನೂ ಸಮರ್ಪಕವಾಗಿ ಐ.ಡಿ. ಕಾರ್ಡ್‌ ಅನ್ನೇ ವಿತರಣೆ ಮಾಡಲಿಲ್ಲ. ಬಳಿಕ ಐದು ವಾರ್ಡ್‌ಗೆ ಒಂದರಂತೆ ಬೀದಿ ಬದಿ ವ್ಯಾಪಾರ ವಲಯ ನಿಗದಿ ಮಾಡಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಒಂದೂ ವಲಯ ನಿಗದಿ ಗೊಂಡಿಲ್ಲ. ಸ್ಟೇಟ್‌ಬ್ಯಾಂಕ್‌, ಮೈದಾನ ರಸ್ತೆ, ಲೇಡಿಗೋಶನ್‌ ಆಸ್ಪತ್ರೆ ಎದುರಿನ ರಸ್ತೆ, ಸೆಂಟ್ರಲ್‌ ಮಾರುಕಟ್ಟೆ ಸುತ್ತಮುತ್ತ ವಲಯ ನಿಗದಿಗೆ ನಾವು ಪಾಲಿಕೆಗೆ ಪ್ರಸ್ತಾವನೆ ನೀಡಿದ್ದೆವು. 300ರಷ್ಟು ಬೀದಿ ಬದಿ ವ್ಯಾಪಾರಸ್ಥರಿಗೆ ಇಂದಿರಾ ಕ್ಯಾಂಟಿನ್‌ ಬಳಿ ಜಾಗ ನಿಗದಿ ಮಾಡಿ ಎಂದು ಕೇಳುತ್ತಿದ್ದೇವೆ. ಮೂಲ ವ್ಯವಸ್ಥೆಯೊಂದಿಗೆ ಸ್ಥಳಾವಕಾಶ ನೀಡಿದರೆ ಅಲ್ಲಿಗೆ ತೆರಳಲು ಸಿದ್ಧರಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಮಾಡುವುದು ನಮ್ಮ ಉದ್ದೇಶವಲ್ಲ’ ಎಂದು ತಿಳಿಸಿದ್ದಾರೆ.

Advertisement

ಟಾಸ್ಕ್ ಫೋರ್ಸ್ ನಲ್ಲಿ ಪೊಲೀಸರು‌
ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬೀದಿ ಬದಿ ವ್ಯಾಪಾರಸ್ಥರು ಹಾಗೂ ವಲಸೆ ಕಾರ್ಮಿಕರು ಹೆಚ್ಚಾಗುತ್ತಿದ್ದಾರೆ. ಅವರನ್ನು
ತೆರವುಗೊಳಿಸಲು ಪಾಲಿಕೆ ನಿರ್ಧರಿಸಿ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ.‌ ಕಾರ್ಯಾಚರಣೆಯ ವೇಳೆ ಹಲವು ಕಡೆಗಳಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವ ಘಟನೆ ಅಲ್ಲಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಪೊಲೀಸರನ್ನು ನಿಯೋಜನೆ ಮಾಡುವ ನಿಟ್ಟಿನಲ್ಲಿ ಪಾಲಿಕೆಯು ಪೊಲೀಸ್‌ ಇಲಾಖೆಗೆ ಮನವಿ ಮಾಡಲು ನಿರ್ಧಾರ ಮಾಡಿದೆ.

ಸೂಕ್ತ ಕ್ರಮ
ಅನಧಿಕೃತ ಬೀದಿ ಬದಿ ವ್ಯಾಪಾರಸ್ಥರ ತಡೆಗೆ ಪಾಲಿಕೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಫುಟ್‌ಪಾತ್‌ ಸಹಿತ ರಸ್ತೆ ಬದಿಗಳಲ್ಲಿ ಅನಧಿಕೃತ ವ್ಯಾಪಾರ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರಿಂದಲೂ ದೂರುಗಳನ್ನು ಬರುತ್ತಿದೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ.
ಆನಂದ್‌ ಸಿ.ಎಲ್‌., ಪಾಲಿಕೆ ಆಯುಕ್ತರು

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next