Advertisement
ಮುಂದಿನ 3 ದಿನಗಳ ಕಾಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂ.19ರಿಂದ 22ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರದಂದು ಮಂಗಳೂರಿನಲ್ಲಿ 30.2 ಡಿ.ಸೆ. ಗರಿಷ್ಠ ಮತ್ತು 24.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ನುಗ್ಗಿದ ಮಳೆ ನೀರು
ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆ ವೇಳೆ ಭಾರೀ ಮಳೆಯಾಗಿದ್ದು, ಅಸಮರ್ಪಕ ಚರಂಡಿಯಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವ ಪರಿಣಾಮ ವಾಹನ ಸವಾರರು ಸಂಕಷ್ಟ ಅನುಭವಿಸಿದ್ದಾರೆ. ಶುಕ್ರವಾರ ರಾತ್ರಿಯೂ ಬಾರೀ ಮಳೆಯಾಗಿದೆ. ಶನಿವಾರ ಸಂಜೆ ವೇಳೆ ಆರಂಭಗೊಂಡ ಮಳೆ ಸುಮಾರು ಮೂರು ಗಂಟೆಗಳ ಕಾಲ ಸುರಿದಿದೆ. ಸತತವಾಗಿ ಸುರಿದ ಬಾರೀ ಮಳೆಗೆ ಹಳ್ಳ, ತೋಡುಗಳು ತುಂಬಿ ಹರಿದಿದ್ದು, ತೋಡಿನ ಬದಿಯ ಕೃಷಿ ಭೂಮಿ, ತೋಟಗಳಿಗೆ ನೀರು ನುಗ್ಗಿದೆ. ರಾಜ್ಯ ಹೆದ್ದಾರಿಯಲ್ಲೇ ಮಳೆ ನೀರು ಹರಿದಿತ್ತು. ಸುಳ್ಯ-ಬೆಳ್ಳಾರೆ, ಬೆಳ್ಳಾರೆ- ನಿಂತಿಕಲ್ಲು- ಪಂಜ, ಪಂಜ-ಕಡಬ ರಾಜ್ಯ ಹೆದ್ದಾರಿ ಸೇರಿದಂತೆ ಹಲವೆಡೆ ರಾಜ್ಯ ಹೆದ್ದಾರಿಯಲ್ಲಿ ಸಹಿತ ಗ್ರಾಮೀಣ ರಸ್ತೆಯಲ್ಲೂ ಮಳೆ ನೀರು ಹರಿಯುತ್ತಿತ್ತು.
ಸುಳ್ಯ, , ಕನಕಮಜಲು, ಅರಂತೋಡು, ಕಲ್ಲುಗುಂಡಿ, ಸಂಪಾಜೆ, ಬೆಳ್ಳಾರೆ, ನಿಂತಿಕಲ್ಲು, ಐವರ್ನಾಡು, ಕಲ್ಮಡ್ಕ, ಪಂಜ, ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಳ್ಪ, ಗುತ್ತಿಗಾರು, ಬಿಳಿನೆಲೆ, ಕಡಬದ ಕಲ್ಲುಗುಡ್ಡೆ, ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆ ಭಾಗದಲ್ಲೂ ಭಾರೀ ಮಳೆಯಾಯಿತು.
Related Articles
ಉಡುಪಿ ಜಿಲ್ಲೆಯಲ್ಲಿ ಶನಿವಾರ ಬಿಸಿಲು, ಮಳೆ ವಾತಾವರಣ ಇದ್ದು, ಹಲವೆಡೆ ಬಿಟ್ಟುಬಿಟ್ಟು ಮಳೆಯಾಗಿದೆ. ಉಡುಪಿ, ಕುಂದಾಪುರ, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಬೈಂದೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ.
Advertisement
ಪರ್ಕಳ, ಮಣಿ ಪಾಲ, ಮಲ್ಪೆ ಸುತ್ತಮುತ್ತ ಜಿಟಿಜಿಟಿ ಮಳೆ ಸುರಿದಿದೆ. ಶನಿವಾರ ಬೆಳಗ್ಗೆ 8.30ರ ಹಿಂದಿನ 24 ತಾಸು 13.3 ಮಿ. ಮೀ. ಮಳೆಯಾಗಿದ್ದು, ಬೈಂದೂರು, ಕಾರ್ಕಳ, ಹೆಬ್ರಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದೆ.