Advertisement

ಇನ್ನೂ ಹಳಿಗೇರದ ಮಂಗಳೂರು –ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು

12:07 AM Jan 05, 2023 | Team Udayavani |

ಸುಬ್ರಹ್ಮಣ್ಯ: ಕರಾವಳಿಯ ಪ್ರಮುಖ ನಗರಗಳ ಮೂಲಕ ರೈಲು ಮಾರ್ಗ ಹಾದು ಹೋಗಿದ್ದರೂ ಸ್ಥಳೀಯ ಜನತೆಯ ಅನುಕೂಲಕ್ಕೆ ತಕ್ಕಂತೆ ಪ್ಯಾಸೆಂಜರ್‌ ರೈಲು ಓಡಾಡುತ್ತಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಮಂಗಳೂರು – ಸುಬ್ರಹ್ಮಣ್ಯ ನಡುವೆ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್‌ ರೈಲು ಓಡಿಸಬೇಕೆಂಬ ಬೇಡಿಕೆ ಇದ್ದರೂ ಇನ್ನೂ ಮನ್ನಣೆ ಸಿಕ್ಕಿಲ್ಲ.

Advertisement

ಕರಾವಳಿಯ ಪ್ರಮುಖ ನಗರವಾಗಿರುವ ಮಂಗಳೂರಿಗೆ ಈ ಭಾಗತದಿಂದ ನಿತ್ಯ ಸಾವಿರಾರು ಜನ ಸ್ವಂತ ವಾಹನ ಅಥವಾ ಬಸ್‌ ಮೂಲಕ ಪ್ರಯಾಣಿಸುತ್ತಾರೆ. ಈ ದಾರಿಯಾಗಿ ನಿತ್ಯ ಎರಡೂ ಹೊತ್ತು ಪ್ಯಾಸೆಂಜರ್‌ ರೈಲು ಸಂಚರಿಸಿದರೆ ಅಷ್ಟೂ ಮಂದಿಗೆ ಪ್ರಯೋಜನವಾಗಲಿದೆ. ಪ್ರಯಾಣದ ವೆಚ್ಚವೂ ಕಡಿಮೆಯಾಗುವ ಜತೆಗೆ ರಸ್ತೆಯಲ್ಲಿ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ.

1979ರಲ್ಲಿ ಮಂಗಳೂರು – ಹಾಸನ – ಬೆಂಗಳೂರು ಮೀಟರ್‌ ಗೇಜ್‌ ಮಾರ್ಗದಲ್ಲಿ ರೈಲು ಓಡಾಟ ಪ್ರಾರಂಭವಾಯಿತು. ಆಗ ಸುಬ್ರಹ್ಮಣ್ಯ – ಮಂಗಳೂರು ಮಧ್ಯೆ ಪ್ರತೀ ದಿನ ಎರಡೂ ಹೊತ್ತು ರೈಲು ಸಂಚರಿಸುತ್ತಿತ್ತು. 1995ರಲ್ಲಿ ಬ್ರಾಡ್‌ ಗೇಜ್‌ಗೆ ಪರಿವರ್ತನೆ ಉದ್ದೇಶದಿಂದ ರೈಲುಗಳ ಸಂಚಾರವನ್ನು ಅಮಾನತಿನಲ್ಲಿ ಇಡಲಾಯಿತು. 2005ರಲ್ಲಿ ಗೇಜ್‌ ಪರಿವರ್ತನೆ ಆದ ಬಳಿಕ ಮಂಗಳೂರು – ಪುತ್ತೂರು ಮಧ್ಯೆ ಪ್ಯಾಸೆಂಜರ್‌ ರೈಲನ್ನು ಸಂಜೆ ಮತ್ತು ರಾತ್ರಿ ಪ್ರಾರಂಭಿಸಲಾಯಿತು.

ಸ್ಥಳೀಯರಿಗೆ ಅನುಕೂಲ:

ಮಂಗಳೂರು – ಪುತ್ತೂರು ಮಧ್ಯೆ ಲೋಕಲ್‌ ರೈಲು ಬೆಳಗ್ಗೆ, ಸಂಜೆ ಓಡುತ್ತಿದೆ. ಇದನ್ನು ಸುಬ್ರಹ್ಮಣ್ಯ ವರೆಗೆ ವಿಸ್ತರಿಸಿದಲ್ಲಿ ನೆಟ್ಟಣ, ಕೋಡಿಂಬಾಳ, ಕಾಣಿಯೂರು, ಎಡಮಂಗಲ, ನರಿಮೊಗರು ಇತ್ಯಾದಿ ಪ್ರದೇಶಗಳ ಜನತೆಗೆ ಪೂರಕವಾಗಲಿದೆ ಎಂಬುದು ಹೋರಾಟಗಾರ ಮಾತು.

Advertisement

18 ವರ್ಷಗಳ ಮನವಿಗಿಲ್ಲ ಬೆಲೆ!  :

ಗೇಜ್‌ ಪರಿವರ್ತನೆ ಬಳಿಕ ಒಂದು ವರ್ಷದ ಅನಂತರ ಮಂಗಳೂರು – ಸುಬ್ರಹ್ಮಣ್ಯ ನಡುವೆ ಅಲ್ಲಿನ ಪ್ರಯಾಣಿಕರಿಗೆ ಉಪಯೋಗವಿಲ್ಲದ ಸಮಯಕ್ಕೆ ರೈಲನ್ನು ಪ್ರಾರಂಭಿಸಲಾಯಿತು. ಆದರೆ ಹಿಂದೆ ಚಲಿಸುತ್ತಿದ್ದ (ಮೀಟರ್‌ ಗೇಜ್‌ ವೇಳೆ) ನಿತ್ಯ ಯಾನಿಗಳಿಗೆ ಅತ್ಯಂತ ಅನುಕೂಲವಾಗಿದ್ದ ಬೆಳಗ್ಗೆ ಸುಬ್ರಹ್ಮಣ್ಯದಿಂದ ಹೊರಡುವ ಮತ್ತು ರಾತ್ರಿ ಸುಬ್ರಹ್ಮಣ್ಯಕ್ಕೆ ಮರಳುವ ರೈಲು ಹಳಿಗಳ ಮೇಲೆ ಏರಲೇ ಇಲ್ಲ. ಹಾಗಾಗಿ ಈ ಭಾಗದ ಜನರು 18 ವರ್ಷಗಳಿಂದ ಜನ ಪ್ರತಿನಿಧಿಗಳು, ರೈಲ್ವೇ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಫ‌ಲಿತಾಂಶ ಮಾತ್ರ ಶೂನ್ಯ ಎನ್ನುತ್ತಾರೆ ಸ್ಥಳೀಯರು.

ಈ ನಡುವೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ, ಈಗ ಬೆಳಗ್ಗೆ ಮತ್ತು ಸಂಜೆ ಸಂಚರಿಸುತ್ತಿರುವ ಮಂಗಳೂರು – ಪುತ್ತೂರು ಲೋಕಲ್‌ ರೈಲನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸುವಂತೆ ಹಾಗೂ ಸಂಜೆ ಸಂಚರಿಸುವ ಮಂಗಳೂರು – ಪುತ್ತೂರು ರೈಲನ್ನು ರಾತ್ರಿ ಸುಬ್ರಹ್ಮಣ್ಯಕ್ಕೆ ಬಂದು ಮರುದಿನ ಮಂಗಳೂರಿಗೆ ತೆರಳುವಂತೆ ಮಾಡಬೇಕೆಂದು ಮನವಿ ಸಲ್ಲಿಸಿದ್ದರು. ಈ

ರೈಲನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸಿದರೆ ಈ ಮಾರ್ಗದಲ್ಲಿ ಗೂಡ್ಸ್‌ ರೈಲುಗಳ ಸಂಚಾರಕ್ಕೆ ತೊಂದರೆ ಆಗುತ್ತದೆ ಮತ್ತು ಘಾಟಿಯಲ್ಲಿ ಭೂ ಕುಸಿತವಾದರೆ ಅದನ್ನು ಸರಿಪಡಿಸುವ ಉಪಕರಣಗಳನ್ನು ಹೊತ್ತ ರೈಲಿನ ಸಂಚಾರಕ್ಕೂ ತೊಂದರೆ ಆಗುತ್ತದೆ ಎಂಬ ನೆಪ ಒಡ್ಡಿ ಈ ಪ್ರಸ್ತಾವನೆ ಕಾರ್ಯ ಸಾಧುವಲ್ಲ ಎಂದು ತೀರ್ಮಾನ ಮಾಡಲಾಗಿದೆ ಎಂದು ಇಲಾಖೆ ಉತ್ತರಿಸಿದೆ.

ದಶಕಕ್ಕೂ ಹಿಂದಿನ ಬೇಡಿಕೆಯಾದ ಮಂಗಳೂರು – ಪುತ್ತೂರು ನಡುವಿನ ಪ್ಯಾಸೆಂಜರ್‌ ರೈಲನ್ನು ಸಂಜೆ ಮತ್ತು ಬೆಳಗ್ಗೆ ಸುಬ್ರಹ್ಮಣ್ಯ ವರೆಗೆ ವಿಸ್ತರಣೆ ಮಾಡಬೇಕು. ಇದರಿಂದ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.ವಿನಯಚಂದ್ರ ಬಾಕಿಜಾಲು ಎಡಮಂಗಲ, ರೈಲ್ವೇ ಹೋರಾಟಗಾರ

ಮಂಗಳೂರು-ಪುತ್ತೂರು ನಡುವೆ ಬೆಳಗ್ಗೆ, ಸಂಜೆ ಸಂಚರಿಸುವ ರೈಲನ್ನು ಸುಬ್ರಹ್ಮಣ್ಯ ವರೆಗೆ ವಿಸ್ತರಿಸಲು ಮನವಿ ಸಲ್ಲಿಕೆಯಾಗಿದೆ. ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಅವರು ಹೇಳಿರುವ ಸಮಯಕ್ಕೆ ಸಾಕಷ್ಟು ಪ್ರಯಾಣಿಕರು ಸಿಗುತ್ತಿಲ್ಲ. ಮನವಿ ಸಲ್ಲಿಸಿರುವ ಸಂಘದವರ ಜತೆ ಮತ್ತೂಮ್ಮೆ ಮಾತುಕತೆ ನಡೆಸುವಂತೆ ಆಪರೇಟಿಂಗ್‌ ವಿಭಾಗದವರಿಗೆ ಸೂಚಿಸಲಾಗಿದೆ.ಮಂಜುನಾಥ್‌, ಸೀನಿಯರ್‌ ಡಿಸಿಎಂ ರೈಲ್ವೇ ಇಲಾಖೆ 

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next