Advertisement

ಮಂಗಳೂರು ದಕ್ಷಿಣ: ಶೈಕ್ಷಣಿಕ ಅಭಿವೃದ್ಧಿಗೆ 221 ಕೋ.ರೂ ಅನುದಾನ: ಪ್ರೊ|ಎಂ.ಬಿ.ಪುರಾಣಿಕ್‌

05:00 PM May 08, 2023 | Team Udayavani |

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ಸಮಗ್ರ ಸುಧಾರಣೆಗೆ ಕಳೆದ 5 ವರ್ಷಗಳಲ್ಲಿ 221 ಕೋ.ರೂ.ಗಳಿಗೂ ಅಧಿಕ ಅನುದಾನ ಲಭಿಸಿದೆ. ನಗರದ ಅನೇಕ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಯಾಗಿದೆ. ಶಾಸಕ ವೇದವ್ಯಾಸ ಕಾಮತ್‌ ಅವರ ಪುಯತ್ನದ ಫಲವಾಗಿ ಬೃಹತ್‌ ಮೊತ್ತದ ಅನುದಾನ ಮಂಗಳೂರು ನಗರದ ಶೈಕ್ಷಣಿಕ ಅಭಿವೃದ್ಧಿಗೆ ದೊರೆತಿರುವುದು ಶ್ಲಾಘನೀಯ ಎಂದು ತುಳುನಾಡು ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಪ್ರೊ|ಎಂ.ಬಿ.ಪುರಾಣಿಕ್‌ ಹೇಳಿದರು.

Advertisement

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಸರಕಾರಿ ಶಾಲೆಗಳಲ್ಲಿ ಇ- ಸ್ಮಾರ್ಟ್‌ ಸ್ಕೂಲ್‌ ಯೋಜನೆಯನ್ನು 60 ಕೋ ರೂ ಗೂ ಹೆಚ್ಚಿನ ಅನುದಾನದಲ್ಲಿ 13 ಶಾಲೆಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಪುರಭವನ ಮುಂಭಾಗದ ಅಭ್ಯಾಸಿ ಶಾಲೆಯ ಆವರಣದಲ್ಲಿ ಬೊಕ್ಕಪಟ್ಟಣ ಪಿಯು ಕಾಲೇಜು ಅಭಿವೃದ್ಧಿಗೆ 5.57 ಕೋ.ರೂ. ಅನುದಾನ ನೀಡಲಾಗಿದೆ. ಇದರಲ್ಲಿ 17 ಕೊಠಡಿ, ಶೌಚಾಲಯ ನಿರ್ಮಾಣ ಮಾಡಲಾಗಿದೆ. ವಿಶಾಲ ಆಡಿಟೋರಿಯಂ ಕೂಡ ನಿರ್ಮಿಸಲಾಗಿದೆ. 2 ಕೋ.ರೂ. ವೆಚ್ಚದಲ್ಲಿ ನಾಲ್ಯಪದವಿಗೆ ಪಿಯು ಕಾಲೇಜು ಮಂಜೂರಾಗಿದೆ ಎಂದರು.

ಉನ್ನತ ಶಿಕ್ಷಣ ಇಲಾಖೆ ಮೂಲಕ 6.15 ಕೋ.ರೂ. ವೆಚ್ಚದಲ್ಲಿ ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಕಟ್ಟಡ ನಿರ್ಮಾಣ ಆಗಿದೆ. ಸುಮಾರು 75 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ದಯಾನಂದ ಪೈ- ಸತೀಶ್‌ ಪೈ ಕಾಲೇಜಿಗೆ 8 ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲಾಗಿದೆ ಎಂದರು.

ಮಂಗಳೂರು ವಿವಿ ಮಾಜಿ ಸಿಂಡಿಕೇಟ್‌ ಸದಸ್ಯ ರಮೇಶ್‌ ಕೆ. ಅವರು ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 9.82 ಕೋ.ರೂ. ವೆಚ್ಚದಲ್ಲಿ ಪಿವಿಎಸ್‌ ಬಳಿ ಕುದು¾ಲ್‌ ರಂಗರಾವ್‌ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದೆ. ಶಿಕ್ಷಣ ಇಲಾಖೆ ಮೂಲಕ 2.35 ಕೋ.ರೂ ವೆಚ್ಚದಲ್ಲಿ ಕುದ್ರೋಳಿ ವಾರ್ಡ್‌ನ ಸರಕಾರಿ ಮೌಲಾನಾ ಆಜಾದ್‌ ಶಾಲೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ. 20 ಕೋ.ರೂ ವೆಚ್ಚದಲ್ಲಿ ವಕ್ಫ್ ಬೋರ್ಡ್‌ ಮೂಲಕ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಎರಡು ಪ್ರತ್ಯೇಕ ಸ್ಥಳದಲ್ಲಿ ಹಾಸ್ಟೆಲ್‌ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.

Advertisement

ಉನ್ನತ ಶಿಕ್ಷಣ (ತಾಂತ್ರಿಕ) ಇಲಾಖೆ ಮೂಲಕ ಸರಕಾರಿ ಬಾಲಕರ ಐಟಿಐ ಕಾಲೇಜು ಹಾಗೂ ಬಾಲಕಿಯರ ಐಟಿಐ ಕಾಲೇಜುಗಳಿಗೆ ತಲಾ 33 ಹಾಗೂ 34 ಕೋ.ರೂ ಮೊತ್ತದ ಅನುದಾನ ಕಲ್ಪಿಸಲಾಗಿದೆ. 28.50 ಕೋ.ರೂ ವೆಚ್ಚದಲ್ಲಿ ಜರ್ಮನ್‌ ಟೆಕ್ನಾಲಜಿ ಅಡಿಯಲ್ಲಿ ಸರಕಾರಿ ಐಟಿಐ ಕಾಲೇಜು ಅಭಿವೃದ್ಧಿಪಡಿಸಲಾಗಿದೆ. ಸ್ಕೂಲ್‌ ಝೋನ್‌ ಪರಿಕಲ್ಪನೆ, ಶಾಲಾ ಸಂರಕ್ಷಣಾ ವಲಯ, ಸಂಚಾರಿ ಸುಧಾರಣೆ ಸೈನ್‌ ಬೋರ್ಡ್‌ ಅಳವಡಿಕೆ ಮತ್ತು ಇತರ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ ಎಂದರು.

ಮೂರು ಕಾಲೇಜುಗಳಿಗೆ ನ್ಯಾಕ್‌ “ಎ’ ಗ್ರೇಡ್‌ ಮಾನ್ಯತೆ
ಬಲ್ಮಠ ಪದವಿ ಕಾಲೇಜು, ಕಾರ್‌ಸ್ಟ್ರೀಟ್‌ ಕಾಲೇಜು ಹಾಗೂ ಹಂಪನಕಟ್ಟೆ ಕಾಲೇಜುಗಳಿಗೆ ನ್ಯಾಕ್‌ನಿಂದ “ಎ’ ಗ್ರೇಡ್‌ ಮಾನ್ಯತೆ ಲಭಿಸಿದೆ. ಮಂಗಳೂರು ನಗರದ ಇತಿಹಾಸದಲ್ಲೇ ಮೂರು ಕಾಲೇಜುಗಳಿಗೆ ಏಕಕಾಲದಲ್ಲಿ “ಎ’ ಗ್ರೇಡ್‌ ಲಭಿಸಿರುವುದು ಇದೇ ಮೊದಲು. ಶಾಸಕ ವೇದವ್ಯಾಸ್‌ ಕಾಮತ್‌ ಅವರ ಪರಿಶ್ರಮದ ಫಲವಾಗಿ ಮೂರು ಕಾಲೇಜುಗಳಲ್ಲಿ ಅಳವಡಿಸಿದ ಮೂಲಭೂತ ಸೌಲಭ್ಯದ ಪರಿಣಾಮ ಗ್ರೇಡ್‌ ಪಡೆಯಲು ಸಾಧ್ಯವಾಗಿದೆ ಎಂದು ಪ್ರೊ|ಎಂ.ಬಿ.ಪುರಾಣಿಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next