Advertisement
35 ವರ್ಷಗಳ ಕಾಲ ಸರಕಾರಿ ಅಧಿಕಾರಿಯಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಆಡಳಿತಾನುಭವ ಹೊಂದಿರುವ ಲೋಬೊ ಅವರು 2013ರ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು.
ರಾಜಕಾರಣಿಯಾಗಿ “ನನಗೆ ಅಭಿವೃದ್ಧಿಯ ರಾಜಕೀಯವಷ್ಟೇ ಗೊತ್ತು’ ಎನ್ನುವ ಲೋಬೋ, ಮಂಗಳೂರನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ ರಾಷ್ಟ್ರದಲ್ಲೇ ಅತ್ಯುತ್ತಮ ನಗರವನ್ನಾಗಿ ಪರಿವರ್ತಿಸುವ ಸಂಕಲ್ಪದೊಂದಿಗೆ ದುಡಿದಿದ್ದರು. ಎಲ್ಲ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಕ್ಷೇತ್ರದ ಕೆಲವು ಮತದಾರರ ಅಭಿಪ್ರಾಯ.
Related Articles
Advertisement
ಮತ್ತಷ್ಟು ಅಭಿವೃದ್ಧಿಯ ಆಶಯಮಂಗಳೂರಿಗೆ ಸಂಬಂಧಿಸಿದಂತೆ, ರಾಷ್ಟ್ರದಲ್ಲೇ ಪ್ರಥಮ ಎನ್ನಲಾದ 3ಡಿ ಪ್ಲಾನೆಟೋರಿಯಂ (ತಾರಾಲಯ) 36 ಕೋಟಿ ರೂ. ವೆಚ್ಚದಲ್ಲಿ ಪಿಲಿಕುಳದಲ್ಲಿ ನಿರ್ಮಾಣಗೊಂಡಿದ್ದು, ಅದರ ಉದ್ಘಾಟನೆಯೂ 2018ರ ಮಾರ್ಚ್ 1ರಂದು ನೆರವೇರಿತ್ತು. ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ, ಪ್ರವಾಸೋದ್ಯಮ ಸಹಿತ ಇನ್ನೂ ಅನೇಕ ಯೋಜನೆಗಳ ಅನುಷ್ಠಾನ ಜಾರಿಯಲ್ಲಿದೆ. ಮಂಗಳೂರು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ 6ನೇ ನಗರ. ಕರಾವಳಿಯ ಪ್ರಮುಖ ವಾಣಿಜ್ಯ ನಗರಿಯಾಗಿರುವ ಮಂಗಳೂರನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಆಶಯವನ್ನು ಮರು ಆಯ್ಕೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಅವರು ಬೆಳಗ್ಗೆ ನಗರದ ವಿವಿಧ ಪೂಜಾ ಸ್ಥಳಗಳಿಗೆ ಭೇಟಿ ನೀಡಿ ಧಾರ್ಮಿಕ ಸಾಮರಸ್ಯ ಕಾಪಾಡಲು ಸಾಧ್ಯವಾಗುವಂತೆ ಹಾಗೂ ತನ್ಮೂಲಕ ಮಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಕೋರಿ ಪ್ರಾರ್ಥನೆ ಸಲ್ಲಿಸಿದರು. ಮತ ಯಾಚನೆ ಹಾಗೂ ಪ್ರಚಾರ ಕಾರ್ಯವನ್ನೂ ಲೋಬೋ ಚುರುಕುಗೊಳಿಸಿದ್ದಾರೆ. ಈಗಾಗಲೇ ಮನೆ-ಮನೆಗೆ ಭೇಟಿ ನೀಡಿ ಮತದಾರರ ಮನ ಗೆಲ್ಲುವತ್ತ ಕಾರ್ಯ ನಿರತರಾಗಿದ್ದಾರೆ.